ನ್ಯಾಯಾಧೀಶರಾಗಲು 3 ವರ್ಷ ವಕೀಲಿಕೆ ಕಡ್ಡಾಯ: ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್
ನವದೆಹಲಿ: ‘ಕಾನೂನು ಪದವೀಧರರು ನ್ಯಾಯಾಧೀಶರಾಗಬೇಕಾದರೆ ಕಡ್ಡಾಯವಾಗಿ ಕನಿಷ್ಠ ಮೂರು ವರ್ಷ ವಕೀಲರಾಗಿ ಕೆಲಸ ಮಾಡಿರಬೇಕು’ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಖಿಲ ಭಾರತೀಯ ನ್ಯಾಯಾಧೀಶರ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿಗಳಾದ ಅಗಸ್ಟೀನ್ ಜಾರ್ಜ್ ಮಸೀಹ್ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಸಿವಿಲ್ ನ್ಯಾಯಾಧೀಶರ (ಜೂನಿಯರ್ ವಿಭಾಗ) ಪರೀಕ್ಷೆಗೆ ಹಾಜರಾಗಲು ಮೂರು ವರ್ಷಗಳ ಕನಿಷ್ಠ ಅಭ್ಯಾಸದ ಅವಶ್ಯಕತೆಯನ್ನು ಪುನಃಸ್ಥಾಪಿಸಲಾಗಿದೆ ಎಂದು ನಾವು ಭಾವಿಸುತ್ತೇವೆ. ಸಿವಿಲ್ ನ್ಯಾಯಾಧೀಶರ (ಜೂನಿಯರ್ ವಿಭಾಗ) ಪರೀಕ್ಷೆಗೆ ಹಾಜರಾಗುವ ಯಾವುದೇ ಅಭ್ಯರ್ಥಿಯು ಕನಿಷ್ಠ ಮೂರು ವರ್ಷಗಳ ಅಭ್ಯಾಸವನ್ನು ಹೊಂದಿರಬೇಕು ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯ ಸರ್ಕಾರಗಳು ನಿಯಮಗಳನ್ನು ತಿದ್ದುಪಡಿ ಮಾಡಬೇಕು. ಇದನ್ನು ಬಾರ್ ನಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ ವಕೀಲರು ಪ್ರಮಾಣೀಕರಿಸಬೇಕು ಮತ್ತು ಅನುಮೋದಿಸಬೇಕು. ನ್ಯಾಯಾಧೀಶರಿಗೆ ಕಾನೂನು ಗುಮಾಸ್ತರಾಗಿ ಅನುಭವವನ್ನು ಸಹ ಈ ನಿಟ್ಟಿನಲ್ಲಿ ಎಣಿಸಲಾಗುತ್ತದೆ. ಅವರು (ನ್ಯಾಯಾಂಗ ಸೇವೆಗೆ ಪ್ರವೇಶಿಸುವವರು) ನ್ಯಾಯಾಲಯದಲ್ಲಿ ಅಧ್ಯಕ್ಷತೆ ವಹಿಸುವ ಮೊದಲು ಒಂದು ವರ್ಷದ ತರಬೇತಿಯನ್ನು ಪಡೆಯಬೇಕು” ಎಂದು ನ್ಯಾಯಪೀಠ ಆದೇಶಿಸಿದೆ.
ಆದಾಗ್ಯೂ, ಈ ಅವಶ್ಯಕತೆಗಳು ನಡೆಯುತ್ತಿರುವ ನ್ಯಾಯಾಂಗ ನೇಮಕಾತಿಗೆ ಅನ್ವಯಿಸುವುದಿಲ್ಲ, ಬದಲಾಗಿ ಭವಿಷ್ಯದ ನೇಮಕಾತಿಗೆ ಮಾತ್ರ ಅನ್ವಯಿಸುತ್ತವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
‘ಎಲ್ಲ ರಾಜ್ಯ ಸರ್ಕಾರಗಳು ಈ ಬಗ್ಗೆ ನಿಯಮಗಳಲ್ಲಿ ತಿದ್ದುಪಡಿ ಮಾಡಿಕೊಳ್ಳಬೇಕು. ಕಾನೂನು ಪದವೀಧರರು ಮೂರು ವರ್ಷ ವಕೀಲರಾಗಿ ಕಾರ್ಯನಿರ್ವಹಿಸಿದ ಬಗ್ಗೆ ಕನಿಷ್ಠ 10 ವರ್ಷದಿಂದ ವಕೀಲಿಕೆ ಮಾಡುತ್ತಿರುವವರು ಪ್ರಮಾಣಪತ್ರ ನೀಡಬೇಕು. ನ್ಯಾಯಾಲಯಗಳಲ್ಲಿ ಗುಮಾಸ್ತ ಹುದ್ದೆಯಲ್ಲಿದ್ದವರೂ ನ್ಯಾಯಾಧೀಶರಾಗಲು ಪರೀಕ್ಷೆ ಬರೆಯುವುದಾದರೆ, ಅವರ ಉದ್ಯೋಗದ ಅವಧಿಯನ್ನೂ ಗಣನೆಗೆ ತೆಗೆದುಕೊಳ್ಳಲಾಗುವುದು. ಆದರೆ, ಇವರು ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಒಂದು ವರ್ಷ ತರಬೇತಿ ಪಡೆದುಕೊಳ್ಳಬೇಕು’ ಎಂದು ತೀರ್ಪಿನಲ್ಲಿ ಹೇಳಲಾಗಿದೆ.
‘ಈಗಾಗಲೇ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದ್ದರೆ, ಅಲ್ಲಿ ಈ ನಿಯಮವನ್ನು ಪಾಲಿಸಬೇಕಾಗಿಲ್ಲ. ಆದರೆ, ಮುಂದಿನ ಬಾರಿಯ ನೇಮಕಾತಿ ಪ್ರಕ್ರಿಯೆಯಿಂದ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಹೇಳಿದೆ.
‘ವಕೀಲರಾಗಿ ಯಾವ ದಿನದಿಂದ ಕಾರ್ಯನಿರ್ವಹಿಸಲು ಆರಂಭಿಸಲಾಗುತ್ತದೊ ಆ ದಿನದಿಂದ ಮೂರು ವರ್ಷದ ಅವಧಿಯನ್ನು ಲೆಕ್ಕ ಹಾಕಲಾಗುತ್ತದೆ. ಅಖಿಲ ಭಾರತ ವಕೀಲಿಕೆ ಪರೀಕ್ಷೆಯನ್ನು (ಎಐಬಿಇ) ಪಾಸು ಮಾಡಿದ ದಿನದಿಂದ ಲೆಕ್ಕ ಹಾಕುವುದಿಲ್ಲ’ ಎಂದು ನ್ಯಾಯಪೀಠ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
