08/03/2026

Law Guide Kannada

Online Guide

ಅಧಿಕಾರಿಗಳ ವಿರುದ್ದ ದೂರು ಬಂದಾಗ ಶಾಸಕರ ಶಿಫಾರಸ್ಸಿನ ಮೇಲೆ ಅವರನ್ನ ವರ್ಗಾವಣೆ ಮಾಡಬಹುದೇ..? ಹೈಕೋರ್ಟ್ ಆದೇಶವಿದು

ಬೆಂಗಳೂರು : ಅಧಿಕಾರಿಗಳ ವಿರುದ್ದ ದೂರು ಕೇಳಿ ಬಂದಾಗ ಶಾಸಕರ ಶಿಫಾರಸ್ಸಿನ ಮೇಲೆ ಅವರನ್ನ ವರ್ಗಾವಣೆ ಮಾಡುವುದು ತಪ್ಪಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು ಕೋಲಾರ ಜಿಲ್ಲೆಯ ಬಂಗಾರಪೇಟೆ ಗ್ರೇಡ್ 1 ತಹಶೀಲ್ದಾರ್ ವೆಂಕಟೇಶಪ್ಪ ಅವರ ವರ್ಗಾವಣೆಯನ್ನು ಎತ್ತಿಹಿಡಿದಿದೆ.

ಅವಧಿಪೂರ್ವ ವರ್ಗಾವಣೆ ಮಾಡಿದ್ದ ಕ್ರಮ ಎತ್ತಿ ಹಿಡಿದಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಆದೇಶ ಪ್ರಶ್ನಿಸಿ ಗ್ರೇಡ್ 1 ತಹಶೀಲ್ದಾರ್ ವೆಂಕಟೇಶಪ್ಪ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಸ್. ಜಿ. ಪಂಡಿತ್ ಹಾಗೂ ಕೆ ವಿ ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠವು, ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದ ಆರೋಪ ಹೊತ್ತ ಸರಕಾರಿ ಅಧಿಕಾರಿಗಳನ್ನು ಸ್ಥಳೀಯ ಶಾಸಕರ ಸಲಹೆ, ಶಿಫಾರಸಿನ ಮೇರೆಗೆ ವರ್ಗಾವಣೆ ಮಾಡಿದರೆ ತಪ್ಪಾಗುವುದಿಲ್ಲ ಎಂದಿದೆ.

ಅವಧಿಪೂರ್ವ ವರ್ಗಾವಣೆ ಮಾಡಿದ್ದರೂ ತಹಶೀಲ್ದಾರರಾಗಿರುವ ಅರ್ಜಿದಾರರ ವಿರುದ್ಧ ಕಚೇರಿಗೆ ಸಮಯಕ್ಕೆ ಸರಿಯಾಗಿ ಬಾರದಿರುವುದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದಿರುವ ಕಾರಣದಿಂದ ಸ್ಥಳೀಯರು ಶಾಸಕರಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಅರ್ಜಿದಾರರನ್ನು ವರ್ಗಾವಣೆ ಮಾಡುವಂತೆ ಸ್ಥಳೀಯ ಶಾಸಕರು ಕಂದಾಯ ಸಚಿವರಿಗೆ ಮನವಿ ಮಾಡಿದ್ದರು. ಈ ವರ್ಗಾವಣೆಯನ್ನು ಕೆಎಟಿ ಎತ್ತಿಹಿಡಿದಿದೆ. ಈ ಆದೇಶದಲ್ಲಿ ಯಾವುದೇ ಕಾನೂನು ಉಲ್ಲಂಘನೆ ಹಾಗೂ ಲೋಪ ಕಂಡುಬರುತ್ತಿಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ತಿಳಿಸಿದೆ.

ಏನಿದು ಪ್ರಕರಣ…?
2024ರ ಜುಲೈ 31ರಿಂದ ಕೋಲಾರ ಜಿಲ್ಲೆಯ ಬಂಗಾರಪೇಟೆಯ ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿದಾರರು ಗ್ರೇಡ್ -1 ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅರ್ಜಿದಾರರ ವಿರುದ್ಧ ಸರಿಯಾದ ಸಮಯಕ್ಕೆ ಕಚೇರಿಗೆ ಹಾಜರಾಗದಿರುವುದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದಿರುವ ಆರೋಪ ಕೇಳಿ ಬಂದಿತ್ತು.

ಈ ಹಿನ್ನೆಲೆಯಲ್ಲಿ ಬಂಗಾರಪೇಟೆ ಕ್ಷೇತ್ರದ ಶಾಸಕರು, ಕಂದಾಯ ಸಚಿವರಿಗೆ ಪತ್ರ ಬರೆದು ಅರ್ಜಿದಾರರನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಮತ್ತೊಬ್ಬ ಅಧಿಕಾರಿಯನ್ನು ನಿಯೋಜನೆ ಮಾಡುವಂತೆ ಕೋರಿದ್ದರು. ಅದರಂತೆ, ಅರ್ಜಿದಾರರನ್ನು 2024ರ ಡಿಸೆಂಬರ್ 13ರಂದು ವರ್ಗಾವಣೆ ಮಾಡಿ ಆದೇಶಿಸಲಾಗಿತ್ತು. ಇದನ್ನು ಪ್ರಶ್ನಿಸಿ ವೆಂಕಟೇಶಪ್ಪ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಕೆಎಟಿ, ವರ್ಗಾವಣೆ ಆದೇಶವನ್ನು ಎತ್ತಿಹಿಡಿದಿತ್ತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.