23/04/2026

Law Guide Kannada

Online Guide

ಅನ್ಯ ವೃತ್ತಿಯಲ್ಲಿ ತೊಡಗಿರುವ ವಕೀಲರೇ ಗಮನಿಸಿ: ಸನದು ಅಮಾನತಿಗೆ ಮನವಿ ಸಲ್ಲಿಸಲು ಜೂ.29ವರೆಗೆ ಗಡುವು

ಬೆಂಗಳೂರು: ಅನ್ಯ ವೃತ್ತಿಯಲ್ಲಿ ತೊಡಗಿರುವ ವಕೀಲರಿಗೊಂದು ಮಾಹಿತಿ. ರಾಜ್ಯದಲ್ಲಿ ಕಾನೂನು ಪದವಿ ಪಡೆದು ಸರ್ಕಾರಿ, ಅರೆ ಸರ್ಕಾರಿ, ನ್ಯಾಯಾಂಗ ಇಲಾಖೆ ಖಾಸಗಿ ಕಂಪನಿ ಸೇರಿದಂತೆ ಅನ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ವಕೀಲರು ತಮ್ಮ ಸನದು ರದ್ದು ಮನವಿ ಸಲ್ಲಿಸಲು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಗಡುವನ್ನ ವಿಸ್ತರಿಸಿದೆ.

ಸನದು ಅಮಾನತು ಮಾಡಿಕೊಳ್ಳಲು ಮೇ 31ರ ವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ ಇನ್ನು ಹಲವು ಮಂದಿ ವಕೀಲರು ಸನದು ಅಮಾನತು ಮಾಡಿಕೊಳ್ಳಲು ಮುಂದಾಗಿಲ್ಲ. ಹೀಗಾಗಿ ಜೂನ್ 29ರೊಳಗೆ ತಮ್ಮ ವೃತ್ತಿ ವಿವರಗಳನ್ನು ನೀಡಿ ಸನದನ್ನು ರದ್ದುಗೊಳಿಸಲು ಮನವಿ ನೀಡಬೇಕು ಎಂದು ಕಾಲಾವಕಾಶ ಕೆಎಸ್ಬಿಸಿ ಸೂಚಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಎಸ್. ಎಸ್. ಮಿಟ್ಟಲಕೋಡ ಅವರು, ವಕೀಲರ ಕಾಯ್ದೆ 1961ರ ನಿಯಮದ ಪ್ರಕಾರ, ವಕೀಲಿಕೆ ತೊರೆದು ಅನ್ಯ ಉದ್ಯೋಗದಲ್ಲಿ ಇರುವವರು, ಅನ್ಯ ವೃತ್ತಿ ಸೇರಿದ ಆರು ತಿಂಗಳಲ್ಲಿ ತಮ್ಮ ಸನದ್ದನ್ನು ಅಮಾನತ್ತಿನಲ್ಲಿ ಇಡುವಂತೆ ಲಿಖಿತ ಮನವಿ ಸಲ್ಲಿಸಬೇಕಾಗಿದೆ.

ರಾಜ್ಯದಲ್ಲಿ ವಕೀಲರಾಗಿ ನೋಂದಾವಣಿ ಮಾಡಿಕೊಂಡಿರುವ ಹಲವು ವಕೀಲರು, ಸನದು ಪಡೆದುಕೊಂಡ ಬಳಿಕ ಸರ್ಕಾರಿ, ಅರೆ ಸರ್ಕಾರಿ, ಸಹಾಯಕ ಅಭಿಯೋಜಕರಾಗಿ, ನ್ಯಾಯಾಂಗ ಇಲಾಖೆ ಮತ್ತು ಖಾಸಗಿ ಕಂಪೆನಿಯ ನೌಕರರಾಗಿ ನೇಮಕಗೊಂಡಿರುತ್ತಾರೆ. ಅದೇ ರೀತಿ, ಹೊಟೇಲ್ ಉದ್ಯಮ, ಪೆಟ್ರೋಲ್ ಬಂಕ್, ಬಾರ್, ರೆಸ್ಟೋರೆಂಟ್, ಲಾಡ್ಜ್, ರಿಯಲ್ ಎಸ್ಟೇಟ್ ಸೇರಿದಂತೆ ಇನ್ನಿತರ ಲಾಭದಾಯಕ ವ್ಯಾಪಾರ ಮಾಡಿಕೊಂಡಿದ್ದಾರೆ. ಅಂಥವರು ಸನದು ಅಮಾನತು ಮಾಡಿಕೊಳ್ಳಲು ಮೇ 31ರ ವರೆಗೆ ಅವಕಾಶ ನೀಡಲಾಗಿತ್ತು.

ಮೇ ಅಂತ್ಯದ ವರೆಗೆ ಅನೇಕರು ತಮ್ಮ ಸನದು ಅಮಾನತು ಮಾಡಿಕೊಂಡಿದ್ದಾರೆ. ಆದರೆ, ಇನ್ನೂ ಅನೇಕರು ತಮ್ಮ ಸನದನ್ನು ಅಮಾನತು ಮಾಡಿಕೊಳ್ಳದೇ ಇರುವವರು ಜೂನ್ 29ರ ವರೆಗೆ ತಮ್ಮ ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಪರಿಷತ್ತಿನ ಕಚೇರಿಗೆ ಭೇಟಿ ನೀಡಿ, ತಮ್ಮ ಸನ್ನದು ಅಮಾನತು ಮಾಡಿಕೊಳ್ಳಲು ಮನವಿ ಸಲ್ಲಿಸಲು ವಿಳಂಬವಾಗಿರುವ ಬಗ್ಗೆ ಸಕಾರಣ ನೀಡಿ ಮನವಿ ಅರ್ಜಿ ಸಲ್ಲಿಸಬಹುದು. ಜೂನ್ ತಿಂಗಳ ಎಲ್ಲ ಶನಿವಾರ ಮತ್ತು ಭಾನುವಾರಗಳಂದು ಕಚೇರಿ ತೆರೆದಿದ್ದು, ಜೂನ್ 14, 15, 21, 22, 28, 29ರಂದು ವಕೀಲರು ಆಗಮಿಸಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಇಂತಹ ಅವಕಾಶ ಸದುಪಯೋಗ ಮಾಡಿಕೊಳ್ಳದೆ ಅನ್ಯ ವೃತ್ತಿಯಲ್ಲಿ ತೊಡಗಿಸಿಕೊಂಡ ವಕೀಲರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.