23/04/2026

Law Guide Kannada

Online Guide

ನಕಲಿ ಆಧಾರ್, ಪಹಣಿ ಪತ್ರ ಸೃಷ್ಟಿ: ಕೋರ್ಟ್ ಗೆ ಶ್ಯೂರಿಟಿ ನೀಡಿ ವಂಚಿಸಿ ಸಿಕ್ಕಿಬಿದ್ದ ವ್ಯಕ್ತಿಗಳಿಬ್ಬರು ಅರೆಸ್ಟ್

ಮಂಗಳೂರು: ನಕಲಿ ದಾಖಲೆಗಳನ್ನ ಸೃಷ್ಠಿಸಿ ಆಸ್ತೀ ನೋಂದಣಿ, ಸರ್ಕಾರಿ ಕೆಲಸಗಳನ್ನ ಗಿಟ್ಟಿಸಿಕೊಳ್ಳುವುದು ಜಮೀನು, ಸರ್ಕಾರಿ ಜಾಗ ಕಬಳಿಕೆ ಹೀಗೆ ಹತ್ತಾರು ರೀತಿಯಲ್ಲಿ ವಂಚನೆ ಪ್ರಕರಣಗಳನ್ನ ನೋಡಿದ್ದೇವೆ. ಅಂತೆಯೇ ಇಲ್ಲೊಬ್ಬ ವ್ಯಕ್ತಿ ನಕಲಿ ಆಧಾರ್, ಪಹಣಿ ಪತ್ರ ಸೃಷ್ಟಿಸಿ ನ್ಯಾಯಾಲಯದಲ್ಲಿ ಶ್ಯೂರಿಟಿ ನೀಡಿ ವಂಚಿಸಿ ಇದೀಗ ಸಿಕ್ಕಿ ಬಿದ್ದಿದ್ದಾನೆ.

ಹೌದು, ನ್ಯಾಯಾಲಯದಲ್ಲಿ ಆರೋಪಿಗಳಿಗೆ ಜಾಮೀನು ನೀಡಲು ನಕಲಿ ದಾಖಲೆ ಸೃಷ್ಟಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮೂಲ್ಕಿ ಬಪ್ಪನಾಡು ನಿವಾಸಿ 46 ಪ್ರಾಯದ ಅಬ್ದುಲ್ ರೆಹಮಾನ್ ಹಾಗೂ ಕೊಡಿಯಾಲಬೈಲ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಿಶಾಂತ್ ಬಂಧಿತ ಆರೋಪಿಗಳು. ಕೋರ್ಟ್ ನಲ್ಲಿ ಶ್ಯೂರಿಟಿ ನೀಡಲು ಬಂಧಿತ ಇಬ್ಬರು ಆರೋಪಿಗಳು ನಕಲಿ ಆಧಾರ್, ಪಹಣಿ ಪತ್ರ ಸೃಷ್ಟಿಸಿ ವಂಚಿಸಿದ್ದು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಮಾತನಾಡಿದ ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಈ ಜಾಲದಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದು, ಅವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಲ್ಲದೆ ವಂಚನೆಗೆ ಸಂಬಂಧಿಸಿ ಇನ್ನೂ ಎರಡು ಪ್ರಕರಣ ದಾಖಲಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಮಂಗಳೂರಿನ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯ ದಡ್ಡಲ್ ಕಾಡ್ ಎಂಬಲ್ಲಿ ಆರೋಪಿಗಳು ಕಾರ್ಯಾಚರಿಸುತ್ತಿದ್ದರು. ಇಲ್ಲಿ ಆಧಾರ್ಕಾರ್ಡ್ ಮತ್ತು ಪಹಣಿ ಪತ್ರವನ್ನು ಪೋರ್ಜರಿ ಮಾಡಿ ಬೇರೆ ಬೇರೆ ಸರ್ಕಾರಿ ಕಚೇರಿಗಳಿಗೆ ಮತ್ತು ನ್ಯಾಯಾಲಯಕ್ಕೆ ನಕಲಿ ಆಧಾರ್ಕಾರ್ಡ್ ನೀಡಿ ವಂಚಿಸಲಾಗುತ್ತಿದೆ ಎಂಬ ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ಈ ಪ್ರಕರಣವನ್ನು ಬೆಳಕಿಗೆ ತಂದಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದು, ಆರೋಪಿಗಳು ಮಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಹಲವರಿಗೆ ನಕಲಿ ಕಾರ್ಡ್ ಗಳ ಮೂಲಕ ವಂಚಿಸಿದ್ದಾರೆ ಎನ್ನಲಾಗಿದೆ.

ಆರೋಪಿ ಅಬ್ದುಲ್ ರೆಹಮಾನ್ ಕೊಡಿಯಾಲ್ ಬೈಲ್ ನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ನಿಶಾಂತ್ ಎಂಬಾತನೊಂದಿಗೆ ಸೇರಿಕೊಂಡು ಕಂಪ್ಯೂಟರ್ನಲ್ಲಿ ನಕಲಿ ದಾಖಲೆ ಸೃಷ್ಟಿಸುತ್ತಿದ್ದ. ಆಧಾರ್ ಕಾರ್ಡ್ ನಂಬರ್, ಹೆಸರು, ಫೋನ್ ನಂಬರ್, ವಿಳಾಸ, ಮತ್ತು ಫೋಟೋ ಎಡಿಟ್ ಮಾಡಿ, ನಕಲಿ ದಾಖಲೆ ಸೃಷ್ಟಿಸಿ ಅದನ್ನು ಬೇರೆ ಬೇರೆ ಇಲಾಖೆಗಳಿಗೆ ದಾಖಲಾತಿಯಾಗಿ ನೀಡುತ್ತಿದ್ದ. ಈ ಕಾರ್ಡ್ಗಳನ್ನು ನ್ಯಾಯಾಲಯದಲ್ಲಿ ಪ್ರಕರಣಗಳ ಆರೋಪಿಗಳಿಗೆ ಜಾಮೀನು ನೀಡುವವರಿಗೆ ನೀಡುತ್ತಿದ್ದುದಾಗಿ ಪೊಲೀಸರ ಬಳಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.