ಹೆಚ್ಚುವರಿ ಪೀಠಗಳ ಸ್ಥಾಪಿಸುವ ಅಧಿಕಾರ ಹೈಕೋರ್ಟ್ ಸಿಜೆಗೆ ಇದೆ : ಸುಪ್ರೀಂ ಕೋರ್ಟ್
ನವದೆಹಲಿ: ನ್ಯಾಯಾಂಗ ವ್ಯವಹಾರ, ಕಲಾಪಗಳನ್ನು ಸುಗಮವಾಗಿ ನಡೆಸಲು ಹೆಚ್ಚುವರಿ ಪೀಠಗಳನ್ನು ಸ್ಥಾಪಿಸುವ ಅಧಿಕಾರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಕೊಲ್ಲಾಪುರದಲ್ಲಿ ಬಾಂಬೆ ಹೈಕೋರ್ಟ್ ನ ನ್ಯಾಯಾಧೀಶರು ಮತ್ತು ವಿಭಾಗೀಯ ಪೀಠಗಳು ಕಾರ್ಯನಿರ್ವಹಿಸಲು ಆಗಸ್ಟ್ 1ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ರಂಜೀತ್ ಬಾಬುರಾವ್ ನಿಂಬಾಳ್ಳರ್ ಎಂಬುವವರು ಸುಪ್ರೀಂಕೋರ್ಟ್ ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.
ಈ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ಆಗಸ್ಟ್ 1ರ ಅಧಿಸೂಚನೆಯನ್ನು ಎತ್ತಿಹಿಡಿದಿದೆ. ‘ನ್ಯಾಯಾಂಗ ಕೆಲಸದ ಹಂಚಿಕೆಯು ಮುಖ್ಯ ನ್ಯಾಯಮೂರ್ತಿಗಳ ವಿಶೇಷ ಹಕ್ಕು. ಆದರೆ, ಇದಕ್ಕಾಗಿ ರಾಜ್ಯಪಾಲರ ಅನುಮೋದನೆ ಪಡೆಯಬೇಕು. ನ್ಯಾಯಾಂಗ ಕೆಲಸಗಳ ಹಂಚಿಕೆ ಮತ್ತು ಪೀಠಗಳ ನಿರ್ಣಯವು ಮುಖ್ಯ ನ್ಯಾಯಮೂರ್ತಿಗಳ ವಿಶೇಷ ಅಧಿಕಾರವಾಗಿದೆ. ಆದರೆ, ಅಂತಹ ನಿರ್ಧಾರಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರ ಪೂರ್ವಾನುಮೋದನೆ ಪಡೆಯುವುದು ಕಡ್ಡಾಯ” ಎಂದು ಸ್ಪಷ್ಟಪಡಿಸಿದೆ.
ಮೂಲಸೌಕರ್ಯಗಳ ಸಾಧ್ಯತೆ ಮತ್ತು ಲಭ್ಯತೆಯನ್ನು ಪರಿಗಣಿಸಿ ಕೊಲ್ಲಾಪುರವನ್ನು ಹೆಚ್ಚುವರಿ ಪೀಠದ ಸ್ಥಳವಾಗಿ ನಿಗದಿಪಡಿಸಿ ಹೈಕೋರ್ಟ್ ಪ್ರಸ್ತಾವ ಸಿದ್ಧಪಡಿಸಿರುವುದನ್ನು ಪೀಠವು ಗಮನಿಸಿತು.
ಕೊಲ್ಹಾಪುರದಲ್ಲಿ ಲಭ್ಯವಿರುವ ಮೂಲಸೌಕರ್ಯ ಮತ್ತು ಭೌಗೋಳಿಕ ಅಗತ್ಯತೆಗಳನ್ನು ಪರಿಗಣಿಸಿಯೇ ಹೈಕೋರ್ಟ್ ಈ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಕೊಲ್ಲಾಪುರ, ಸಾಂಗ್ಲಿ, ಸತಾರಾ, ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳಲ್ಲಿ ದಾಖಲಾಗುವ ಪ್ರಕರಣಗಳನ್ನು ಮುಖ್ಯ ನ್ಯಾಯಮೂರ್ತಿಗಳ ಆಡಳಿತಾತ್ಮಕ ನಿರ್ದೇಶನಗಳಿಗೆ ಅನುಗುಣವಾಗಿ ಕೊಲ್ಲಾಪುರ ಪೀಠಕ್ಕೆ ವಹಿಸಲಾಗುತ್ತದೆ ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
