ಬಾಣಂತಿ ಸಾವು: 10 ಲಕ್ಷ ರೂ. ಪರಿಹಾರ ನೀಡುವಂತೆ ಆಸ್ಪತ್ರೆಗೆ ಆದೇಶ
ದಕ್ಷಿಣ ಕನ್ನಡ: ಹೆರಿಗೆಯ ನಂತರ ಬಾಣಂತಿ ಮೃತಪಟ್ಟ ಪ್ರಕರಣವೊಂದರಲ್ಲಿ ತುರ್ತು ಪರಿಸ್ಥಿತಿ ನಿಭಾಯಿಸಲು ವಿಫಲವಾದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯ ಮಂಡಳಿ ಮೃತರ ಸಂಬಂಧಿಕರಿಗೆ ಪರಿಹಾರವಾಗಿ 10 ಲಕ್ಷ ರೂ. ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.
2011ರ ಮಾರ್ಚ್ 29ರಂದು ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಬಾಣಂತಿಯೊಬ್ಬರು ದರ್ಬೆಯ ನಿಸರ್ಗ ಹೆಲ್ತ್ ಸೆಂಟರ್ ನಲ್ಲಿಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ಪತಿ ಗಣೇಶ್ ಬಂಗೇರ ಆಸ್ಪತ್ರೆ ವಿರುದ್ದ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಆದರೆ, ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ನ್ಯಾಯಾಲಯ ಈ ದೂರನ್ನು 2017ರಲ್ಲಿ ವಜಾಗೊಳಿಸಿತ್ತು. ಈ ವಜಾ ಆದೇಶವನ್ನು ಪ್ರಶ್ನಿಸಿ ದೂರುದಾರ ಗಣೇಶ್ ಬಂಗೇರ ಅವರು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಈ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ರಾಜ್ಯ ಗ್ರಾಹಕರ ನ್ಯಾಯಾಲಯ, ಪ್ರಕರಣದ ಮರುವಿಚಾರಣೆ ನಡೆಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು. ಅದರಂತೆ, ಮತ್ತೆ ವಿಚಾರಣೆ ಕೈಗೆತ್ತಿಕೊಂಡ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯ, ಮೃತ ಮಹಿಳೆಯ ಪತಿಗೆ 10 ಲಕ್ಷ ರೂಪಾಯಿ ಪರಿಹಾರ ಮತ್ತು ಪ್ರಕರಣ ದಾಖಲಾದ ದಿನದಿಂದ ಶೇಕಡಾ 6ರ ಬಡ್ಡಿದರವನ್ನು ಸೇರಿಸಿ ವ್ಯಾಜ್ಯ ವೆಚ್ಚದ ಜೊತೆಗೆ ಪರಿಹಾರ ನೀಡುವಂತೆ ದರ್ಬೆಯ ನಿಸರ್ಗ ಹೆಲ್ತ್ ಸೆಂಟರ್ ಆದೇಶ ಹೊರಡಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಬಾಣಂತಿ ಸಾವಿಗೆ ಆಸ್ಪತ್ರೆ ವೈದ್ಯರ ನಿರ್ಲಕ್ಷ, ಆಸ್ಪತ್ರೆಯ ವೈದ್ಯಕೀಯ ನಿರ್ಲಕ್ಷ್ಯವೇ ಕಾರಣ ಎಂಬುದನ್ನು ಗಮನಿಸಿದ್ದು, ಆಸ್ಪತ್ರೆಯ ವ್ಯವಹಾರ ಸೇವಾ ನ್ಯೂನ್ಯತೆಯಿಂದ ಕೂಡಿದೆ, ಹೆರಿಗೆ ನಂತರದ ಪರಿಸ್ಥಿತಿಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವಲ್ಲಿ ಆಸ್ಪತ್ರೆ ವಿಫಲವಾಗಿದೆ. ಆಸ್ಪತ್ರೆಯಲ್ಲಿ ತುರ್ತು ಸಮಯದಲ್ಲಿ ಹೊಂದಿರಬೇಕಾದ ವ್ಯವಸ್ಥೆ ಇಲ್ಲದಿರುವುದರನ್ನೂ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಗಮನಿಸಿದೆ.
ಪ್ರಕರಣದಲ್ಲಿ ಕೇಸ್ ಶೀಟ್, ಡಿಸ್ಮಾರ್ಚ್ ಸಮ್ಮರಿಗಳನ್ನು ಆಸ್ಪತ್ರೆ ತನ್ನ ಗ್ರಾಹಕರಾದ ದೂರುದಾರರಿಗೆ ನೀಡದೇ ಇರುವುದು ಸೇವಾ ನ್ಯೂನ್ಯತೆಯಾಗಿದ್ದು, ವೃತ್ತಿ ನಿಯಮದ ಉಲ್ಲಂಘನೆಯಾಗಿದೆ ಎಂದು ಗ್ರಾಹಕ ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
