23/04/2026

Law Guide Kannada

Online Guide

ಮ್ಯುಟೇಷನ್ ಆಧಾರಿತ ಸಿವಿಲ್ ಕೋರ್ಟ್ ಡಿಕ್ರಿ ಸೌಲಭ್ಯ ಸೇರಿಸಿ, ಕಾವೇರಿ 2.0 ಪರಿಷ್ಕರಿಸಿ- ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಸದ್ಯ ಚಾಲ್ತಿಯಲ್ಲಿರುವ ‘ಕಾವೇರಿ 2.0’ ತಂತ್ರಾಂಶ ಕಾನೂನು ನಿರ್ವಾತವನ್ನು ಸೃಷ್ಟಿಸುತ್ತಿದೆ. ಹೀಗಾಗಿ ಕಾವೇರಿ 2.0 ತಂತ್ರಾಂಶವನ್ನು ಪರಿಷ್ಕರಿಸಿ ಮ್ಯುಟೇಷನ್ ಆಧಾರಿತ ಸಿವಿಲ್ ಕೋರ್ಟ್ ಡಿಕ್ರಿ ಸೌಲಭ್ಯವನ್ನು ಸೇರಿಸುವಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸೆಷನ್ಸ್ ನ್ಯಾಯಾಲಯವು ಮೂಲ ಮೊಕದ್ದಮೆಯಲ್ಲಿ ಅಂಗೀಕರಿಸಿದ ರಾಜಿ ಅಂತಿಮ ತೀರ್ಪಿನ ನಿಯಮಗಳ ಪ್ರಕಾರ ತಮ್ಮ ಹೆಸರಿಗೆ ಖಾತಾ ವರ್ಗಾವಣೆ ಮಾಡುವಂತೆ ಕೋರಿ ಬಂಟ್ವಾಳ ತಾಲೂಕಿನ ಗಿಲ್ಬರ್ಟ್ ವಾಸ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯ ಪೀಠ ಮಾನ್ಯ ಮಾಡಿತು.
ಕಾವೇರಿ 2.0 ಪರಿಷ್ಕರಿಸಿ’ ಮ್ಯುಟೇಷನ್ ಆಧಾರಿತ ಸಿವಿಲ್ ಕೋರ್ಟ್ ಡಿಕ್ರಿ ‘ ಎಂಬ ಹೊಸ ಕಾರ್ಯನಿರ್ವಹಣಾ ಶೀರ್ಷಿಕೆ ಸೇರ್ಪಡೆ ಮಾಡಿ. ಕೋರ್ಟ್ ತೀರ್ಪುಗಳು ಮತ್ತು ಆಡಳಿತಾತ್ಮಕ ನಿರ್ಣಯಗಳನ್ನು ಜಾರಿಗೊಳಿಸುವ ಮಧ್ಯೆ ಸಮನ್ವಯ ಸ್ಥಾಪಿಸಲು ಮತ್ತು ಸಿವಿಲ್ ನ್ಯಾಯಾಲಯದ ತೀರ್ಪುಗಳು ರಾಜ್ಯದ ಡಿಜಿಟಲ್ ಕಂದಾಯ ಮೂಲಸೌಕರ್ಯದಲ್ಲಿ ಸ್ವಯಂಚಾಲಿತವಾಗಿ ಸೇರ್ಪಡೆಗೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ (ಸಿಎಸ್ಜಿ) ಸಹಯೋಗದೊಂದಿಗೆ ಕಾನೂನಿನ ಪರಿಷ್ಕರಣೆ ಮಾಡಬೇಕು ಎಂದು ನ್ಯಾಯಪೀಠವು ನಿರ್ದೇಶಿಸಿದೆ.

ಕಾವೇರಿ 2.0 ತಂತ್ರಾಂಶ ಮಾರಾಟ, ಗಿಫ್ಟ್ ಡೀಡ್, ಅಡಮಾನ, ಪಿತ್ರಾರ್ಜಿತ ಆಸ್ತಿ ಕುರಿತ ವಹಿವಾಟುಗಳನ್ನು ಆಧರಿಸಿದೆ. ಅದರಲ್ಲಿ ಆಸ್ತಿ ವಿವಾದಗಳ ಕುರಿತಂತೆ ಸಿವಿಲ್ ನ್ಯಾಯಾಲಯಗಳ ತೀರ್ಪುಗಳನ್ನು ಪರಿಶೀಲಿಸಲು ಯಾವುದೇ ಅವಕಾಶವಿಲ್ಲ. ಜತೆಗೆ, ಇದು ನಾಗರಿಕರು ನ್ಯಾಯಾಲಯಗಳು ನಿರ್ಣಾಯಕವಾಗಿ ನಿರ್ಧರಿಸಿದ ವಿಷಯಗಳಿಗೆ ಹಲವು ಅನುಮೋದನೆ, ಪರಿಶೀಲನೆ ಮತ್ತು ಪ್ರಮಾಣೀಕರಣಗಳನ್ನು ಪಡೆಯಬೇಕೆಂದು ಸೂಚಿಸುತ್ತದೆ. ಹಾಗಾಗಿ, ತಂತ್ರಾಂಶ ಸ್ವಲ್ಪ ಗೊಂದಲ ಉಂಟು ಮಾಡುತ್ತಿರುವುದರಿಂದ ಅದರ ಪರಿಷ್ಕರಣೆ ಅತ್ಯಗತ್ಯವಾಗಿದೆ. ಅಲ್ಲದೆ, ”ಕರ್ನಾಟಕ ಭೂ ಕಂದಾಯ ಕಾಯಿದೆಯ ಸೆಕ್ಷನ್ 128ರ ಉದ್ದೇಶ ನಿರಶನಗೊಳಿಸುತ್ತದೆ. ಇದು ಉಭಯ ಪಕ್ಷಗಾರರು ಕ್ರಿಯೆ ಅಥವಾ ಕಾನೂನಿನ ಕಾರ್ಯಾಚರಣೆಗಳ ಮೂಲಕ ಎಲ್ಲಾ ಹಕ್ಕುಗಳ ಸ್ವಾಧೀನಗಳನ್ನು ಕಂದಾಯ ದಾಖಲೆಗಳಲ್ಲಿ ಸರಿಯಾಗಿ ದಾಖಲಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ ಮತ್ತು ನ್ಯಾಯಾಲಯದ ತೀರ್ಪುಗಳಿಗೆ ಅನುಗುಣವಾಗಿ ಕಂದಾಯ ದಾಖಲೆಗಳನ್ನು ತಿದ್ದುಪಡಿ ಮಾಡುವ ಅಗತ್ಯವಿರುವ ಸೆಕ್ಷನ್ 135 ಸಹ ಉಲ್ಲಂಘಿಸುತ್ತದೆ,” ಎಂದು ನ್ಯಾಯಪೀಠ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.