ನ್ಯಾಯಾಂಗ ಸೇವೆಗೆ 3 ವರ್ಷದ ಕಾನೂನು ಅಭ್ಯಾಸ ಕಡ್ಡಾಯ: ಮುಕ್ತ ವಿಚಾರಣೆಗೆ ಸುಪ್ರೀಂ ಒಪ್ಪಿಗೆ
ನವದೆಹಲಿ: ಸಿವಿಲ್ ನ್ಯಾಯಾಧೀಶರ (ಜೂನಿಯರ್ ವಿಭಾಗ) ನೇಮಕಾತಿಗಾಗಿ ವಕೀಲರಾಗಿ ಕನಿಷ್ಠ ಮೂರು ವರ್ಷಗಳ ಅಭ್ಯಾಸ ಮಾಡುವುದು ಕಡ್ಡಾಯ ಎಂಬ ತನ್ನ ಹಿಂದಿನ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ಪುನರ್ ವಿಮರ್ಶೆ ಅರ್ಜಿಗಳ ಕುರಿತು ಮುಕ್ತ ನ್ಯಾಯಾಲಯದ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ.
ಈ ಸಂಬಂಧ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ. ಹೌದು, ನ್ಯಾಯಾಂಗ ಸೇವೆಗಾಗಿ 3 ವರ್ಷಗಳ ಕಾಲ ವಕೀಲರಾಗಿ ಕಾನೂನು ಅಭ್ಯಾಸ ಮಾಡುವುದು ಕಡ್ಡಾಯ ಎಂಬ ನಿಯಮದ ವಿರುದ್ಧದ ಸಲ್ಲಿಕೆಯಾಗಿರುವ ಪರಿಶೀಲನಾ ಅರ್ಜಿಗಳ ಮುಕ್ತ ನ್ಯಾಯಾಲಯದ ವಿಚಾರಣೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಸಿವಿಲ್ ನ್ಯಾಯಾಧೀಶ (ಜೂನಿಯರ್ ವಿಭಾಗ) ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳು ಕನಿಷ್ಠ ಮೂರು ವರ್ಷಗಳ ವಕೀಲರಾಗಿ ಅನುಭವ ಹೊಂದಿರಬೇಕು ಎಂದು ಸುಪ್ರೀಂ ಕೋರ್ಟ್ ಮೇ 2025 ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಪರಿಶೀಲನಾ ಅರ್ಜಿಗಳು ಸಲ್ಲಿಕೆಯಾಗಿವೆ. ಆಂದಿನ ಸಿಜೆಐ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಎಜಿ ಮಸಿಹ್ ಮತ್ತು ಕೆ ವಿನೋದ್ ಚಂದ್ರನ್ ಅವರಿದ್ದ ಪೀಠವು ಎಲ್ಲಾ ಹೈಕೋರ್ಟ್ಗಳು ಮತ್ತು ರಾಜ್ಯ ಸರ್ಕಾರಗಳಿಗೆ ಈ ಅವಶ್ಯಕತೆಯನ್ನು ಸೇರಿಸಲು ತಮ್ಮ ಸೇವಾ ನಿಯಮಗಳನ್ನು ತಿದ್ದುಪಡಿ ಮಾಡುವಂತೆ ನಿರ್ದೇಶನ ನೀಡಿತ್ತು. ಈ ನಿರ್ದೇಶನ ಪ್ರಶ್ನಸಿ ಅರ್ಜಿಗಳು ಸಲ್ಲಿಕೆಯಾಗಿವೆ 2026 ಫೆಬ್ರವರಿ 10 ರಂದು ಹೊರಡಿಸಲಾದ ಆದೇಶದ ಮೂಲಕ, ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಆಗಸ್ಟಿನ್ ಜಾರ್ಜ್ ಮಸಿಹ್ ಮತ್ತು ಕೆ ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಪರಿಶೀಲನಾ ಅರ್ಜಿಗಳನ್ನು ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲು ಅವಕಾಶ ಮಾಡಿಕೊಟ್ಟಿದೆ. ಸಾಮಾನ್ಯವಾಗಿ, ನ್ಯಾಯಾಧೀಶರು ಪರಿಶೀಲನಾ ಅರ್ಜಿಗಳನ್ನು ಕೊಠಡಿಗಳಲ್ಲಿ ಪರಿಗಣಿಸುತ್ತಾರೆ, ಲಿಖಿತ ಸಲ್ಲಿಕೆಗಳನ್ನು ಮಾತ್ರ ಆಧರಿಸಿ ಮತ್ತು ಮೌಖಿಕ ವಾದಗಳಿಲ್ಲದೆ. ಮುಕ್ತ ನ್ಯಾಯಾಲಯದ ವಿಚಾರಣೆಗೆ ನಿರ್ದೇಶಿಸುವ ಮೂಲಕ, ನ್ಯಾಯಪೀಠವು ಪಕ್ಷಗಳು ತಮ್ಮ ವಾದಗಳನ್ನು ಮೌಖಿಕವಾಗಿ ಮಂಡಿಸಲು ಅವಕಾಶ ಮಾಡಿಕೊಟ್ಟಿದೆ. ಆಗಿನ ಸಿಜೆಐ ಬಿಆರ್ ಗವಾಯಿ , ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸಿಹ್ ಮತ್ತು ನ್ಯಾಯಮೂರ್ತಿಕೆ ವಿನೋದ್ ಚಂದ್ರನ್ ಅವರಿದ್ದ ವಿಸ್ತ್ರತ ನ್ಯಾಯಪೀಠವು ಮೇ 20, 2025 ರ ತೀರ್ಪಿನಲ್ಲಿ, ವಕೀಲರಾಗಿ ಮೂರು ವರ್ಷಗಳ ಅಭ್ಯಾಸದ ಅವಶ್ಯಕತೆಯು ನಿರೀಕ್ಷಿತವಾಗಿ ಅನ್ವಯಿಸುತ್ತದೆ ಮತ್ತು ತೀರ್ಪಿನ ದಿನಾಂಕಕ್ಕೂ ಮೊದಲು ಪ್ರಾರಂಭಿಸಲಾದ ನೇಮಕಾತಿ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.
ತೀರ್ಪಿನ ಬಳಿಕ ನಿರ್ದೇಶನವನ್ನು ಪ್ರಶ್ನಿಸಿ ಹಲವಾರು ಪರಿಶೀಲನಾ ಅರ್ಜಿಗಳನ್ನು ಸಲ್ಲಿಸಲಾಯಿತು. ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ಅವರು ಹಲವಾರು ಆಧಾರದ ಮೇಲೆ ತೀರ್ಪನ್ನು ಪ್ರಶ್ನಿಸಿ ಪುನರ್ವಿಮರ್ಶೆ ಅರ್ಜಿಯನ್ನು ಸಲ್ಲಿಸಿದ್ದರು. ವಕೀಲ ಚಂದ್ರ ಸೇನ್ ಯಾದವ್ ಕೂಡ ಈ ಅವಶ್ಯಕತೆಯು ಸಂವಿಧಾನದ 14 ಮತ್ತು 16 ನೇ ವಿಧಿಗಳನ್ನು ಉಲ್ಲಂಘಿಸುತ್ತದೆ (ಸಾರ್ವಜನಿಕ ಉದ್ಯೋಗದಲ್ಲಿ ಕಾನೂನು ಸಮಾನತೆ ಮತ್ತು ಸಮಾನ ಅವಕಾಶವನ್ನು ಖಾತರಿಪಡಿಸುತ್ತದೆ) ಎಂದು ವಾದಿಸಿ ಅರ್ಜಿ ಸಲ್ಲಿಸಿದ್ದರು.
ಹಿಂದಿನ ಅರ್ಹತಾ ಮಾನದಂಡಗಳ ಅಡಿಯಲ್ಲಿ ತಯಾರಿ ನಡೆಸಿದ ಇತ್ತೀಚಿನ ಕಾನೂನು ಪದವೀಧರರನ್ನು ಹೊರಗಿಡಬಾರದು ಎಂದು ವಾದಿಸಿ, ನಿಯಮದ ಅನುಷ್ಠಾನವನ್ನು ಮುಂದೂಡಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.
ಆರ್ಥಿಕವಾಗಿ ದುರ್ಬಲ ವರ್ಗಗಳು ಮತ್ತು ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳ ಅಭ್ಯರ್ಥಿಗಳ ಮೇಲೆ ಈ ಅವಶ್ಯಕತೆ ಹೇಗೆ ಪರಿಣಾಮ ಬೀರಬಹುದು ಎಂಬುದರ ಬಗ್ಗೆಯೂ ಪರಿಶೀಲನಾ ಅರ್ಜಿಯು ಕಳವಳ ವ್ಯಕ್ತಪಡಿಸಿದೆ. ಮೂರು ವರ್ಷಗಳ ಅಭ್ಯಾಸವನ್ನು ಕಡ್ಡಾಯಗೊಳಿಸುವುದನ್ನು ಸಮರ್ಥಿಸಲು ಸಾಕಷ್ಟು ವಸ್ತುನಿಷ್ಠ ದತ್ತಾಂಶವಿದೆಯೇ ಎಂದು ಅರ್ಜಿಗಳಲ್ಲಿ ಪ್ರಶ್ನಿಸಲಾಗಿದೆ. ಈ ಅರ್ಜಿಗಳ ಮುಕ್ತ ನ್ಯಾಯಾಲಯದ ವಿಚಾರಣೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
