ಬೆಂಗಳೂರು: ಸಾಮಾಜಿಕ ಜಾಲತಾಣದ ಪೋಸ್ಟಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಮೆಕ್ಯಾನಿಕಲ್ ಅರೆಸ್ಟ್ ಮತ್ತು ಎಫ್ ಐಆರ್ ಕುರಿತಂತೆ ಪೊಲೀಸರ ವಿರುದ್ದ ಗರಂ ಆದ ಕರ್ನಾಟಕ ಹೈಕೋರ್ಟ್ ಆರೋಪ ಎದುರಾದ ಕೂಡಲೇ ಕ್ರಮ ತೆಗೆದುಕೊಳ್ಳದೇ, ಮೊದಲು, ದೂರನ್ನು ಮೇಲ್ನೋಟಕ್ಕೆ ಪರಿಶೀಲಿಸಿ. ಎಫ್ ಐಆರ್ ದಾಖಲಿಸುವ ಮುನ್ನ ಪ್ರಾಥಮಿಕ ತನಿಖೆಗೆ ಆದ್ಯತೆ ನೀಡಿ ಎಂದು ಸಲಹೆಗಳನ್ನ ನೀಡಿದೆ.

ಒಂದು ಪೋಸ್ಟ್ ವಿರುದ್ದ ಪೊಲೀಸರು ಒಂದೇ ದಿನ ಏಳು ಎಫ್ ಐಆರ್ ಅನ್ನು ದಾಖಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಪೀಠವು, ಕರ್ನಾಟಕ ಪೊಲೀಸರಿಗೆ ಹೊಸ ಐದು ಮಾರ್ಗಸೂಚಿಗಳನ್ನ ಹೊರಡಿಸಿದೆ.

ಒಂದು ಪೋಸ್ಟ್ ವಿರುದ್ದ ಪೊಲೀಸರು ಒಂದೇ ದಿನ ಏಳು ಎಫ್ ಐಆರ್ ಅನ್ನು ದಾಖಲಿಸಿದ್ದರು. ಯಾರ ಮೇಲಾದರೂ, ಅಪರಾಧ ಪ್ರಕರಣ ದಾಖಲಾದ ಬೆನ್ನಲ್ಲೇ ಬಂಧನ ನಡೆಯಬಾರದು ಎಂದು ಸೂಚಿಸಿರುವ ನ್ಯಾಯಪೀಠವು, ಸಾಮಾಜಿಕ ಜಾಲತಾಣದ ಪೋಸ್ಟಿಗೆ ಸಂಬಂಧಿಸಿದಂತೆ, ದೂರು ಸರಿಯಾಗಿ ಪರಿಶೀಲನೆಯಾಗದೇ ಬಂಧಿಸುವುದು ಮತ್ತು ಎಫ್ ಐಆರ್ ಹಾಕುವುದನ್ನು ತಡೆಯಲು, ಮಾರ್ಗಸೂಚಿಯನ್ನು ಅನುಸರಿಸುವಂತೆ, ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದೆ.

ಪ್ರಕರಣದ ವಿವರ…
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುರುಷರಕಟ್ಟೆ ಎನ್ನುವಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿ, ಅವರನ್ನು ಫಾಲೋ ಮಾಡಿದ ಆರೋಪದ ಮೇಲೆ ಆರು ಮಂದಿ ಯುವಕರನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈ ಸುದ್ದಿಯನ್ನು ‘ಕರ್ನಾಟಕ ಪೋರ್ಟ್ ಫೋಲಿಯೋ’ ಎನ್ನುವ ಎಕ್ಸ್ ಖಾತೆ ರಿಪೋಸ್ಟ್ ಮಾಡಿತ್ತು. ಇದಕ್ಕಾಗಿ, ಇವರ ಈ ಹ್ಯಾಂಡಲಿನ ಅಡ್ಮಿನ್ ವಿರುದ್ದ ಎಫ್ ಐಆರ್ ದಾಖಲಾಗಿತ್ತು.

ಪ್ರತಿವಾದಿಗಳು, ಇವರು ಸುಳ್ಳು ಮಾಹಿತಿಯನ್ನು ಹರಡುತ್ತಾ, ಕೋಮುದ್ವೇಷಕ್ಕೆ ಕಾರಣರಾಗುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಅವರ (ಕರ್ನಾಟಕ ಪೋರ್ಟ್ ಫೋಲಿಯೋ) ಮೇಲೆ, BNS 353(2) ಅಡಿಯಲ್ಲಿ ದೂರು ದಾಖಲಾಗಿತ್ತು. ಆದರೆ, ಪ್ರತಿವಾದಿಗಳ ದೂರಿಗೆ ಸಂಬಂಧಿಸಿದಂತೆ ಸಾಕ್ಷಿಯಿಲ್ಲ ಮತ್ತು ಮತ್ತು ದುರುದ್ದೇಶ ಸಾಬೀತಾಗಿಲ್ಲ ಎಂದು ನ್ಯಾಯಪೀಠವು ಎಫ್ಐಆರ್ ಅನ್ನು ರದ್ದುಗೊಳಿಸಿತ್ತು.

ಇದೀಗ ಈ ಕೇಸಿನ ವಿಚಾರಣೆಗೆ ಸಂಬಂಧಿಸಿದಂತೆ, ಹೈಕೋರ್ಟ್ ನ್ಯಾಯಪೀಠವು, ಕರ್ನಾಟಕ ಪೊಲೀಸರು ಪಾಲಿಸಬೇಕಾದ ಐದು ಅಂಶಗಳ ಮಾರ್ಗಸೂಚಿಯನ್ನು ಹೊರಡಿಸಿದ್ದು ಅವುಗಳು ಈ ಕೆಳಕಂಡಂತಿದೆ,..
ಸಾಮಾಜಿಕ ಜಾಲತಾಣಕ್ಕೆ ಸಂಬಂಧಿಸಿದಂತೆ, ಸುಪ್ರೀಂಕೋರ್ಟಿನ ಸತೇಂದರ್ ಕುಮಾರ್ ಅಂಟಿಲ್ ಮತ್ತು ತೆಲಂಗಾಣ ಹೈಕೋರ್ಟಿನ ಬಾಲು ಪ್ರಕರಣವನ್ನು ಉಲ್ಲೇಖಿಸಿ, ನ್ಯಾಯಪೀಠವು ಐದು ಮಾರ್ಗಸೂಚಿಯನ್ನು ಹೊರಡಿಸಿದೆ.

1. ಆರೋಪ ಎದುರಾದ ಕೂಡಲೇ ಕ್ರಮ ತೆಗೆದುಕೊಳ್ಳದೇ, ಮೊದಲು, ದೂರನ್ನು ಮೇಲ್ನೋಟಕ್ಕೆ ಪರಿಶೀಲಿಸಿ, ಏನು ಆರೋಪ ಮಾಡಲಾಗಿದೆಯೋ, ಆ ಅಪರಾಧದ ಅಂಶಗಳಿವೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಬೇಕು. ಶಿಕ್ಷಾರ್ಹ ಕಾಯಿದೆಯ ನಿಯಮಗಳನ್ನು ನಕಲು ಮಾಡಬೇಡಿ.
ಪೊಲೀಸರು ಇನ್ಮುಂದೇ ಸಿಕ್ಕ ಸಿಕ್ಕಂತೆ FIR ಹಾಕುವಂತಿಲ್ಲ: ಹೊಸ ಗೈಡ್ ಲೈನ್ಸ್ ಹೊಡಿಸಿದ ಹೈಕೋರ್ಟ್

2. ಸತತ ಎಫ್ ಐಆರ್ ಗಳನ್ನು ಪರಿಶೀಲಿಸಬೇಕು. ಒಂದೇ, ಘಟನೆಗೆ ಸಂಬಂಧಿಸಿದಂತೆ, ಈಗಾಗಲೇ ದೂರು ದಾಖಲಾಗಿದ್ದರೆ, ಮತ್ತೊಂದು ಹೊಸ ಎಫ್ ಐಆರ್ ದಾಖಲಿಸಬಾರದು. ದೂರುದಾರರು ಬೇರೆಯವರು ಆಗಿದ್ದರೂ, ಮತ್ತೊಂದು FIR ದಾಖಲಿಸಬಾರದು.

3. ಯಾವುದೇ ಬಂಧನ ಅಥವಾ ಎಫ್ಐಆರ್ ದಾಖಲಿಸುವ ಮುನ್ನ, BNS 173(3) ಅಡಿಯಲ್ಲಿ, ಅವಕಾಶ ಇರುವ ಕಡೆ, ಪ್ರಾಥಮಿಕ ತನಿಖೆಯನ್ನು ನಡೆಸುವುದಕ್ಕೆ ಆದ್ಯತೆಯನ್ನು ನೀಡಬೇಕು.
ಪೊಲೀಸರು ಇನ್ಮುಂದೇ ಸಿಕ್ಕ ಸಿಕ್ಕಂತೆ FIR ಹಾಕುವಂತಿಲ್ಲ: ಹೊಸ ಗೈಡ್ ಲೈನ್ಸ್ ಹೊಡಿಸಿದ ಹೈಕೋರ್ಟ್

4. ಕೇವಲ ಟೀಕೆ ಬಂಧನ/ ಎಫ್ಐಆರ್’ ಗೆ ಕಾರಣವಾಗಬಾರದು. BNS 353(2) ಅನ್ವಯವಾಗುವಂತೆ, ಪೋಸ್ಟಿನ ನೈಜ ಉದ್ದೇಶ ಸೇರಿದಂತೆ ನಿರ್ದಿಷ್ಟ ಅಂಶಗಳನ್ನು ಪರಿಶೀಲಿಸಬೇಕು. ಕೇವಲ ಟೀಕೆ ಟಿಪ್ಪಣಿಯನ್ನು ಈ ಕಾಯಿದೆಯಡಿಯಲ್ಲಿ ತರಬಾರದು. ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯಾಗಲಿ.

5. ಮೊದಲು ನೋಟಿಸ್ ನೀಡಿ ವಿಚಾರಣೆ ಮಾಡಿ . ಃಓS 35 ಮತ್ತು ಅರ್ನೇಶ್ ಕುಮಾರ್ ತೀರ್ಪನ್ನು ಉಲ್ಲೇಖಿಸಿದ ನ್ಯಾಯಮೂರ್ತಿಗಳು, ಬಂಧನದ ಅಗತ್ಯ ಇಲ್ಲದೇ ಇದ್ದಲ್ಲಿ ಸೆಕ್ಷನ್ 35(3) ನೋಟಿಸ್ ನೀಡಿ ವಿಚಾರಣೆಯನ್ನು ನಡೆಸಬಹುದು. ಎಫ್ ಐಆರ್ ದಾಖಲಾದ ಕೂಡಲೇ, ಬಂಧಿಸುವಂತಿಲ್ಲ.

ರಾಜ್ಯ ಪೊಲೀಸ್ ಮಹಾನಿರ್ದೇಶಕರು (DGP) ಈ ಮಾರ್ಗಸೂಚಿಯನ್ನು ರಾಜ್ಯದ ಎಲ್ಲಾ ಅಧಿಕಾರಿಗಳಿಗೆ ಸುತ್ತೋಲೆಯ ಮುಖಾಂತರ ತಲುಪಿಸಿ ಎಂದು ನ್ಯಾಯಪೀಠ ಸೂಚಿಸಿದೆ.

 

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು