06/03/2026

Law Guide Kannada

Online Guide

ಮಾಧ್ಯಮ ಅಕಾಡೆಮಿ ಸಿಬ್ಬಂದಿ ಸರ್ಕಾರಿ ನೌಕರರಾಗಿದ್ದರೂ ಪಿಂಚಣಿಗೆ ಅರ್ಹರಲ್ಲವೇ..?

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ನೌಕರರು ಪಿಂಚಣಿ ಪಡೆಯಲು ಅರ್ಹರೇ ಅಥವಾ ಇಲ್ಲವೇ? ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

ಸರಕಾರಿ ನೌಕರರಾಗಿದ್ದರೂ ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ನೌಕರರು ಪಿಂಚಣಿ ಪಡೆಯಲು ಅರ್ಹರಲ್ಲ ಎಂದು ಹೈಕೋರ್ಟ್ ತೀರ್ಪು ಪ್ರಕಟಿಸಿದೆ.
ಮಾಧ್ಯಮ ಅಕಾಡೆಮಿ ಸಿಬ್ಬಂದಿಯ ನಿವೃತ್ತ ಸಿಬ್ಬಂದಿ ಯಲಗಯ್ಯ, ಆರ್.ಜಿ.ಸಿದ್ದರಾಮೇಶ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿದ್ದ ಏಕಸದಸ್ಯ ಪೀಠ ಅರ್ಜಿದಾರರಿಗೆ ಪಿಂಚಣಿ ಮತ್ತು ಭತ್ಯೆ ನೀಡುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸರಕಾರ ಮೇಲ್ಮನವಿ ಸಲ್ಲಿಸಿತ್ತು.

ಅರ್ಜಿದಾರರಿಗೆ ಪಿಂಚಣಿ ಮತ್ತು ಭತ್ಯೆಗಳನ್ನು ಬಿಡುಗಡೆ ಮಾಡುವಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗಳನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ನೀಡಿದೆ.

ಮೇಲ್ಮನವಿ ಸಲ್ಲಿಸಿದ್ದ ಸರಕಾರ, “ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಥವಾ ಮಾಧ್ಯಮ ಅಕಾಡೆಮಿಯ ನೌಕರರು ಸರಕಾರದ ಸೇವೆಯಲ್ಲಿಲ್ಲ. ಅವರು ಸರಕಾರಿ ನೌಕರರಲ್ಲ,” ಎಂದು ವಾದಿಸಿತ್ತು.
2014ರ ಜ.29ರ ಹೊರಡಿಸಿದ್ದ ಅಧಿಸೂಚನೆಯಂತೆ ಕೆಸಿಎಸ್ಆರ್ ನಿಯಮಗಳಿಂದ ನಿಯಮ 2-‘ಅ’ ಕೈಬಿಡುವ ಮೂಲಕ ಸರಕಾರಿ ನೌಕರರಲ್ಲದ ವ್ಯಕ್ತಿಗಳು ನಿವೃತ್ತಿ ಪಿಂಚಣಿಗೆ ಒದಗಿಸುವ ಕೆಸಿಎಸ್ಆರ್ ನಿಯಮ 285ರ ಪ್ರಯೋಜನ ಅಥವಾ ಅನ್ವಯಕ್ಕೆ ಅರ್ಹರಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಸರಕಾರ ಹೇಳಿತ್ತು.

ಆದರೆ ಅರ್ಜಿದಾರರು, “ಅಕಾಡೆಮಿ ಮತ್ತು ಮಂಡಳಿಯು ವೃಂದ ಮತ್ತು ನೇಮಕಾತಿ ನಿಯಮಗಳನ್ನು (ಸಿ ಆ್ಯಂಡ್ ಆರ್ ನಿಯಮ) ರೂಪಿಸಲು ವಿಫಲವಾಗಿವೆ ಎಂಬ ಅಂಶವು ಪರಿಸ್ಥಿತಿಯಲ್ಲಿ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ಇದು ಸರಕಾರ ಅನುಮೋದಿಸಿದ ಹುದ್ದೆಯಾಗಿರುತ್ತದೆ. ಪಿಂಚಣಿಗೆ ಸಂಬಂಧಿಸಿದ ನಿಬಂಧನೆಗಳು ಅವರಿಗೆ ಅನ್ವಯಿಸುವುದಿಲ್ಲವೆಂದು ಹೇಳುವುದು ಸರಿಯಲ್ಲ” ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.

ವಾದ-ಪ್ರತಿವಾದ ಆಲಿಸಿದ ಬಳಿಕ ಹೈಕೋರ್ಟ್ ನ್ಯಾಯಾಪೀಠವು, ”ಅಕಾಡೆಮಿ ಮತ್ತು ಮಂಡಳಿಯ ಸಿಬ್ಬಂದಿ ಸರ್ಕಾರಿ ಸಿಬ್ಬಂದಿಯಾಗಿದ್ದರೂ ಸಂಬಂಧಿತ ನಿಯಮಗಳಡಿಯಲ್ಲಿ ಅವರ ಸೇವೆಯನ್ನು ಪಿಂಚಣಿಗೆ ಅರ್ಹಗೊಳಿಸುವ ಯಾವುದೇ ನಿಬಂಧನೆ ಇಲ್ಲ,” ಎಂದು ಆದೇಶಿಸಿದೆ.

ಅಲ್ಲದೆ, ”ವಿಷಯದ ಎಲ್ಲಾ ಸಂಬಂಧಿತ ಅಂಶಗಳನ್ನು ಮತ್ತು ಇತರ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹೊರಡಿಸಲಾದ ಆದೇಶಗಳನ್ನು ಗಮನಿಸಿ, ಮಾಹಿತಿಯುಕ್ತ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಅರ್ಜಿದಾರರ ಉದ್ಯೋಗವನ್ನು ಪಿಂಚಣಿಗೆ ಅರ್ಹ ಗೊಳಿಸಬೇಕೇ ಎಂದು ನಿರ್ಧಾರತೆಗೆದುಕೊಳ್ಳುವುದು ಸರಕಾರದ ವಿವೇಚನೆಗೆ ಬಿಟ್ಟಿದ್ದು. ಜತೆಗೆ, ನಾಲ್ಕು ತಿಂಗಳ ಅವಧಿಯೊಳಗೆ ಮಾಧ್ಯಮ ಅಕಾಡೆಮಿ ಮತ್ತು ಮದ್ಯಪಾನ ಸಂಯಮ ಮಂಡಳಿ ಮನವಿ ಆಲಿಸಿದ ನಂತರ ಮಾಹಿತಿಯುಕ್ತ ಆದೇಶ ಹೊರಡಿಸುವಂತೆ ನ್ಯಾಯಾಲಯ ಸರಕಾರಕ್ಕೆ ನಿರ್ದೇಶನ ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.