19/05/2025

Law Guide Kannada

Online Guide

ಉಪನೋಂದಣಾಧಿಕಾರಿಯ ಕರ್ತವ್ಯಲೋಪ – ನ್ಯಾಯಾಲಯದ ಕೈ ಸೇರಿದ ವರದಿ

ಮೈಸೂರು (ಪಶ್ಚಿಮ) ಉಪನೋಂಣಾಧಿಕಾರಿಯ ವಿರುದ್ಧ ನ್ಯಾಯಾಲಯಕ್ಕೆ ವರದಿ ನೀಡಿರುವ ಕೋರ್ಟ್ ಕಮಿಷನರ್ ಪಿ.ಜೆ.ರಾಘವೇಂದ್ರ ತಮ್ಮ ಅನುಭವವನ್ನು ಲಾ‌ಗೈಡ್ ಜೊತೆ ಹಂಚಿಕೊಂಡಿದ್ದಾರೆ

ಅಧಿಕಾರಿ ನಾಪತ್ತೆ

ಕಚೇರಿಯ ಸಮಯದಲ್ಲಿ ಅನಧಿಕೃತವಾಗಿ ಗಂಟೆಗಟ್ಟಲೆ ಗೈರು ಹಾಜರಾಗಿ ಸಾರ್ವಜನಿಕರನ್ನು ಸತಾಯಿಸುತ್ತಿದ್ದ ಮೈಸೂರಿನ ವಿಜಯನಗರದಲ್ಲಿರುವ ಉಪನೋಂದಣಾಧಿಕಾರಿಯ ವಿರುದ್ಧ ಕೋರ್ಟ್ ಕಮಿಷನರ್ ಪಿ.ಜೆ.ರಾಘವೇಂದ್ರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

ಪ್ರಕರಣದ ವಿವರ

ಮೈಸೂರಿನ ವಿಜಯನಗರ ನಿವಾಸಿ ಎಸ್.ಆರ್.ಚಂದ್ರಪ್ರಕಾಶ್ ಅವರು ನ್ಯಾಯಾಲಯದಲ್ಲಿ ಹೂಡಿದ್ದ ಸಿವಿಲ್ ಪ್ರಕರಣದಲ್ಲಿ ನ್ಯಾಯಾಲಯದ ಪರವಾಗಿ ಕ್ರಯಪತ್ರವನ್ನು ರಚಿಸಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಾಯಿಸಿ ಕೊಡಲು ಮೈಸೂರಿನ ನಾಲ್ಕನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯವು ವಕೀಲನಾದ ನನ್ನನ್ನು ಅಂದರೆ ಪಿ ಜೆ ರಾಘವೇಂದ್ರ ಆದ ನನ್ನನ್ನು ಕೋರ್ಟ್ ಕಮಿಷನರನ್ನಾಗಿ ನೇಮಿಸಿತ್ತು.

ಕೋರ್ಟ್ ಆದೇಶದಂತೆ ಕೋರ್ಟ್ ಕಮಿಷನರ್ ಆದ ನಾನು ಅವರು ನೋಂದಣಿಗೆ ಬೇಕಾದ ಎಲ್ಲಾ ಪಕ್ರಿಯೆಗಳನ್ನು ಪಾಲಿಸಿ 21/07/2023ರ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಎಸ್.ಆರ್.ಚಂದ್ರಪ್ರಕಾಶ್ ಹಾಗೂ ಅವರ ವಕೀಲರೊಂದಿಗೆ ವಿಜಯನಗರದಲ್ಲಿರುವ ಉಪನೋಂದಣಾಧಿಕಾರಿಗಳ (ಮೈಸೂರು ಪಶ್ಚಿಮ) ಕಚೇರಿಗೆ ಹಾಜರಾದೆವು.

ಮಾನವ ಹಕ್ಕುಗಳ ಉಲ್ಲಂಘನೆ…..!

ಸಬ್ ರಿಜಿಸ್ಟ್ರಾರ್ ಅವರ ಕೊಠಡಿಯ ಬಳಿ ನೂರಾರು ಸಾರ್ವಜನಿಕರು ದಾಖಲಾತಿಗಳನ್ನು ಕೈಯಲ್ಲಿ ಹಿಡಿದು ಸಬ್ ರಿಜಿಸ್ಟ್ರಾರರ ಸಹಿಗಾಗಿ ಕಾದು ನಿಂತಿದ್ದರು.ಆದರೆ ಸಂಜೆ 4 ಗಂಟೆಯಾದರೂ ಸಬ್ ರಿಜಿಸ್ಟ್ರಾರ್ ಸುಳಿವಿರಲಿಲ್ಲ. ಕಚೇರಿಯ ಉಳಿದ ಸಿಬ್ಬಂದಿಗಳನ್ನು ವಿಚಾರಿಸಲಾಗಿ “ಸಾಹೇಬರು ಎಲ್ಲಿ ಹೋಗಿದ್ದಾರೋ ಗೊತ್ತಿಲ್ಲ” ಎಂಬ ಬೇಜವಾಬ್ದಾರಿ ಉತ್ತರ ಲಭಿಸಿತು.

ತಮ್ಮ ಮೇಲಾಧಿಕಾರಿ ಗಂಟೆಗಟ್ಟಲೆ ಕಚೇರಿಯಿಂದ ನಾಪತ್ತೆಯಾದರೂ ತಮಗೇನೂ ಗೊತ್ತಿಲ್ಲ ಎಂದು ತೆಪ್ಪಗಿರುವ ಸಿಬ್ಬಂದಿಗಳ ವರ್ತನೆ ಖಂಡನೀಯ. ಅಕಸ್ಮಾತ್ ಈ ಸಬ್ ರಿಜಿಸ್ಟ್ರಾರ್ ಅಪಹರಣಕ್ಕೊಳಗಾಗಿದ್ದರೆ ಈ ಸಿಬ್ಬಂದಿಗಳು ಹೀಗೆಯೇ ಬೇಜವಾಬ್ದಾರಿಯಿಂದ ತೆಪ್ಪಗಿದ್ದರೆ ಅಧಿಕಾರಿಯ ಗತಿಯೇನಾಗಬೇಕು?

ಉಪ ನೋಂದಣಾಧಿಕಾರಿ ಆಸೀನರಾಗುವ ಕೊಠಡಿಯಲ್ಲಿ ಸಂದರ್ಶಕರು/ಸಾರ್ವಜನಿಕರು ಕೂರಲು ಯಾವುದೇ ಆಸನವೂ ಇರಲಿಲ್ಲ, ಅವಕಾಶವೂ ಇರಲಿಲ್ಲ. ಸಾರ್ವಜನಿಕರು ಈ ಅಧಿಕಾರಿಯನ್ನು ಕಾಯುತ್ತಾ ಜಾತಕ ಪಕ್ಷಿಯಂತೆ ಗಂಟೆಗಟ್ಟಲೆ ನಿಂತಿರಬೇಕಿತ್ತು.

ಮಧ್ಯಾಹ್ನ 3 ಗಂಟೆಯಿಂದ 4:00 ಗಂಟೆಯವರೆಗೂ ಕಾದು ನಾವೆಲ್ಲರೂ ನಿಂತುಕೊಂಡಿದ್ದೆವು. ನಂತರ ಉಪನೋಂದಣಾಧಿಕಾರಿಗಳ ಅನಧಿಕೃತ ಗೈರುಹಾಜರಿಯ ವಿಚಾರವಾಗಿ ನ್ಯಾಯಾಲಯಕ್ಕೆ ವರದಿ ಮಾಡುವುದಾಗಿ ಅಲ್ಲಿದ್ದ ಸಿಬ್ಬಂದಿಗಳಿಗೆ ಎಚ್ಚರಿಸಿದೆವು. ತಕ್ಷಣ ಎಚ್ಚೆತ್ತುಕೊಂಡ ಕಚೇರಿಯ ಸಿಬ್ಬಂದಿ ಸಬ್ ರಿಜಿಸ್ಟ್ರಾರ್ ಅವರ ಕೊಠಡಿಯ ಬಳಿ ಕುರ್ಚಿಗಳನ್ನು ತಂದು ಹಾಕಿದರು. 4 ಗಂಟೆಯ ಸಮಯದಲ್ಲಿ ಉಪನೋಂದಣಾಧಿಕಾರಿ ಎನ್ ಶ್ರೀಕಾಂತ್ ಅವರು ಕೊಠಡಿಗೆ ಬಂದು ಪೀಠಾಸೀನರಾದರು. ತಕ್ಷಣ ಒಂಟಿ ಕಾಲಿನಲ್ಲಿ ನಿಂತು ಕಾಯುತ್ತಿದ್ದ ಸಾರ್ವಜನಿಕರು ಹಾಗೂ ಅನಧಿಕೃತ ದಲ್ಲಾಳಿಗಳು ಸಬ್ ರಿಜಿಸ್ಟ್ರಾರರ ಸಹಿಗಾಗಿ ಮುಗಿಬಿದ್ದರು.

ವಿಚಾರ ತಿಳಿಸಿದರೂ – ಉದ್ಧಟತನ

ನಂತರ ತಾನು ಕೋರ್ಟ್ ಕಮಿಷನರ್ ಆಗಿ ನಿಯೋಜನೆಗೊಂಡು ಈ ಕಚೇರಿಗೆ ಬಂದು ಒಂದು ಗಂಟೆಯಿಂದ ಕಾಯುತ್ತಿರುವುದಾಗಿ ಸಬ್ ರಿಜಿಸ್ಟ್ರಾರರಿಗೆ ತಿಳಿಸಿದೆ “ನೂರಾರು ಸಾರ್ವಜನಿಕರು ಒಂದು ಗಂಟೆಯಿಂದ ಕಾದು ನಿಂತಿದ್ದರೂ ಸಹ ತಮ್ಮ ಸುಳಿವಿಲ್ಲ. ತಾವು ಕಚೇರಿಯ ಅವಧಿಯಲ್ಲಿ ಗಂಟೆಗಟ್ಟಲೆ ಎಲ್ಲಿಗೆ ಹೋಗಿದ್ದಿರಿ ?ಸಾರ್ವಜನಿಕರು ತಮ್ಮನ್ನು ಕಾಯುತ್ತಾ ಗಂಟೆಗಟ್ಟಲೆ ನಿಂತಿರಬೇಕೇ ? ಸಾರ್ವಜನಿಕರಿಗೆ ಈ ರೀತಿ ಸತಾಯಿಸುವುದು ನ್ಯಾಯವೇ ? ” ಎಂದು ನಾನು ಉಪ ನೋಂದಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡೆ.
ಆಗ ಕೋರ್ಟಿನಲ್ಲಿ ಕೇಸು ಹಾಕಿದ್ದು ಯಾವಾಗ ? ತೀರ್ಪು ನೀಡಿದ್ದು ಯಾವಾಗ ? ಕೋರ್ಟಿನಲ್ಲಿ ವರ್ಷಗಟ್ಟಲೆ ಕಾಯುತ್ತೀರಿ.ಇಲ್ಲಿ ಕಾಯಲು ಆಗುವುದಿಲ್ಲವೇ? ಸ್ವಲ್ಪ ಕಾಯಿರಿ, ಎಂದು ಉದ್ದಟತನದಿಂದ ಉತ್ತರಿಸಿದ ಸಬ್ ರಿಜಿಸ್ಟ್ರಾರ್ ಎನ್.ಶ್ರೀಕಾಂತ್ ದಾಖಲೆಗಳನ್ನು ಸ್ವೀಕರಿಸಲು ನಿರಾಕರಿಸಿದರು.

ವರದಿ ಸಲ್ಲಿಕೆ

ತಕ್ಷಣ ಕಾರ್ಯಪ್ರವೃತ್ತರಾದ ನಾನು ಸ್ಥಳದಲ್ಲಿಯೇ ಮಹಜರ್ ಜರುಗಿಸಿ ಸಬ್ ರಿಜಿಸ್ಟ್ರಾರ್ ಎನ್.ಶ್ರೀಕಾಂತ್ ಅವರ ಉದ್ದಟತನ, ಅನಧಿಕೃತ ಗೈರು ಹಾಗೂ ಕರ್ತವ್ಯಲೋಪದ ವಿಚಾರವಾಗಿ ವರದಿ ತಯಾರಿಸಿದೆ‌. ನ್ಯಾಯಾಲಯದ ಆದೇಶಕ್ಕೆ ಅಗೌರವ ತೋರಿದ ಸಬ್ ರಿಜಿಸ್ಟ್ರಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

ಜನಪ್ರತಿನಿಧಿಗಳ ಗಮನಕ್ಕೆ

ಸಬ್ ರಿಜಿಸ್ಟ್ರಾರ್ ಆಸೀನರಾಗುವ ಕೊಠಡಿಯಲ್ಲಿ ಸಂದರ್ಶಕರಿಗೆ ಪ್ರವೇಶಿಸಲು ಅವಕಾಶವೇ ಇಲ್ಲ. ಅವರ ಕೊಠಡಿಯತ್ತ ಹೋಗುವವರು ದಾಖಲಾತಿಗಳನ್ನು ಹಿಡಿದು ಮುಚ್ಚಿದ ಬಾಗಿಲ ಬಳಿ ಕಾಯುತ್ತಾ ನಿಲ್ಲಬೇಕು. ಉಪನೋಂದಣಾಧಿಕಾರಿಗಳು ಆಸೀನರಾಗಿರುವ ಕೊಠಡಿಯೊಳಗೆ ಅನಧಿಕೃತ ದಲ್ಲಾಳಿಗಳ ಹೊರತಾಗಿ ಉಳಿದವರಾರೂ ಪ್ರವೇಶಿಸುವಂತಿಲ್ಲ. ಸಾರ್ವಜನಿಕರು ಹಾಗೂ ವಕೀಲರು ಹೊರಗೆ ನಿಂತು ಗಾಜಿನ ಕಿಟಕಿಯ ಮೂಲಕ ಕೈ ತೂರಿಸಿ ದಾಖಲಾತಿಗಳನ್ನು ಹಾಜರು ಪಡಿಸಬೇಕಾದ ದುಸ್ಥಿತಿ ಈ ಕಚೇರಿಗೆ ಬಂದಿದೆ. ಸಬ್ ರಿಜಿಸ್ಟ್ರಾರ್ ಶ್ರೀಕಾಂತ್ ಅವರು ಪ್ರತಿ ದಿನ ಮಧ್ಯಾಹ್ನ ಕಚೇರಿಯ ಅವಧಿಯಲ್ಲಿ ಕಚೇರಿಯಿಂದ ಹೊರಗೆ ಹೋಗಿ ಗಂಟೆಗಟ್ಟಲೆ ಗೈರಾಗುತ್ತಾರೆ. ಅವರು ಎಲ್ಲಿಗೆ ಹೋಗುತ್ತಾರೋ ಗೊತ್ತಿಲ್ಲ ಎನ್ನುತ್ತಾರೆ ಸಾರ್ವಜನಿಕರು. ಸಾಹೇಬರು ಪ್ರತಿದಿನ ಕಚೇರಿಯ ಅವಧಿಯಲ್ಲಿ ವಾಯುವಿಹಾರಕ್ಕೆ ಹೋಗುತ್ತಾರೆ ಎಂಬ ಮಾತೂ ಸಹ ಕೇಳಿ ಬಂತು. ಸಬ್ ರಿಜಿಸ್ಟ್ರಾರ್ ಗಂಟೆಗಟ್ಟಲೆ ಕಚೇರಿಯ ಅವಧಿಯಲ್ಲಿ ಕಚೇರಿಯಿಂದ ನಾಪತ್ತೆಯಾಗುವುದು ಕರ್ತವ್ಯಲೋಪ. ಸಬ್ ರಿಜಿಸ್ಟ್ರಾರ್ ಅವರು ಕಚೇರಿಯಿಂದ ನಾಪತ್ತೆಯಾಗುವ ಮುನ್ನ ತನ್ನ ಅಧೀನದ ಪ್ರಥಮ ದರ್ಜೆ ಸಹಾಯಕರಿಗೆ ಪ್ರಭಾರ ನೀಡಿ ತೆರಳಬೇಕು. ಹಾಗೆ ಮಾಡದಿದ್ದರೆ ಅದು ಕರ್ತವ್ಯಲೋಪ. ದಲ್ಲಾಳಿಗಳ ಹಸ್ತಕ್ಷೇಪವಿಲ್ಲದೆ ಈ ಕಚೇರಿಯಲ್ಲಿ ಒಂದು ಹಾಳೆಯೂ ಅತ್ತಿತ್ತ ಅಲುಗಾಡದು. ನ್ಯಾಯಾಲಯದ ಆದೇಶಕ್ಕಂತೂ ಇಲ್ಲಿ ಕವಡೆಕಾಸಿನ ಕಿಮ್ಮತ್ತಿಲ್ಲ. ಕರ್ತವ್ಯಲೋಪ ಎಸಗಿರುವ ಇಂತಹ ಸಬ್ ರಿಜಿಸ್ಟ್ರಾರ್ ವಿರುದ್ಧ ಕಂದಾಯ ಸಚಿವರು ಶಿಸ್ತುಕ್ರಮ ಜರುಗಿಸಬೇಕು.

ಪಿ.ಜೆ.ರಾಘವೇಂದ್ರ ನ್ಯಾಯವಾದಿ ಮೈಸೂರು

Copyright © All rights reserved. | Newsphere by AF themes.