ತೀರ್ಪು ಬಳಿಕ ಅದರ ಪ್ರತಿ ವೆಬ್ ಸೈಟ್ ನಲ್ಲಿ ಪ್ರಕಟಿಸಲು ವಿಳಂಬ: ಸುಪ್ರೀಂ ತೀವ್ರ ಕಳವಳ: ಹೈಕೋರ್ಟ್ ಗಳಿಗೆ ನಿರ್ದೇಶನ
ನವದೆಹಲಿ: ದೇಶದ ವಿವಿಧ ರಾಜ್ಯಗಳ ಹೈಕೋರ್ಟ್ ಗಳು ತೀರ್ಪು ನೀಡಿದ ಬಳಿಕ ಅದರ ಪ್ರತಿಯನ್ನು ಜಾಲತಾಣದಲ್ಲಿ ಪ್ರಕಟಿಸಲು ವಿಳಂಬ ಮಾಡುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ತೀರ್ಪು ಪ್ರಕಟಿಸಿದ ಬಳಿಕ ಜಾಲತಾಣದಲ್ಲಿ ವಿಳಂಬ ಮಾಡಬೇಡಿ ಎಂದು ಎಲ್ಲಾ ಹೈಕೋರ್ಟ್ ಗಳಿಗೆ ನಿರ್ದೇಶನ ನೀಡಿದೆ.
ರಾಜನ್ ವಿರುದ್ಧ ಹರಿಯಾಣ ರಾಜ್ಯ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದೀವಾಲಾ ಮತ್ತು ಸಂದೀಪ್ ಮೆಹ್ರಾ ಅವರಿದ್ದ ನ್ಯಾಯಪೀಠ ಈ ಆತಂಕ ವ್ಯಕ್ತಪಡಿಸಿದೆ. ತೀರ್ಪಿನ ಆಪರೇಟಿವ್ ಭಾಗಗಳನ್ನು ಬಹಿರಂಗ ನ್ಯಾಯಾಲಯದಲ್ಲಿ ಉದ್ದರಣೆ ಮಾಡಿದ ಬಳಿಕ ತಿಂಗಳು, ವರ್ಷ ಕಳೆದರೂ ತೀರ್ಪಿನ ಪೂರ್ಣ ಭಾಗವನ್ನು ಜಾಲತಾಣದಲ್ಲಿ ಪ್ರಕಟಿಸುವುದಿಲ್ಲ. ಹೈಕೋರ್ಟ್ ಈ ವಿಳಂಬ ಧೋರಣೆ ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು.
“ಅನಿಲ್ ರಾಯ್ ವಿರುದ್ಧ ಬಿಹಾರ ಸರ್ಕಾರ” ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ ನಿರ್ದೇಶನಗಳನ್ನು ಪುನರುಚ್ಚರಿಸಿದ ನ್ಯಾಯಪೀಠ, ನ್ಯಾಯದಾನದಲ್ಲಿ ಕ್ಷಿಪತೆಯನ್ನು ಕಾಯ್ದುಕೊಳ್ಳಲು ವಿಳಂಬವಿಲ್ಲದೆ ತೀರ್ಪು ಅಪ್ ಲೋಡ್ ಮಾಡುವತ್ತ ಗಮನ ಹರಿಸಿ ಎಂದು ಹೈಕೋರ್ಟ್ಗಳಿಗೆ ತಾಕೀತು ಮಾಡಿತು.
ತೀರ್ಪಿನ ಪ್ರತಿ ಜಾಲತಾಣದಲ್ಲಿ ಪ್ರಕಟಿಸುವುದನ್ನ ವಿಳಂಬ ವಿಳಂಬ ಮಾಡುವುದರಿಂದ ದಾವೆದಾರರು ಸಕಾಲಿಕ ನ್ಯಾಯಾಂಗ ಪರಿಹಾರ ಪಡೆಯುವ ಹಕ್ಕಿನಿಂದ ವಂಚಿತರಾಗುತ್ತಾರೆ. ಇನ್ನು ಮುಂದೆ, ಯಾವುದೇ ಪ್ರಕರಣದಲ್ಲಿ ತೀರ್ಪಿನ ಆಪರೇಟಿವ್ ಭಾಗವನ್ನು ಘೋಷಿಸಿದ ಬಳಿಕ ಹೈಕೋರ್ಟ್ಗಳು ತಮ್ಮ ಆದೇಶದ ಪ್ರತಿಯನ್ನು ವಿಳಂಬ ಮಾಡದೇ ಜಾಲತಾಣಗಳಲ್ಲಿ ಪ್ರಕಟಿಸಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
