ಮದುವೆ ಬಳಿಕ ಮಧುಚಂದ್ರಕ್ಕೆ ಪೆರೋಲ್ ಕೇಳಿದ ಖೈದಿ: ಕೋರ್ಟ್ ಕೊಟ್ಟ ಆದೇಶವಿದು..
ಬೆಂಗಳೂರು: ಕೊಲೆ ಆರೋಪದ ಮೇರೆಗೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕೈದಿಯೊಬ್ಬ ಪೆರೋಲ್ ಪಡೆದು ಮದುವೆಯಾದ ಬಳಿಕ ಮತ್ತೆ ಮದುಚಂದ್ರಕ್ಕೆ ಪೆರೋಲ್ ಗಾಗಿ ಅರ್ಜಿ ಸಲ್ಲಿಸಿದ್ದು ಸ್ವಲ್ಪ ದಿನ ಕಾಯುವಂತೆ ಹೈಕೋರ್ಟ್ ಆದೇಶಿಸಿದೆ.
ಆರೋಪಿಯ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯವು, ‘‘ಕೈದಿಯು ಕಾನೂನಿಗೆ ಅನುಗುಣವಾಗಿ ಆರು ತಿಂಗಳ ನಂತರ ಪುನಃ ಅರ್ಜಿ ಸಲ್ಲಿಸಬಹುದು. ಪೆರೋಲ್ ನೀಡಲು ಸ್ವಲ್ಪ ದಿನ ಕಾಯಬೇಕು ಎಂದು ಆದೇಶಿಸಿದೆ.
ಯುವತಿಯೊಬ್ಬಳನ್ನು ಕೊಲೆ ಮಾಡಿದ ಆರೋಪದ ಮೇಲೆ ಯುವಕನಿಗೆ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ 51ನೇ ಕೋರ್ಟ್ ನ್ಯಾಯಾಧೀಶ ಸಿ.ಬಿ.ಸಂತೋಷ್ 2024ರ ನ.26ರಂದು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲುವಾಸ ಅನುಭವಿಸುತ್ತಿರುವ ಅಪರಾಧಿ ಯುವಕ ಮದುವೆಗಾಗಿ ಪೆರೋಲ್ ಗೆ ಅರ್ಜಿ ಹಾಕಿದ್ದ. ಆ ಅರ್ಜಿಯನ್ನು ಜೈಲಿನ ಅಧಿಕಾರಿಗಳು 2025ರ ಜ. 16ರಂದು ತಿರಸ್ಕರಿಸಿ ಹಿಂಬರಹ ನೀಡಿ, ‘‘ಈ ಪ್ರಕರಣದಲ್ಲಿಅಪರಾಧಿ ಸ್ವತಃ ತನ್ನ ಮದುವೆಗೆ ಪೆರೋಲ್ ಕೇಳುತ್ತಿದ್ದಾನೆ. ಕೈದಿಯ ಮಗ, ಮಗಳು, ತಂಗಿ ಅಥವಾ ಅಕ್ಕನ ಮದುವೆಗೆ ಮಾತ್ರ ಪೆರೋಲ್ ನೀಡಲಾಗುತ್ತದೆ. ಅದೂ ತುರ್ತು ಪೆರೋಲ್ ನೀಡುವುದು ಏನಿದ್ದರೂ ನಿರ್ದಿಷ್ಟ ಸನ್ನಿವೇಶಗಳಲ್ಲಿ ಮಾತ್ರವೇ,’’ ಎಂದು ಹೇಳಿದ್ದರು.
ಜೈಲು ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ಕೈದಿ ತಾಯಿ ಹೈಕೋರ್ಟ್ ಮೊರೆ ಹೋಗಿದ್ದರು. ‘‘ವಯಸ್ಸಿಗೆ ಬಂದಿರುವ ನನ್ನ ಮಗ, ಮದುವೆ ಮಾಡಿಕೊಳ್ಳಬೇಕೆಂದು ಹಂಬಲಿಸುತ್ತಿರುವುದನ್ನು ಪರಿಗಣಿಸಬೇಕು. ಅದಕ್ಕಾಗಿ ಆತನಿಗೆ 15 ದಿನಗಳ ತುರ್ತು ಪೆರೋಲ್ ನೀಡಲು ಜೈಲಿನ ಅಧಿಕಾರಿಗಳಿಗೆ ನಿರ್ದೇಶಿಸಬೇಕು,’’ ಎಂದು ಕೋರಿದ್ದರು. ಆ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ಪೀಠ 2025ರ ಸೆ.24ರಂದು ಪುರಸ್ಕರಿಸಿತ್ತು. ಕರ್ನಾಟಕ ಕಾರಾಗೃಹಗಳು ಮತ್ತು ಸುಧಾರಣಾ ಸೇವಾ ಕೈಪಿಡಿ 2021ರ ಅನುಸಾರ ಪೆರೋಲ್ ನೀಡುವಂತೆ ಆದೇಶಿಸಿತ್ತು.
ಆ ನಂತರ ಹೊರಗೆ ಬಂದಿದ್ದ ಆರೋಪಿ ಯುವಕ, ಮದುವೆ ಮಾಡಿಕೊಂಡು ಪುನಃ ಜೈಲಿಗೆ ಮರಳಿದ್ದ. ಇದಾದ ಬಳಿಕ ಇತ್ತೀಚೆಗೆ ಈತ ಮತ್ತೊಂದು ಅರ್ಜಿ ಹಾಕಿ ‘ದಾಂಪತ್ಯ ಸಾಂಗತ್ಯ’ದ ಆಧಾರದಲ್ಲಿ ಪೆರೋಲ್ ನೀಡಲು ನಿರ್ದೇಶಿಸುವಂತೆ ಜೈಲಿನ ಅಧಿಕಾರಿಗಳಿಗೆ ಮನವಿ ಮಾಡಿದ್ದ. ಆದರೆ, ಈ ಅರ್ಜಿಯನ್ನು ಅಧಿಕಾರಿಗಳು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಈತ ಹೈಕೋರ್ಟ್ ಮೆಟ್ಟಿಲೇರಿದ್ದ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
