ಲಿವಿಂಗ್ ಟುಗೆದರ್ ನಲ್ಲಿದ್ದು ಬಳಿಕ ಮದುವೆಗೆ ನಿರಾಕರಿಸಿದ್ರೆ ಅದು ಅಪರಾಧವೇ..? ಹೈಕೋರ್ಟ್ ಕೊಟ್ಟ ತೀರ್ಪೇನು..?
ಅಲಹಾಬಾದ್ : ಲಿವಿಂಗ್ ಟುಗೆದರ್ (ಸಹ ಜೀವನ) ನಲ್ಲಿದ್ದು, ನಂತರ ಮದುವೆಯಾಗಲು ನಿರಾಕರಿಸಿದರೆ ಅದು ಗಂಭೀರ ಅಪರಾಧವಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸಹ ಜೀವನದಲ್ಲಿದ್ದ ವ್ಯಕ್ತಿಯೊಬ್ಬನ ವಿರುದ್ಧ ಮಹಿಳೆ ನೀಡಿದ್ದ ದೂರನ್ನು ಮಹೋಬಾ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮಹಿಳೆ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯನ್ನು ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ನ ನ್ಯಾಯಮೂರ್ತಿ ಅರುಣಕುಮಾರ್ ಸಿಂಗ್ ದೇಶವಾಲ್ ಅವರಿದ್ದಂತ ನ್ಯಾಯಪೀಠವು, ಸಹಜೀವನದಲ್ಲಿದ್ದು ನಾಲ್ಕು ವರ್ಷ ಒಪ್ಪಿತ ದೈಹಿಕ ಸಂಬಂಧ ಹೊಂದಿದ ಬಳಿಕ ಮದುವೆಯಾಗಲು ವ್ಯಕ್ತಿಯೊಬ್ಬ ನಿರಾಕರಿಸಿದ್ದಲ್ಲಿ ಅದು ಗಂಭೀರ ಅಪರಾಧ ಆಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಸಹ ಜೀವನದ ಸಂಗಾತಿಯಾಗಿದ್ದ ವ್ಯಕ್ತಿ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ ಮಹಿಳೆ ಸಲ್ಲಿಸಿದ್ದಂತ ಮೇಲ್ಮನವಿಯನ್ನು ತಿರಸ್ಕರಿಸಿದ ನ್ಯಾಯಪೀಠವು, ಮದುವೆ ಮಾಡಿಕೊಳ್ಳುವ ಭರವಸೆ ಇದ್ದ ಕಾರಣವೇ ಒಪ್ಪಿತ ಸಂಬಂಧಕ್ಕೆ ಸಮ್ಮತಿಸಿದ್ದೆ ಎಂಬ ವಾದವನ್ನು ಒಪ್ಪಿಕೊಳ್ಳೋದಕ್ಕೆ ಸಾಧ್ಯವಿಲ್ಲ ಎಂಬುದಾಗಿ ಹೇಳಿದೆ.
ಸರಿ-ತಪ್ಪುಗಳನ್ನು ನಿರ್ಧರಿಸಬಲ್ಲ ಸಾಮರ್ಥ ಇರುವ ವಯಸ್ಕರಿಬ್ಬರು ಹಲವು ವರ್ಷ ಸಹಜೀವನ ನಡೆಸುತ್ತಿದ್ದರೇ, ಅವರು ಅಂತಹ ಸಂಬಂಧವನ್ನು ಸ್ವಇಚ್ಛೆಯಿಂದ ಆಯ್ಕೆ ಮಾಡಿಕೊಂಡಂತೆ. ಅದರಿಂದ ಆಗುವ ಪರಿಣಾಮಗಳ ಕುರಿತು ಅವರಿಗೆ ಅರಿವೂ ಇರುತ್ತದೆ ಎಂದೇ ಊಹಿಸಬೇಕಾಗುತ್ತದೆ ಎಂದು ನ್ಯಾಯಪೀಠ ತಿಳಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
