ಪತ್ನಿ ಪಾಲನೆ ಹೊಣೆಗಾರಿಕೆಯಿಂದ ಗಂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಕೂಲಿ ಮಾಡಿಯಾದ್ರೂ ಆದಾಯ ಗಳಿಸಬೇಕು–ಹೈಕೋರ್ಟ್
ಅಲಹಾಬಾದ್: ಮದುವೆಯಾದ ತಕ್ಷಣ ಪತ್ನಿಯ ಪೋಷಣೆ ಪಾಲನೆ ಮಾಡುವುದು ಗಂಡನ ಕರ್ತವ್ಯ. ಹೀಗಾಗಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮಹತ್ವದೊಂದು ತೀರ್ಪನ್ನ ನೀಡಿದೆ.
ಪತ್ನಿಯನ್ನು ಪಾಲನೆ ಮಾಡುವ ಹೊಣೆಗಾರಿಕೆಯಿಂದ ಪತಿ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಗತ್ಯವಿದ್ದರೆ , ಪತಿ ದೈಹಿಕ ಕೂಲಿ ಕೆಲಸ ಮಾಡುವ ಮೂಲಕವಾದರೂ ಆದಾಯ ಗಳಿಸಿ ಪತ್ನಿಯನ್ನ ಪಾಲನೆ ಮಾಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಲಕ್ಕೋ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಪತ್ನಿಗೆ ಪ್ರತಿ ತಿಂಗಳು ₹2,500 ಮಧ್ಯಂತರ ಪಾಲನೆ ನೀಡುವಂತೆ ಲಕ್ನೋ ಕುಟುಂಬ ನ್ಯಾಯಾಲಯವು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಕ್ರಿಮಿನಲ್ ರಿವಿಷನ್ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಕುಟುಂಬ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ಬೆಂಬಲ ನೀಡಿದ್ದು, ನ್ಯಾಯಮೂರ್ತಿ ಸೌರಭ್ ಲವಾನಿಯಾ ಅವರು ನೀಡಿದ ತೀರ್ಪಿನಲ್ಲಿ ಪತ್ನಿ ಪಡೆಯುತ್ತಿರುವ ರೂ. 2,500 ಮೊತ್ತ ಅತೀ ಕಡಿಮೆಯಾಗಿದೆ. ಗಂಡನ ಕನಿಷ್ಠ ಆದಾಯವನ್ನು ಅಂದಾಜಿಸುವಲ್ಲಿ ಕುಟುಂಬ ನ್ಯಾಯಾಲಯ ಯಾವುದೇ ತಪ್ಪು ಮಾಡಿಲ್ಲ ಎಂದು ಅಭಿಪ್ರಾಯಪಟ್ಟಿತು.
ಅಲ್ಲದೆ ಗಂಡನು “ನಾನು ನಿರುದ್ಯೋಗಿ” ಎಂದು ವಾದಿಸಿದರೂ ಈ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, ಶಾರೀರಿಕವಾಗಿ ಸಮರ್ಥನಾದ ವ್ಯಕ್ತಿ ಕೆಲಸ ಮಾಡಿದರೆ ಕನಿಷ್ಠ ವೇತನ ಮಟ್ಟದಲ್ಲಿ ಆದಾಯ ಗಳಿಸಬಹುದು ಎಂದು ಚಾಟಿ ಬೀಸಿತು.
ಏನಿದು ದಾಂಪತ್ಯ ಕಲಹ?
ನವೆಂಬರ್ 2013ರಲ್ಲಿ ಪಂಜಾಬ್ ನ ಜಲಂಧರ್ ನಲ್ಲಿ ಅರ್ಜಿದಾರ ಪತಿ ಮತ್ತು ಆತನ ಪತ್ನಿ ಇಬ್ಬರು ವಿವಾಹವಾಗಿದ್ದರು. ಈ ನಡುವೆ ವಿವಾಹದ ನಂತರ ಪತಿಯ ಕುಟುಂಬದವರು ತನಗೆ ದೈಹಿಕ ಕಿರುಕುಳ ನೀಡಲು ಆರಂಭಿಸಿದ್ದು, 2 ಫೆಬ್ರವರಿ 2021ರಂದು ಗಂಡನ ಸಹೋದರಿ ಸೇರಿದಂತೆ ಕುಟುಂಬದವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪತ್ನಿ ಆರೋಪಿಸಿದ್ದರು. ಬಳಿಕ ಗಂಡನು ಅವಳನ್ನು 20 ದಿನಗಳ ಕಾಲ ಬಾಡಿಗೆ ಮನೆಯಲ್ಲಿಟ್ಟು ಬಿಟ್ಟು ಹೋದ. ನಂತರ ಅಣ್ಣನ ಮೂಲಕ ಅವಳು ಲಖ್ಯೆಗೆ ಮರಳಿದಳು. ಈ ಹಿನ್ನೆಲೆಯಲ್ಲಿ. ಪತ್ನಿ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದ್ದರು.
ಕನಿಷ್ಠ ವೇತನ ಆಧಾರದ ಲೆಕ್ಕಾಚಾರ ಕುಟುಂಬ ನ್ಯಾಯಾಲಯ ಮಾಡಿದ ಲೆಕ್ಕಾಚಾರದ ಪ್ರಕಾರ “ಒಬ್ಬ ಕೂಲಿ ಕಾರ್ಮಿಕನು ತಿಂಗಳಲ್ಲಿ 25 ದಿನ ಕೆಲಸ ಮಾಡಿದರೆ, ಕನಿಷ್ಠ ₹12,500 ಗಳಿಸುತ್ತಾನೆ.” ಈ ಅಂದಾಜಿನ ಆಧಾರದ ಮೇಲೆ ಪತ್ನಿಗೆ ₹2,500 ಪಾಲನೆ ನೀಡುವಂತೆ ನ್ಯಾಯಾಲಯ ನಿರ್ದೇಶಿಸಿತ್ತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
