23/04/2026

Law Guide Kannada

Online Guide

ನ್ಯಾಯಕ್ಕೆ ಸಾಹಿತ್ಯದ ಸ್ಪರ್ಶ: ದೀಕ್ಷಿತ್ ತೀರ್ಪುಗಳಲ್ಲಿ ವಿಶಿಷ್ಟತೆ

ನ್ಯಾಯ ತೀರ್ಪುಗಳಲ್ಲಿ ಸಾಹಿತ್ಯ ಮತ್ತು ತತ್ವಶಾಸ್ತ್ರದ ಉಲ್ಲೇಖಗಳನ್ನು ಬಳಸುವ ಮೂಲಕ ಗಮನ ಸೆಳೆಯುತ್ತಿರುವ ಒಡಿಶಾ ಹೈಕೋರ್ಟ್‌ನ ನ್ಯಾಯಮೂರ್ತಿ ಕೃಷ್ಣ ಶ್ರೀಪಾದ್ ದೀಕ್ಷಿತ್ ಮತ್ತೊಮ್ಮೆ ತಮ್ಮ ವಿಶಿಷ್ಟ ಶೈಲಿಯನ್ನು ಮೆರೆದಿದ್ದಾರೆ.

ಸ್ವಯಂ ವಿವರಣೆಗೂ ಅವಕಾಶ ಅಗತ್ಯ

ಆದಾಮ್ ಮತ್ತು ಈವ್ ಕಥೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿದ ನ್ಯಾಯಮೂರ್ತಿ ದೀಕ್ಷಿತ್, ಶಿಕ್ಷೆ ವಿಧಿಸುವ ಮೊದಲು ದೇವರೂ ಸಹ ಅವರಿಗೆ ತಮ್ಮ ಮಾತು ಹೇಳಿಕೊಳ್ಳುವ ಅವಕಾಶ ನೀಡಿದ್ದನ್ನು ಸೂಚಿಸಿದರು. ಈ ಹಿನ್ನೆಲೆಯಲ್ಲಿ, ಸ್ವಯಂ ವಿವರಣೆ ನೀಡುವ ಅವಕಾಶ ನೀಡದೆ ತೀರ್ಪು ನೀಡುವುದು ನೈಸರ್ಗಿಕ ನ್ಯಾಯತತ್ತ್ವಕ್ಕೆ ವಿರುದ್ಧವೆಂದು ನ್ಯಾಯಾಲಯ ಹೇಳಿದೆ. ಆದ್ದರಿಂದ, ನಾಗರಿಕ ಪರಿಣಾಮಗಳನ್ನು ಹೊಂದಿರುವ ಯಾವುದೇ ಹಣ ವಸೂಲಾತಿ ಕ್ರಮವನ್ನು ಪೂರ್ವ ವಿಚಾರಣೆ ಇಲ್ಲದೆ ಜಾರಿಗೊಳಿಸಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಜ್ಞಾನದಿಂದ ಗೌರವದತ್ತ – ಶಿಕ್ಷಣದ ಮಹತ್ವ
ಭಗವದ್ಗೀತೆ, ವಿಲಿಯಂ ಶೇಕ್ಸ್‌ಪಿಯರ್, ರವೀಂದ್ರನಾಥ ಟಾಗೋರ್ ಮತ್ತು ಚಾರ್ಲ್ಸ್ ಡಾರ್ವಿನ್ ಅವರ ಚಿಂತನೆಗಳನ್ನು ಆಧಾರವಾಗಿಸಿಕೊಂಡು, ಶಿಕ್ಷಣವು ವ್ಯಕ್ತಿಗತ ಮತ್ತು ವೃತ್ತಿಪರ ಪ್ರಗತಿಗೆ ದಾರಿ ಎಂದು ನ್ಯಾಯಾಲಯ ಒತ್ತಿಹೇಳಿದೆ.

“ಅಜ್ಞಾನವು ದೇವರ ಶಾಪ, ಜ್ಞಾನವು ಸ್ವರ್ಗಕ್ಕೆ ಹಾರಿಸುವ ರೆಕ್ಕೆ” ಎಂಬ ಶೇಕ್ಸ್‌ಪಿಯರ್‌ನ ‘ಹೆನ್ರಿ VI’ ನಾಟಕದ ಸಾಲಿನಿಂದ ತೀರ್ಪು ಆರಂಭಿಸಿದ ದೀಕ್ಷಿತ್, ಉನ್ನತ ವಿದ್ಯಾರ್ಹತೆ ಪಡೆದ ಪಿಯೋನ್‌ನ ಪದೋನ್ನತಿಯನ್ನು ಮಾನ್ಯಗೊಳಿಸಿದರು.

ನ್ಯಾಯವಿಲ್ಲದ ರಾಜ್ಯ ದರೋಡೆಕೋರರ ಗುಂಪು
ಇನ್ನೊಂದು ತೀರ್ಪಿನಲ್ಲಿ, ಬ್ರಿಟಿಷ್ ತತ್ವಜ್ಞಾನಿ ಜೆರೆಮಿ ಬೆಂಥಮ್ ಅವರ ಮಾತುಗಳನ್ನು ಉಲ್ಲೇಖಿಸಿ, ನಾಗರಿಕರ ಹಕ್ಕುಗಳನ್ನು ಕಾಪಾಡದ ಸರ್ಕಾರವನ್ನು “ದರೋಡೆಕೋರರ ಗುಂಪುಗೆ ಹೋಲಿಸಿದರು.

‘ಆಲಿಸ್ ಇನ್ ವಂಡರ್‌ಲ್ಯಾಂಡ್’ ಕಥೆಯನ್ನು ಉಲ್ಲೇಖಿಸಿ, “ರಾಜ್ಯವೇ ನಿಷ್ಠಾವಂತ ನಾಗರಿಕರ ಮೊದಲ ಶತ್ರುವೇ?” ಎಂಬ ಮೂಲ ಪ್ರಶ್ನೆಯನ್ನು ಅವರು ಎತ್ತಿದರು. ದೀರ್ಘಕಾಲ ಕಷ್ಟ ಅನುಭವಿಸಿದ್ದ ಪರಿಶಿಷ್ಟ ಜಾತಿಯ ಉದ್ಯೋಗಿಯ ಪ್ರಕರಣದಲ್ಲಿ, ನ್ಯಾಯಮೂರ್ತಿಗಳಾದ ದೀಕ್ಷಿತ್ ಮತ್ತು ದಾಸ್ ಸರ್ಕಾರದ ನಡೆಗೆ ತೀವ್ರ ತರಾಟೆ ತೆಗೆದುಕೊಂಡರು. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಟಾಗೋರ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಉಲ್ಲೇಖಗಳ ಮೂಲಕ ಸಮಾಜದಲ್ಲಿನ ಅಸ್ಪೃಶ್ಯತೆ ಮತ್ತು ಜಾತಿಯ ಅನ್ಯಾಯವನ್ನು ಖಂಡಿಸಿದರು.

ಸಂವಿಧಾನವೇ ಮಾರ್ಗದರ್ಶಿ

ಕರ್ನಾಟಕ ಹಿಜಾಬ್ ಪ್ರಕರಣದ ವಿಚಾರಣೆಯಲ್ಲಿ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಶಾಂತಿ ಕಾಪಾಡಿ ಸಂವಿಧಾನದ ಮೇಲೆ ನಂಬಿಕೆ ಇಡಬೇಕು ಎಂದು ದೀಕ್ಷಿತ್ ಕರೆ ನೀಡಿದರು. ಭಗವದ್ಗೀತೆಯನ್ನು ತಮ್ಮ ಮಾರ್ಗದರ್ಶಕ ತತ್ವವೆಂದು ಹೋಲಿಸಿ ಮಾತನಾಡಿದರು.
ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ಹಕ್ಕು ಕುರಿತು ಸಲ್ಲಿಸಿದ ಅರ್ಜಿಗಳ ವಿಚಾರಣೆಯಲ್ಲಿ, ಸಾರ್ವಜನಿಕ ಶಾಂತಿ ಮತ್ತು ಸಂವಿಧಾನಾತ್ಮಕ ಹಕ್ಕುಗಳ ನಡುವೆ ಸಮತೋಲನ ಸಾಧಿಸುವಂತೆ ನ್ಯಾಯಾಲಯ ನಡೆದುಕೊಂಡಿತು.

ವಿದ್ಯಾರ್ಥಿಯಿಂದ ನ್ಯಾಯಮೂರ್ತಿವರೆಗೆ ಪಯಣ

1964 ಜುಲೈ 20ರಂದು ಜನಿಸಿದ ದೀಕ್ಷಿತ್, ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾಗಲೇ ವಾದ ಪ್ರತಿವಾದಗಳಲ್ಲಿ ಚುರುಕಾಗಿ ಪಾಲ್ಗೊಂಡಿದ್ದರು. 1989ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡು, ಹೈಕೋರ್ಟ್‌ಗಳಲ್ಲಿ ವಿಶಿಷ್ಟವಾದ ವಕಾಲತ್ತನ್ನು ನಿರ್ಮಿಸಿಕೊಂಡು ನಂತರ ನ್ಯಾಯಮೂರ್ತಿಯಾಗಿ ಆಯ್ಕೆಯಾದರು.

ನ್ಯಾಯಮೂರ್ತಿ ದೀಕ್ಷಿತ್: ವಿಭಿನ್ನ ಕ್ಷೇತ್ರಗಳಲ್ಲಿ ಪರಿಣಿತಿ, ಜನಸಾಮಾನ್ಯರಿಗೆ ಹತ್ತಿರವಾದ ನ್ಯಾಯಧ್ವನಿ

ಕರ್ನಾಟಕ ಮತ್ತು ಮದ್ರಾಸ್ ಹೈಕೋರ್ಟ್‌ಗಳಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದ ನ್ಯಾಯಮೂರ್ತಿ ಕೃಷ್ಣ ಶ್ರೀಪಾದ್ ದೀಕ್ಷಿತ್, ಚುನಾವಣಾ ಕಾನೂನು, ಸೇವಾ ವಿಚಾರಗಳು, ಕೃಷಿ ಸುಧಾರಣೆಗಳು ಹಾಗೂ ಬ್ಯಾಂಕಿಂಗ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅನುಭವ ಹೊಂದಿದ್ದಾರೆ. ಬಳಿಕ ಅವರು ಭಾರತದ ಚುನಾವಣಾ ಆಯೋಗದ ಹಿರಿಯ ಸ್ಥಾಯಿ ವಕೀಲರಾಗಿ ಹಾಗೂ ಸಹಾಯಕ ಸೊಲಿಸಿಟರ್ ಜನರಲ್ ಆಗಿ ಪ್ರಮುಖ ಹುದ್ದೆಗಳನ್ನು ವಹಿಸಿಕೊಂಡಿದ್ದರು.

2018ರ ಫೆಬ್ರವರಿಯಲ್ಲಿ ಕರ್ನಾಟಕ ಹೈಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ನೇಮಲವಾದ ದೀಕ್ಷಿತ್, 2025ರ ಮೇನಲ್ಲಿ ಒಡಿಶಾ ಹೈಕೋರ್ಟ್‌ಗೆ ವರ್ಗಾಯಿಸಲ್ಪಟ್ಟರು. ತಮ್ಮ ವೃತ್ತಿಜೀವನದಲ್ಲಿ ದೈನಂದಿನ ಜೀವನ ಮತ್ತು ಸಂವಿಧಾನಾತ್ಮಕ ಮೌಲ್ಯಗಳಿಗೆ ಸಂಬಂಧಿಸಿದ ಅನೇಕ ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಹಿಜಾಬ್ ವಿವಾದ, ಆನ್‌ಲೈನ್ ಗೇಮಿಂಗ್ ನಿಯಂತ್ರಣ, ಜಿಎಸ್‌ಟಿ, ಪರಿಸರ ಸಂರಕ್ಷಣೆ, ಚುನಾವಣಾ ಸ್ವಾತಂತ್ರ್ಯ, ನಿವೃತ್ತರ ಹಕ್ಕುಗಳು, ಕಾರ್ಮಿಕರು ಹಾಗೂ ಹಿಂದುಳಿದ ವರ್ಗಗಳ ಹಕ್ಕುಗಳ ಕುರಿತಂತೆ ಅವರು ತೀರ್ಪು ನೀಡಿದ್ದಾರೆ.

ಅಪರೂಪದ ನ್ಯಾಯಧ್ವನಿ
ನ್ಯಾಯಮೂರ್ತಿ ದೀಕ್ಷಿತ್ ಅವರನ್ನು ವಿಭಿನ್ನಗೊಳಿಸುವುದು ಕೇವಲ ಅವರ ಉಲ್ಲೇಖಗಳು ಅಥವಾ ಭಾಷಣ ಶೈಲಿಯಲ್ಲ, ಕಾನೂನನ್ನು ಸರಳವಾಗಿ, ಜನರಿಗೆ ಅರ್ಥವಾಗುವಂತೆ ಹಾಗೂ ಚಿಂತನೆಗೆ ದಾರಿ ಮಾಡುವ ರೀತಿಯಲ್ಲಿ ತೀರ್ಪು ಸಾಮರ್ಥ್ಯವಾಗಿದೆ. ಈ ಮೂಲಕ ಅವರು ನ್ಯಾಯಾಂಗ ಮತ್ತು ಜನಸಾಮಾನ್ಯರ ನಡುವಿನ ಅಂತರವನ್ನು ಕಡಿಮೆ ಮಾಡುತ್ತಿದ್ದಾರೆ.

ಅವರ ತೀರ್ಪುಗಳು ವಕೀಲರಿಗೆ ಆಳವಾದ ವಿಶ್ಲೇಷಣೆಯನ್ನು ನೀಡಿದರೆ, ಸಾಮಾನ್ಯರಿಗೆ ಕಾನೂನಿನ ಅರಿವಿಗೆ ದಾರಿ ತೆರೆದಿವೆ. ಒಟ್ಟಿನಲ್ಲಿ, ಕಾನೂನು ಎಂದರೆ ಕೇವಲ ನಿಯಮಗಳ ಸಂಕಲನವೇ ಅಲ್ಲ, ಅದು ಮೌಲ್ಯಗಳು, ವಿಚಾರಗಳು ಮತ್ತು ಮಾನವೀಯತೆಯ ಪ್ರತಿಬಿಂಬವೆಂಬ ಸಂದೇಶವನ್ನು ಅವರ ತೀರ್ಪುಗಳು ನೀಡುತ್ತಿವೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.