ಕೇವಲ 10ನೇ ಕ್ಲಾಸ್ ಓದಿದ್ರೂ ಕ್ಲಿನಿಕ್ ಗೆ ಅನುಮತಿ ಕೋರಿದ ನಕಲಿ ಡಾಕ್ಟರ್: ಹೈಕೋರ್ಟ್ ಗರಂ , ಅಭಿಯಾನಕ್ಕೆ ಸೂಚನೆ
ಬೆಂಗಳೂರು: ರಾಜ್ಯದಲ್ಲಿ ನಕಲಿ ಡಾಕ್ಟರ್ ಗಳ ಹಾವಳಿಗೆ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಅನಾರೋಗ್ಯಕ್ಕೆ ತುತ್ತಾಗುವ ಅಮಾಯಕ ರೋಗಿಗಳನ್ನು ವಂಚಿಸುತ್ತಿರುವ ಹಾಗೂ ಜೀವಕ್ಕೆ ಅಪಾಯಕಾರಿಯಾಗಿರುವ ನಕಲಿ ವೈದ್ಯರು ನಡೆಸುತ್ತಿರುವ ಕ್ಲಿನಿಕ್ ಗಳನ್ನು ಗುರುತಿಸಿ ಮತ್ತು ತಕ್ಷಣ ಕ್ರಮಕ್ಕೆ ಮುಂದಾಗಿ ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ತಾನು 10ನೇ ಕ್ಲಾಸ್ ಮಾತ್ರ ಓದಿದ್ದು ಎಂದು ಒಪ್ಪಿಕೊಂಡಿದ್ದರೂ ತನಗೆ ಕ್ಲಿನಿಕ್ ತೆರೆಯಲು ಅವಕಾಶ ನೀಡಬೇಕು ಎಂದು ನಕಲಿ ವೈದ್ಯರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ. ಅಲ್ಲದೆ, ಜನರ ಜೀವದ ಜೊತೆಗೆ ಚೆಲ್ಲಾಟವಾಡುವ ಇಂತಹ ನಕಲಿ ವೈದ್ಯರ ವಿರುದ್ಧ ರಾಜ್ಯವ್ಯಾಪಿ ಅಭಿಯಾನ ನಡೆಸುವಂತೆ ಸೂಚನೆ ನೀಡಿದೆ.
10ನೇ ಕ್ಲಾಸ್ ಪಾಸ್ ಆಗಿದ್ದ ಕೆ.ಆರ್. ಪೇಟೆಯ ಎ.ಎ. ಮುರಳೀಧರ ಸ್ವಾಮಿ, ತಾನು ನಡೆಸುತ್ತಿರುವ ಲಕ್ಷ್ಮಿ ಕ್ಲಿನಿಕ್ನ್ನು ಕರ್ನಾಟಕ ವೈದ್ಯಕೀಯ ಖಾಸಗಿ ಕಂಪೆನಿಗಳ ಕಾಯ್ದೆಯಡಿ ನೋಂದಣಿ ಮಾಡಲು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಜಾಗೊಳಿಸಿದ ನ್ಯಾಯಪೀಠವು , ತಮ್ಮನ್ನು ತಾವು ವೈದ್ಯರೆಂದು ಬಿಂಬಿಸಿಕೊಳ್ಳುವ ಈ ನಕಲಿ ವೈದ್ಯರು, ದೂರದ ಪ್ರದೇಶಗಳಲ್ಲಿ ಚಿಕಿತ್ಸಾಲಯಗಳನ್ನು ತೆರೆದು ಅಮಾಯಕ ರೋಗಿಗಳನ್ನು ವಂಚಿಸುವುದರ ಮೂಲಕ ಮುಗ್ಧ ಗ್ರಾಮೀಣ ಜನರ ಜೀವಕ್ಕೆ ಅಪಾಯವನ್ನುಂಟುಮಾಡುತ್ತಿದ್ದಾರೆ. ಇಂತಹ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತುವೆ. ಇದರಿಂದ ಎಲ್ಲೆಡೆ ಇಂತಹ ಕ್ಲಿನಿಕ್ ಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ, ತಮ್ಮನ್ನು ತಾವು ವೈದ್ಯರೆಂದು ಬಿಂಬಿಸಿಕೊಳ್ಳುವ ವ್ಯಕ್ತಿಗಳೇ ಇವುಗಳನ್ನು ತೆರೆಯುತ್ತಿದ್ದಾರೆ. ಇಂತಹ ನಕಲಿ ವೈದ್ಯರ ವಿರುದ್ದ ಕ್ರಮ ಕೈಗೊಳ್ಳಿ ಎಂದು ನ್ಯಾಯಪೀಠ ತಿಳಿಸಿತು.
ಅರ್ಜಿದಾರರು ತಮ್ಮನ್ನು ವೈದ್ಯ ಎಂದು ಸಂಬೋಧಿಸಿಕೊಂಡಿದ್ದಾರೆ. ಆದರೆ, ಈತ ತಾನೊಬ್ಬ ವೈದ್ಯ ಎಂಬುದಕ್ಕೆ ಯಾವುದೇ ದಾಖಲೆಯನ್ನು ಹಾಜರುಪಡಿಸಿಲ್ಲ. ಮೇಲಾಗಿ, ಈತನನ್ನು ಪ್ರತಿನಿಧಿಸಿದ ವಕೀಲರೇ, ಅರ್ಜಿದಾರರು 10ನೇ ಕ್ಲಾಸ್ ಪಾಸ್ ಆಗಿದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂಬುದನ್ನು ಹೈಕೋರ್ಟ್ ಪೀಠ ಗಮನಿಸಿತು.
ವೈದ್ಯಕೀಯದ ಯಾವುದೇ ವಿಭಾಗದಲ್ಲೂ ಅಧ್ಯಯನ ಮಾಡಿರುವ, ವೈದ್ಯರ ಅರ್ಹತೆ ಪ್ರತಿಬಿಂಬಿಸುವ ಯಾವುದೇ ಪ್ರಮಾಣಪತ್ರವನ್ನು ಸಲ್ಲಿಸಲು ಅವರು ವಿಫಲರಾಗಿದ್ದಾರೆ ಎಂದು ಅರ್ಜಿದಾರರ ಅರ್ಜಿಯನ್ನು ತಿರಸ್ಕರಿಸಿದ್ದು, ಅರ್ಜಿದಾರರು ಯಾವುದೇ ಪರಿಹಾರಕ್ಕೆ ಯೋಗ್ಯರಲ್ಲ ಎಂದು ಘೋಷಿಸಿದೆ.
ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ವಿಪರೀತವಾಗಿದೆ, ಆರ್ಎಂಪಿ ವೈದ್ಯರ ಹೆಸರಿನಲ್ಲಿ ಅನೇಕ ನಕಲಿ ಡಾಕ್ಟರ್ ಗಳು ಇದ್ದಾರೆ. ಅಂತಹ ಕೋರ್ಸ್ ರದ್ದುಪಡಿಸಿದ್ದರೂ, ನೈಜ ವೈದ್ಯರಿಗೆ ಸಡ್ಡು ಹೊಡೆಯುವಂತೆ ನಕಲಿ ವೈದ್ಯರು ಸೃಷ್ಟಿಯಾಗಿದ್ದಾರೆ ತಮ್ಮನ್ನು ತಾವು ವೈದ್ಯರೆಂದೇ ಬಿಂಬಿಸಿಕೊಳ್ಳುವ ವ್ಯಕ್ತಿಗಳೇ ಕ್ಲಿನಿಕ್ಗಳನ್ನು ತೆರೆಯುತ್ತಿದ್ದಾರೆ. ಅಂತಹ ಕ್ಲಿನಿಕ್ಗಳಿಂದಾಗಿ ರಾಜ್ಯದ ಜನರು ಅಪಾಯದಲ್ಲಿ ಇದ್ದಾರೆ. ಇಂತಹ ಚಿಕಿತ್ಸಾಲಯಗಳನ್ನು ಪತ್ತೆ ಹಚ್ಚಿ ತಕ್ಷಣ ಮುಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.
ಜೊತೆಗೆ ಈ ಆದೇಶದ ಪ್ರತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗೆ ಕಳುಹಿಸಲು ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ನಿರ್ದೇಶನ ನೀಡಿದ್ದು, ಮುಂದಿನ ಕಲಾಪದಲ್ಲಿ ಕ್ರಮ ಕೈಗೊಂಡ ವರದಿಯನ್ನು ನ್ಯಾಯಪೀಠದ ಮುಂದೆ ಸಲ್ಲಿಸುವಂತೆ ಆದೇಶದಲ್ಲಿ ಸೂಚಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
