23/04/2026

Law Guide Kannada

Online Guide

ವಿಚ್ಛೇದನ ಅರ್ಜಿ ವಜಾ: ಪತ್ನಿ ದೂರ ವಾಸವಿದ್ದ ಮಾತ್ರಕ್ಕೆ ಪತಿಯನ್ನು ಶಾಶ್ವತವಾಗಿ ತೊರೆದಂತೆ ಅಲ್ಲ- ಹೈಕೋರ್ಟ್

ಬೆಂಗಳೂರು: ಪತ್ನಿ ದೂರವಿದ್ದಾಳೆ ಎಂಬ ಕಾರಣ ನೀಡಿ ವಿಚ್ಛೇದನ ಕೋರಿದ್ದ ಪತಿಯ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.

ಬೆಳ್ತಂಗಡಿ ತಾಲೂಕಿನ ವ್ಯಕ್ತಿಯೊಬ್ಬರು ಕೇರಳದ ಪಯ್ಯನೂರು ಮೂಲದ ಮಹಿಳೆಯನ್ನು 2009ರಲ್ಲಿ ವಿವಾಹವಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಪತ್ನಿ ತನ್ನನ್ನು ಬಿಟ್ಟು ತವರು ಮನೆಗೆ ಹೋಗಿದ್ದು. ವಾಪಸ್ ಬರಲು ನಿರಾಕರಿಸುತ್ತಿದ್ದಾರೆ. ಹೀಗಾಗಿ ವಿಚ್ಚೇದನ ನೀಡಬೇಕು ಎಂದು ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಮತ್ತು ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ಪೀಠವು, ಪತ್ನಿಯು ಪತಿಯ ವಿರುದ್ಧ ಯಾವುದೇ ದ್ವೇಷ ಭಾವನೆ ಹೊಂದಿಲ್ಲದೆ, ಕೇವಲ ಕಾರಣಾಂತರಗಳಿಂದ ಕೆಲವು ವರ್ಷಗಳ ಕಾಲ ದೂರ ವಾಸಿಸುತ್ತಿದ್ದಾಳೆ ಎನ್ನುವ ಮಾತ್ರಕ್ಕೆ ಆಕೆ ಪತಿಯನ್ನು ಶಾಶ್ವತವಾಗಿ ತೊರೆದಿದ್ದಾಳೆ ಎಂದು ಅರ್ಥೈಸಲು ಸಾಧ್ಯವಿಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ಅರ್ಜಿದಾರ ಪತಿ ಮಗು ತನ್ನದಲ್ಲ ಎಂದು ವಾದಿಸಿದ್ದರು. ಆದರೆ, ಮಗುವಿಗೆ ಜೀವನಾಂಶ ನೀಡಬೇಕೆಂಬ ವಿಚಾರಣಾ ನ್ಯಾಯಾಲಯದ ಆದೇಶವನ್ನು ಅವರು ಪ್ರಶ್ನಿಸಿರಲಿಲ್ಲ. ಇದು ಮಗು ಅವರದ್ದೇ ಎಂಬ ಅಂಶವನ್ನು ಸೂಚಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಪತ್ನಿ ಪತಿಯ ಅನುಮತಿಯಿಲ್ಲದೆ ತವರು ಮನೆಗೆ ಹೋಗಿದ್ದಾರೆ ಎಂಬ ಆರೋಪ ಸುಳ್ಳೆಂದು ಕಂಡುಬಂದಿದೆ. ಪಾಟೀ ಸವಾಲಿನಲ್ಲಿ ಪತ್ನಿ ಪತಿಯ ಅನುಮತಿ ಪಡೆದೇ ತವರು ಮನೆಗೆ ತೆರಳಿದ್ದಾರೆ ಎಂಬ ಅಂಶ ಸಾಬೀತಾಗಿದೆ. ಗರ್ಭಿಣಿಯಾಗಿದ್ದಾಗಲೂ ಪತ್ನಿಗೆ ಸರಿಯಾದ ಚಿಕಿತ್ಸೆ ನೀಡದೆ. ಮನೆಯ ಕಷ್ಟದ ಕೆಲಸಗಳನ್ನು ಮಾಡುವಂತೆ ಒತ್ತಾಯಿಸಲಾಗುತ್ತಿತ್ತು. ಅತಿರೇಕದ ಆಚರಣೆಗಳನ್ನು ಪಾಲಿಸಲು ಪತ್ನಿಯ ಮೇಲೆ ಒತ್ತಡ ಹೇರಲಾಗುತ್ತಿತ್ತು ಎಂಬ ಪತ್ನಿ ಪರ ವಕೀಲರ ವಾದವನ್ನು ನ್ಯಾಯಪೀಠ ಪರಿಗಣಿಸಿತು.

ಪತ್ನಿ ತನ್ನನ್ನು ತ್ಯಜಿಸಿ ಹೋಗಿದ್ದಾರೆಂಬ ಪತಿಯ ಆರೋಪಕ್ಕೆ ಯಾವುದೇ ಬಲವಾದ ಸಾಕ್ಷ್ಯಾಧಾರಗಳಿಲ್ಲ. ಆದ್ದರಿಂದ. ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದ ನ್ಯಾಯಪೀಠವು, ಪತಿಯ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.