06/03/2026

Law Guide Kannada

Online Guide

ವಿಧಿ 227 ಅಡಿ ಹೈಕೋರ್ಟ್ ದಾವೆ ತಿರಸ್ಕರಿಸಲು ಅಥವಾ ರದ್ದುಪಡಿಸಲು ಸಾಧ್ಯವಿಲ್ಲ- ಸುಪ್ರೀಂಕೋರ್ಟ್

ನವದೆಹಲಿ: ಹೈಕೋರ್ಟ್ ವಿಧಿ 227 ಅಡಿಯಲ್ಲಿ ತನ್ನ ಅಧಿಕಾರವನ್ನು ಉಪಯೋಗಿಸಿ ದಾವೆಯನ್ನು ತಿರಸ್ಕರಿಸಲು ಅಥವಾ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದೆ.

ಸಲ್ಲಿಕೆಯಾಗಿದ್ದ ಮೇಲ್ಮನವಿಯೊಂದರ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠವು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸಿವಿಲ್ ಪ್ರೊಸೀಜರ್ ಕೋಡ್ ಆದೇಶ VII ನಿಯಮ 11 ಅಡಿಯಲ್ಲಿ ವಾದಪತ್ರ ತಿರಸ್ಕರಿಸುವ ನಿರ್ದಿಷ್ಟ ವಿಧಾನ ಲಭ್ಯವಿರುವಾಗ, ಸಂವಿಧಾನದ ವಿಧಿ 227 ಅಡಿಯಲ್ಲಿ ಇರುವ ಮೇಲ್ವಿಚಾರಣಾ ಅಧಿಕಾರವನ್ನು ಉಪಯೋಗಿಸಿ ಹೈಕೋರ್ಟ್ ವಾದಪತ್ರ ಅಂದರೆ ಪ್ರೈಂಟ್ ಅನ್ನು ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಆದೇಶಿಸಿದೆ.

ವಿವಾದವು ಅಪೀಲದಾರರು ಸಲ್ಲಿಸಿದ ಸಿವಿಲ್ ದಾವೆಯಿಂದ ಉದ್ಭವಿಸಿದ್ದು, ಅವರು ವಾರಸತ್ವದ ಮೂಲಕ ವಿವಾದಿತ ಆಸ್ತಿಯ ಮಾಲೀಕತ್ವವನ್ನು ಹೊಂದಿದ್ದೇನೆ ಎಂದು ಹೇಳಿ ಶಾಶ್ವತ ನಿರ್ಬಂಧಾಜ್ಞೆ (ಪರ್ಮನಂಟ್ ಇಂಜಂಕ್ಷನ್) ಕೋರಿ ದಾವೆ ಸಲ್ಲಿಸಿದ್ದರು. ಪ್ರತಿವಾದಿಗಳು ಈ ವಾದವನ್ನು ಪ್ರಶ್ನಿಸಿ, ದಾವೆದಾರರು (ವಾದಿ)ಅವಲಂಬಿಸಿದ ಮಾರಾಟದ ಪತ್ರ (ಸೇಲ್ ಡೀಡ್) ಕೃತಕವಾಗಿದ್ದು, ದಾವೆಯೇ ಮೋಸಾಧಾರಿತವಾಗಿದೆ ಎಂದು ಆರೋಪಿಸಿ ದ್ದರು. ಅಲ್ಲದೆ ಆದೇಶ VII ನಿಯಮ 11 ಅPಅ ಅಡಿಯಲ್ಲಿ ವಾದಪತ್ರ ತಿರಸ್ಕರಣೆಗೆ ಅರ್ಜಿ ಸಲ್ಲಿಸುವ ಬದಲು, ಪ್ರತಿವಾದಿಗಳು ನೇರವಾಗಿ ವಿಧಿ 227 ಅನ್ನು ಆಧರಿಸಿ ಹೈಕೋರ್ಟ್ ಗೆ ಮೊರೆ ಹೋಗಿದ್ದರು.

ಪ್ರತಿವಾದಿಗಳ ವಾದವನ್ನು ಅಂಗೀಕರಿಸಿದ ಹೈಕೋರ್ಟ್, ತನ್ನ ಮೇಲ್ವಿಚಾರಣಾ ಅಧಿಕಾರವನ್ನು ಉಪಯೋಗಿಸಿ ಮೋಸದ ಆರೋಪಗಳನ್ನು ಪರಿಶೀಲಿಸಿ, ಸಂಪೂರ್ಣವಾಗಿ ದಾವೆಯನ್ನು ರದ್ದುಪಡಿಸಿತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ ದಾವೆದಾರರು (ವಾದಿ) ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಪೀಠವು ಆಕ್ಷೇಪಿತ ಆದೇಶವನ್ನು ರದ್ದು ಪಡಿಸುತ್ತಾ ಆದೇಶ VII ನಿಯಮ 11 ಅPಅ ಅಡಿಯಲ್ಲಿ ಪರ್ಯಾಯ ಪರಿಹಾರ ಲಭ್ಯವಿದ್ದರೂ ಹೈಕೋರ್ಟ್ ರೈಟ್ ಪಿಟಿಷನ್ ಅನ್ನು ಅನುಮೋದಿಸಿದುದು ತಪ್ಪಾಗಿದೆ ಎಂದು ತಿಳಿಸಿತು. ಪರ್ಯಾಯ ನಾಗರಿಕ ಪರಿಹಾರವು ಅಥವಾ ಅPಅ ಅಡಿಯಲ್ಲಿ ಪರಿಹಾರ ಲಭ್ಯವಿರುವುದು, ಹೈಕೋರ್ಟ್ ವಿಧಿ 227 ಅಡಿಯಲ್ಲಿ ತನ್ನ ಅಧಿಕಾರವನ್ನು ಉಪಯೋಗಿಸುವುದಕ್ಕೆ ಬಹುತೇಕ ಸಂಪೂರ್ಣ ನಿರ್ಬಂಧವಾಗಿರಬೇಕು. ಮೇಲ್ವಿಚಾರಣಾ ಅಧಿಕಾರವನ್ನು ಬಳಸುವುದು ಸಂಪೂರ್ಣವಾಗಿ ಅಗತ್ಯವಾಗಿರುವ ಸಂದರ್ಭಗಳನ್ನು ಹೊರತುಪಡಿಸಿ” ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು,  ವಿಧಿ 227 ಅಡಿಯಲ್ಲಿ ದಾವೆಯನ್ನು ರದ್ದುಪಡಿಸಲು ಹೈಕೋರ್ಟ್ ತನ್ನ ಅಧಿಕಾರವನ್ನು ಉಪಯೋಗಿಸಿದ್ದು ಸ್ಪಷ್ಟವಾದ ದೋಷಪೂರಿತ ತೀರ್ಪಾಗಿದ್ದು, ಸಿವಿಲ್ ಪಕ್ರಿಯಾ ಸಂಹಿತೆಯ ಆದೇಶ VII ನಿಯಮ 11 ಅಡಿಯಲ್ಲಿ ನಿರ್ದಿಷ್ಟ ವಿಧಾನ ಲಭ್ಯವಿರುವಾಗ, ಪ್ರತಿವಾದಿಗಳಿಗೆ ಕಾನೂನಿನ ಪ್ರಕಾರ ಆ ಮಾರ್ಗವನ್ನು ಅನುಸರಿಸಲು ಸೂಚಿಸಬೇಕಾಗಿತ್ತು ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು. ಈ ಹಿನ್ನೆಲೆಯಲ್ಲಿ ಮೇಲ್ಮನವಿಯನ್ನು ಅಂಗೀಕರಿಸಲಾಯಿತು. ದಾವೆಯನ್ನು ಮೂಲ ದಾಖಲೆಗೆ ಮರುಸ್ಥಾಪಿಸಿ ಮುಂದಿನ ವಿಚಾರಣೆಗಾಗಿ ಪಕ್ಷಕಾರರನ್ನು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗುವಂತೆ ನ್ಯಾಯಪೀಠ ನಿರ್ದೇಶನ ನೀಡಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.