SC / ST ಕಾಯ್ದೆಯಡಿ ಕೇವಲ ‘ನಿಂದನೀಯ ಭಾಷೆ ಬಳಕೆ’ ಅಪರಾಧವಲ್ಲ- ಸುಪ್ರೀಂ ಸ್ಪಷ್ಟ ತೀರ್ಪು
ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ,1989ರ ವ್ಯಾಪ್ತಿಯನ್ನು ಸ್ಪಷ್ಟಪಡಿಸುವ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.
ಕೇವಲ ನಿಂದನೀಯ ಭಾಷೆಯು ಕಾಯ್ದೆಯಡಿ ಅಪರಾಧವಾಗುವುದಿಲ್ಲ. ಅದು ಜಾತಿಯ ಆಧಾರದಲ್ಲಿ ವ್ಯಕ್ತಿಯನ್ನು ಅವಮಾನಿಸುವ ಉದ್ದೇಶದಿಂದ ಬಳಕೆಯಾಗಿದ್ದರೆ ಮಾತ್ರ ಅಪರಾಧವಾಗುತ್ತದೆ ಮತ್ತು ಜಾತಿಯ ಬಗ್ಗೆ ತಿಳಿದಿದ್ದರೂ ಕೇವಲ ಅವಮಾನಿಸುವುದು ಇಂತಹ ನಿರ್ದಿಷ್ಟ ಉದ್ದೇಶವಿಲ್ಲದಿದ್ದರೆ ಶಿಕ್ಷಾರ್ಹವಲ್ಲ ಎಂದು ಹೇಳಿದೆ.
ಅಂಗನವಾಡಿ ಕೇಂದ್ರದಲ್ಲಿ ನಿಂದನೆ ಮತ್ತು ಹಲ್ಲೆಯನ್ನು ಆರೋಪಿಸಿ ಎಸ್ಸಿ ಸಮುದಾಯದ ವ್ಯಕ್ತಿ ದಾಖಲಿಸಿದ್ದ ಎಫ್ ಐಆರ್ ಆಧಾರದಲ್ಲಿ ತನ್ನ ವಿರುದ್ಧ ಆರಂಭಿಸಲಾದ ಕಾನೂನು ಕ್ರಮವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಪಾಟ್ನಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿ ವಿಚಾರಣೆಗೆ ಅಂಗೀಕರಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಅಲೋಕ್ ಆರಾಧೆ ಅವರ ಪೀಠವು, ಬಲಿಪಶು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎಂಬ ಕೇವಲ ಅಂಶವು ಸಾಕಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿತು. ಮೇಲ್ಮನವಿದಾರರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ಪೀಠ ರದ್ದುಗೊಳಿಸಿತು.
ಮೇಲ್ಮನವಿದಾರರು ಯಾವುದೇ ಜಾತಿ ಆಧಾರಿತ ಅವಮಾನ ಅಥವಾ ಬೆದರಿಕೆಯನ್ನು ಮಾಡಿದ್ದಾರೆ ಎಂದು ಎಫ್ ಐಆರ್ ಅಥವಾ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ಗಮನಿಸಿದ ನ್ಯಾಯಪೀಠ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಕೇವಲ ಅವಹೇಳನಕಾರಿ ಅಥವಾ ನಿಂದನೀಯ ಭಾಷೆಯ ಬಳಕೆಯನ್ನು ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿತು.
ಒಂದು ಅಪರಾಧವು ಕಾನೂನಿನ ಅಡಿಯಲ್ಲಿ ಬರಬೇಕಾದರೆ, ಆ ಕೃತ್ಯವನ್ನು ವ್ಯಕ್ತಿಯ ಜಾತಿಯ ಆಧಾರದ ಮೇಲೆ ಅವಮಾನಿಸುವ ನಿರ್ದಿಷ್ಟ ಉದ್ದೇಶದಿಂದ ಮಾಡಲಾಗಿದೆ ಎಂದು ಸಾಬೀತುಪಡಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಆರೋಪಗಳು ಅಸ್ಪಷ್ಟ ಮತ್ತು ಸಾಮಾನ್ಯವೆಂದು ಕಂಡುಕೊಂಡಿತು. ಮೇಲ್ಮನವಿದಾರರ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341, 323, 504, 506, ಮತ್ತು 34 ಮತ್ತು Sಅ/Sಖಿ ಕಾಯ್ದೆಯ ಸೆಕ್ಷನ್ 3(1)(ಡಿ) ಮತ್ತು 3(1)(s) ಅಡಿಯಲ್ಲಿ ಆರೋಪ ಹೊರಿಸಲಾಯಿತು. ಸುಪ್ರೀಂ ಕೋರ್ಟ್ ಆರೋಪಗಳು ಅಸ್ಪಷ್ಟ ಮತ್ತು ಸಾಮಾನ್ಯವೆಂದು ಕಂಡುಕೊಂಡಿತು, ಯಾವುದೇ ನಿರ್ದಿಷ್ಟ ಕ್ರಿಮಿನಲ್ ಕೃತ್ಯವನ್ನು ಸ್ಪಷ್ಟವಾಗಿ ಉಲ್ಲೇಖಿಸಲಿಲ್ಲ. ಸೆಕ್ಷನ್ 3(1)(ಡಿ) ಅನ್ನು ವ್ಯಾಖ್ಯಾನಿಸುತ್ತಾ, ನ್ಯಾಯಾಲಯವು ಈ ಅಪರಾಧಕ್ಕೆ ಎರಡು ಷರತ್ತುಗಳು ಅತ್ಯಗತ್ಯ ಎಂದು ಹೇಳಿದೆ.
ಮೊದಲನೆಯದಾಗಿ, ದೂರುದಾರರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಸದಸ್ಯರಾಗಿರಬೇಕು ಮತ್ತು ಎರಡನೆಯದಾಗಿ, ಅವಮಾನ ಅಥವಾ ಬೆದರಿಕೆಯನ್ನು ಅವನ ಅಥವಾ ಅವಳ ಜಾತಿ ಗುರುತಿನ ಕಾರಣದಿಂದಾಗಿ ಮಾತ್ರ ವಿಧಿಸಬೇಕು. ಅದೇ ರೀತಿ, ಸೆಕ್ಷನ್ 3(1)(s) ಗೆ ಸಂಬಂಧಿಸಿದಂತೆ, ಆರೋಪಗಳು ಜಾತಿಯ ಹೆಸರಿನಿಂದ ಸಾರ್ವಜನಿಕವಾಗಿ ಉಚ್ಚರಿಸಲಾಗಿದೆ ಮತ್ತು ಜಾತಿಯನ್ನು ಕೀಳಾಗಿ ಕಾಣುವ ಉದ್ದೇಶವನ್ನು ಹೊಂದಿವೆ ಎಂದು ಸ್ಪಷ್ಟವಾಗಿ ಹೇಳಬೇಕು ಎಂದು ನ್ಯಾಯಪೀಠ ತಿಳಿಸಿತು.
ಹಾಗೆಯೇ ಎಫ್ಐಆರ್ ಅಥವಾ ದೋಷಾರೋಪ ಪಟ್ಟಿಯಲ್ಲಿ ಜಾತಿ ಆಧಾರಿತ ಅವಮಾನ ಅಥವಾ ಬೆದರಿಕೆಯನ್ನು ಆರೋಪಿಸಿರದಿದ್ದಾಗ ಎಸ್ಸಿ/ಎಸ್ಟಿ ಕಾಯ್ದೆಯಡಿ ಕಾನೂನು ಕ್ರಮವನ್ನು ಮಂದುವರಿಸುವ ಮೂಲಕ ವಿಚಾರಣಾ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯ ತಪ್ಪೆಸಗಿವೆ ಎಂದು ನ್ಯಾಯಪೀಠವು ಎತ್ತಿ ಹಿಡಿಯಿತು. ಜಾತಿಯ ಆಧಾರದಲ್ಲಿ ಅವಮಾನವು ಕಾಯ್ದೆಯ ಕಲಂ 3(1)(ಆರ್) ಮತ್ತು ಕಲಂ 3(1)(ಎಸ್) ಅಡಿ ಅಪರಾಧಗಳ ಪ್ರಮಖ ಅಂಶವಾಗಿದೆ ಎಂದು ಅದು ಒತ್ತಿ ಹೇಳಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
