23/04/2026

Law Guide Kannada

Online Guide

ಅರ್ಥಹೀನ ವಾದಪತ್ರ, ‘ಮೌಲ್ಯಯುತ’ ಸಮಯ ವ್ಯರ್ಥ: ವಕೀಲರಿಗೆ ಹೈಕೋರ್ಟ್ ತೀವ್ರ ತರಾಟೆ

ಅಲಹಾಬಾದ್: ಕಕ್ಷಿಗಾರರ ಅರ್ಥಹೀನ ವಾದಪತ್ರಗಳನ್ನು ವಕೀಲರು ಸ್ವೀಕರಿಸಬಾರದು. ಇದರಿಂದ ಕೋರ್ಟಿನ ‘ಮೌಲ್ಯಯುತ’ ಸಮಯ ವ್ಯರ್ಥವಾಗುತ್ತದೆ ಎಂಉ ಯುವ ವಕೀಲರೊಬ್ಬರಿಗೆ ಅಲಹಾಬಾದ್ ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡ ಪ್ರಸಂಗ ನಡೆದಿದೆ.

ಡಿಆರ್ಟಿ ಕಾರ್ಯವಿಧಾನಗಳನ್ನು ಪ್ರಶ್ನಿಸಿ ಸಂವಿಧಾನದ ಕಲಂ 227 ಅಡಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅವರನ್ನೊಳಗೊಂಡ ಪೀಠವು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕ್ಷುಲ್ಲಕ ಮತ್ತು ಅರ್ಥಹೀನ ವಾದಪತ್ರಗಳೊಂದಿಗೆ ವಕೀಲರು ಕೋರ್ಟ್ ಮೆಟ್ಟಿಲೇರಬಾರದು. ಕಕ್ಷಿಗಾರರ ಅರ್ಥಹೀನ ವಾದಪತ್ರಗಳನ್ನು ವಕೀಲರು ಸ್ವೀಕರಿಸಬಾರದು. ಇದರಿಂದ ಕೋರ್ಟಿನ ‘ಮೌಲ್ಯಯುತ’ ಸಮಯ ವ್ಯರ್ಥವಾಗುತ್ತದೆ ಎಂದು ಚಾಟಿ ಬೀಸಿತು.

ವಕೀಲನು ತನ್ನ ಕಕ್ಷಿಗಾರನ ಮುಖವಾಣಿ (mouthpiece) ಆಗಬಾರದು. ಯಾವುದೇ ಕಕ್ಷಿಗಾರ ಅರ್ಥವಿಲ್ಲದ ಅಥವಾ ತೀರಾ ನಿರರ್ಥಕವಾದ ಅರ್ಜಿಯನ್ನು ಸಲ್ಲಿಸುವಂತೆ ಅಥವಾ ಅಂಥ ವಾದವನ್ನು ಮುಂದಿಡುವಂತೆ ಹಠ ಹಿಡಿದರೆ, ಅದನ್ನು ಮಾಡಬೇಡಿ ಎಂದು ವಕೀಲನು ತಮ್ಮ ಕಕ್ಷಿದಾರರಿಗೆ ಬುದ್ಧಿವಾದ ಹೇಳಬೇಕು. ಹಾಗೂ ಅಂಥ ಅರ್ಥವಿಲ್ಲದ ವಾದಪತ್ರವನ್ನು ಸ್ವೀಕರಿಸುವುದರಿಂದ ದೂರ ಉಳಿಯಬೇಕು ಎಂದು ಹೈಕೋರ್ಟ್ ನ್ಯಾಯಪೀಠವು ಸಲಹೆ ನೀಡಿತು.

ಈ ಅರ್ಜಿಯಲ್ಲಿ, 2002ರ SARFAESI ಕಾಯ್ದೆ ಅಡಿಯಲ್ಲಿ ದಾಖಲಾದ ಸೆಕ್ಯುರಿಟೈಜೇಷನ್ ಅರ್ಜಿಯೊಂದರಲ್ಲಿ ಲಕ್ಷದಲ್ಲಿನ ಸಾಲ ವಸೂಲಾತಿ ನ್ಯಾಯಮಂಡಳಿ (DRT) ರಿಜಿಸ್ಟ್ರಾರ್ ಅವರು ಹೊರಡಿಸಿದ್ದ ನೋಟಿಸ್ ಅನ್ನು ಪ್ರಶ್ನಿಸಲಾಗಿತ್ತು.

ಇದನ್ನು ದಾಖಲೆ ಮೇಲೆ ಇರಿಸುವುದು ಅಗತ್ಯವೆಂದು ನ್ಯಾಯಾಲಯ ಭಾವಿಸುತ್ತದೆ. ಇಂದು ಹೊಸ ಅರ್ಜಿಗಳ ಪಟ್ಟಿಯಲ್ಲಿ 207 ಪ್ರಕರಣಗಳು, ಹೆಚ್ಚುವರಿ ಪಟ್ಟಿಯಲ್ಲಿ 128 ಪ್ರಕರಣಗಳು ಹಾಗೂ ಮತ್ತು ದಿನನಿತ್ಯದ ಐಎ (IA) ಪಟ್ಟಿಯಲ್ಲಿ 51 ಪ್ರಕರಣಗಳನ್ನು ಲಿಸ್ಟ್ ಮಾಡಲಾಗಿದೆ ಎಂದು ನ್ಯಾಯಪೀಠ ತಿಳಿಸಿತು.

ಅರ್ಜಿದಾರರ ಪರ ಹಾಜರಾದ ಪ್ರಾಜ್ಞ ವಕೀಲರಿಗೆ ನ್ಯಾಯಾಲಯವು ಪುನಃ ಪುನಃ, ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡದೆ, ಈಗಾಗಲೇ ಬಾಕಿಯಿರುವ ಸೆಕ್ಯುರಿಟೈಜೇಷನ್ ಅರ್ಜಿಯ ವಿಚಾರಣೆಯಾಗುತ್ತಿರುವ ಡಿಆರ್ ಮುಂದೆ ತಮ್ಮ ವಾದಗಳನ್ನು ಮುಂದಿಡಲು ಮನವಿ ಮಾಡಿತು. ಆದರೂ ಅವರ ಹಠದ ಕಾರಣದಿಂದಾಗಿ, ಈ ನ್ಯಾಯಾಲಯವು ವಿವರವಾದ ತೀರ್ಪಿನ ಮೂಲಕ ಈ ಅರ್ಜಿಯನ್ನು ತೀರ್ಮಾನಿಸಬೇಕಾಯಿತು. ಇದರಿಂದಾಗಿ ನ್ಯಾಯಾಲಯದ ಅಮೂಲ್ಯ ಸಮಯ ಅನಾವಶ್ಯಕವಾಗಿ ವ್ಯರ್ಥವಾಯಿತು. ಆ ಸಮಯವನ್ನು ಇನ್ನಿತರ ಪ್ರಕರಣಗಳ ನಿರ್ಣಯಕ್ಕೆ ಬಳಸಬಹುದಾಗಿತ್ತು ಎಂದು ಕೋರ್ಟ್ ಹೇಳಿತು.

ವಕೀಲರು ಕೇವಲ 2024ನೇ ವರ್ಷದಲ್ಲಿ ಬಾರ್ ಕೌನ್ಸಿಲ್ನಲ್ಲಿ ನೋಂದಾಯಿತರಾಗಿದ್ದಾರೆ ಎಂಬುದನ್ನು ಗಮನಿಸಿದ ಪೀಠವು, ಸಾಮಾನ್ಯವಾಗಿ ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದ ಕಾರಣಕ್ಕೆ ದಂಡ ವಿಧಿಸಬೇಕಾಗಿತ್ತು. ಆದರೆ ಅರ್ಜಿದಾರರ ಪರ ಹಾಜರಾದ learned Counsel ಅವರು ಯುವ ಹಾಗೂ ಅನುಭವವಿಲ್ಲದ ವಕೀಲರಾಗಿದ್ದು, ಕೇವಲ 2024ನೇ ವರ್ಷದಲ್ಲೇ ಬಾರ್ ಕೌನ್ಸಿಲ್ನಲ್ಲಿ ನೋಂದಾಯಿತರಾಗಿರುವುದನ್ನು ಪರಿಗಣಿಸಿ, ನ್ಯಾಯಾಲಯವು ಮೃಧು ಧೋರಣೆ ತಳೆದು ದಂಡ ವಿಧಿಸುತ್ತಿಲ್ಲ. ಆದರೂ, ವಕೀಲರು ನ್ಯಾಯಾಲಯದ ಮುಂದೆ ತಮ್ಮ ಗ್ರಾಹಕರನ್ನು ಪ್ರತಿನಿಧಿಸುತ್ತಾರೆ ಎಂಬ ಕಾರಣಕ್ಕೆ ಅವರು ಗ್ರಾಹಕರ ಕೇವಲ ಮಾತಿನ ಯಂತ್ರ ಮಾತ್ರವಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಗ್ರಾಹಕ ಅರ್ಥವಿಲ್ಲದ ಅರ್ಜಿಯನ್ನು ಸಲ್ಲಿಸಲು ಅಥವಾ ಅಂಥ ವಾದವನ್ನು ಮುಂದಿಡಲು ಹಠ ಹಿಡಿದರೆ, ವಕೀಲರು ಅದನ್ನು ಮಾಡಬೇಡಿ ಎಂದು ಸಲಹೆ ನೀಡಬೇಕು ಮತ್ತು ಅಂಥ ಅರ್ಥವಿಲ್ಲದ ವಾದಪತ್ರವನ್ನು ಸ್ವೀಕರಿಸುವುದನ್ನು ನಿಲ್ಲಿಸಬೇಕು ಎಂದು ನ್ಯಾಯಪೀಠ ಖಡಕ್ ಸೂಚನೆಗಳನ್ನ ನೀಡಿತು.

ಅರ್ಜಿದಾರರ ಪರವಾಗಿ ವಕೀಲರಾದ ಸೂರ್ಯಾಂಶ್ ಕುಮಾರ್ ಅರೋರಾ ಹಾಗೂ ನೋಯೆಲ್ ವಿಕ್ಟರ್ ಹಾಜರಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.