06/03/2026

Law Guide Kannada

Online Guide

ಕೋಳಿಗಳು, ಆಡುಗಳದ್ದೂ ಜೀವವಲ್ಲವೇ? ಶ್ವಾನ ಪ್ರಿಯರಿಗೆ ಪ್ರಶ್ನಿಸಿದ ಸುಪ್ರೀಂ

ನವದೆಹಲಿ: ಬೀದಿ ನಾಯಿಗಳ ಹಾವಳಿ ಕುರಿತು ಹಲವಾರು ಅರ್ಜಿಗಳ ವಿಚಾರಣೆಯನ್ನು ಮುಂದುವರೆಸಿರುವ ಸುಪ್ರೀಂ ಕೋರ್ಟ್, ನಾಯಿಗಳ ಮೇಲೆ ಮಾತ್ರ ಕೇಂದ್ರಿತವಾದ ವಾದಗಳನ್ನು ಪ್ರಶ್ನಿಸಿ ಇತರ ಪ್ರಾಣಿಗಳ ಜೀವಗಳ ಬಗ್ಗೆ ವಿಚಾರವೇನು? ಕೋಳಿಗಳು ಮತ್ತು ಮೇಕೆಗಳಿಗೆ ಜೀವವಿಲ್ಲವೇ?” ಎಂದು ಪ್ರಶ್ನಿಸಿತು.

ಬೀದಿನಾಯಿ ಪ್ರಿಯರು ಮಂಡಿಸಿದ ವಾದಗಳನ್ನು ಪ್ರಶ್ನಿಸಿದ ಸರ್ವೋಚ್ಚ ನ್ಯಾಯಾಲಯವು,’ಇತರ ಪ್ರಾಣಿಗಳ ಜೀವದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕೋಳಿಗಳು ಮತ್ತು ಆಡುಗಳದ್ದೂ ಜೀವವಲ್ಲವೇ?’ಎಂದು ಕೇಳಿದೆ.

ಬೀದಿನಾಯಿಗಳ ನಿರ್ವಹಣೆ ಕುರಿತು ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಈ ಪ್ರಶ್ನೆಗಳನ್ನ ಹಾಕಿದೆ. ಎಲ್ಲ ಬೀದಿನಾಯಿಗಳನ್ನು ದೊಡ್ಡಿಗಳಲ್ಲಿ ಕೂಡಿಹಾಕುವ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ನಾಯಿಗಳು ಇಲ್ಲದಿದ್ದರೆ ತ್ಯಾಜ್ಯ ಮತ್ತು ಕೋತಿಗಳ ಸಮಸ್ಯೆಯನ್ನು ನಾವು ಹೇಗೆ ಎದುರಿಸುತ್ತೇವೆ?’ ಎಂದು ಪ್ರಾಣಿ ಹಕ್ಕು ಕಾರ್ಯಕರ್ತನೋರ್ವ ನಿವೇದಿಸಿಕೊಂಡರು. ಈ ವೇಳೆ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಕಳೆದ ವರ್ಷ ಬೀದಿನಾಯಿಗಳ ದಾಳಿಗೆ ತುತ್ತಾಗಿದ್ದ ಎಂಟರ ಹರೆಯದ ಬಾಲಕಿಯೋರ್ವಳ ತಂದೆ ವಿಚಾರಣೆ ವೇಳೆ ಉಪಸ್ಥಿತರಿದ್ದು,ಕಳೆದ ವರ್ಷ ಬೀದಿನಾಯಿಗಳು ಎಂಟರ ಹರೆಯದ ಮಗುವೊಂದನ್ನು ಕೊಂದ ಇನ್ನೊಂದು ಘಟನೆಯೂ ಸಂಭವಿಸಿತ್ತು. ಬೀದಿನಾಯಿಗಳ ಬಗ್ಗೆ ದೂರುಗಳನ್ನು ನೀಡಿದ್ದರೂ ನೋಯ್ಡಾ ಪ್ರಾಧಿಕಾರವು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ನಿವಾಸಿ ಕಲ್ಯಾಣ ಸಂಘಗಳು ತಮ್ಮ ಸೊಸೈಟಿಗಳನ್ನು ‘ನಾಯಿ ನಿಷೇಧಿತ ವಲಯಗಳು’ ಎಂದು ಘೋಷಿಸಲು ಅನುಮತಿ ನೀಡಬೇಕು ಎಂದೂ ಅವರು ವಾದಿಸಿದರು.

ಹಾಗೆಯೇ ಅರ್ಜಿದಾರರೊಬ್ಬರು ನ್ಯಾಯಾಲಯದ ಮುಂದೆ, ಬೀದಿ ನಾಯಿಗಳಿಂದ ದಾಳಿಗೊಳಗಾಗಿ ಸಾವನ್ನಪ್ಪಿದ 90 ವರ್ಷದ ವ್ಯಕ್ತಿಯ ಛಾಯಾಚಿತ್ರವನ್ನು ತೋರಿಸಲು ಪ್ರಯತ್ನಿಸಿದರು. ನೋಡಿ, ಬೀದಿ ನಾಯಿಗಳು ದಾಳಿ ಮಾಡಿದಾಗ ಹೀಗಾಗುತ್ತದೆ. ನ್ಯಾಯಾಲಯವು ಈ ಫೋಟೋ ತೋರಿಸುವ ಅಗತ್ಯವಿಲ್ಲ ಎಂದು ಹೇಳಿ ಪ್ರಯತ್ನವನ್ನು ತಡೆಯಿತು.

“ಬೀದಿ ನಾಯಿಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಮಾನವ ಹಕ್ಕುಗಳನ್ನು ರಕ್ಷಿಸಬೇಕು” ಎಂದು ಸಂತ್ರಸ್ತರ ಪರವಾಗಿ ವಾದಿಸಿದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಅಂತಾರಾಷ್ಟ್ರೀಯ ಪದ್ಧತಿಗಳನ್ನು ಉಲ್ಲೇಖಿಸಿ, ಜಪಾನ್ ಮತ್ತು ಯುಎಸ್ಎ “ಡ್ರಾಮ್ಬಾಕ್ಸ್” ಕಿಲ್ ಶೆಲ್ಟರ್ಗಳನ್ನು ಹೊಂದಿವೆ. ಅಲ್ಲಿ ನಾಯಿಗಳನ್ನು ಆಶ್ರಯ ಮನೆಗಳಿಗೆ ಕರೆದೊಯ್ಯಲಾಗುತ್ತದೆ ಮತ್ತು ದತ್ತು ತೆಗೆದುಕೊಳ್ಳದಿದ್ದರೆ ದಯಾಮರಣ ನೀಡಲಾಗುತ್ತದೆ. ಅದಕ್ಕಾಗಿಯೇ ಜಪಾನ್ ನಲ್ಲಿ ಬೀದಿ ನಾಯಿ ಸಮಸ್ಯೆ ಇಲ್ಲ ಮತ್ತು 1950 ರಿಂದ ಯಾವುದೇ ರೇಬೀಸ್ ಸಾವುಗಳು ಸಂಭವಿಸಿಲ್ಲ ಎಂದು ವಕೀಲರು ವಾದಿಸಿದರು.

ಪ್ರಕರಣದಲ್ಲಿ ಬೀದಿನಾಯಿ ಪ್ರಿಯರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ‘ನಾಯಿಪ್ರಿಯರು ಮತ್ತು ಪರಿಸರ ಪ್ರಿಯರಾಗಿ ನಾವು ಇಲ್ಲಿದ್ದೇವೆ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸರ್ವೋಚ್ಚ ನ್ಯಾಯಾಲಯವು, ‘ಇತರ ಪ್ರಾಣಿಗಳ ಜೀವದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕೋಳಿಗಳು ಮತ್ತು ಆಡುಗಳದ್ದೂ ಜೀವವಲ್ಲವೇ?’ಎಂದು ಪ್ರಶ್ನಿಸಿತು.

‘ನಾನು ಕೋಳಿ ತಿನ್ನುವುದನ್ನು ನಿಲ್ಲಿಸಿದ್ದೇನೆ. ಏಕೆಂದರೆ ಅವುಗಳನ್ನು ಕ್ರೂರ ರೀತಿಯಲ್ಲಿ ಪಂಜರಗಳಲ್ಲಿ ಇಡಲಾಗುತ್ತದೆ. ಒಂದು ಹುಲಿ ನರಭಕ್ಷಕ ಎಂದ ಮಾತ್ರಕ್ಕೆ ಎಲ್ಲ ಹುಲಿಗಳನ್ನು ಕೊಲ್ಲಬೇಕಿಲ್ಲ’ ಎಂದು ಸಿಬಲ್ ಉತ್ತರಿಸಿದರು. ವಿಶ್ವದಾದ್ಯಂತ ಬೀದಿನಾಯಿಗಳ ಸೆರೆ ಹಿಡಿಯುವಿಕೆ, ಸಂತಾನಶಕ್ತಿ ಹರಣ, ಲಸಿಕೆ ಹಾಕುವಿಕೆ ಮತ್ತು ಬಿಡುಗಡೆಯ (ಸಿಎಸ್ವಿಆರ್) ಮಾದರಿಯನ್ನು ಅನುಸರಿಸಲಾಗುತ್ತಿದೆ. ಇದು ನಗರಗಳಲ್ಲಿ ನಾಯಿಗಳ ಸಂಖ್ಯೆಯನ್ನು ಬಹುತೇಕ ಶೂನ್ಯಕ್ಕೆ ಇಳಿಸಿದೆ ಮತ್ತು ಯಶಸ್ವಿಯಾಗಿದೆ ಎಂದು ಕಪಿಲ್ ಸಿಬಲ್ ತಿಳಿಸಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.