30 ವರ್ಷಗಳ ಪೂರ್ವಭಾವನೆ ವಿಲ್ ಗೆ ಅನ್ವಯವಾಗಲ್ಲ: ವಿಲ್ ನ ನಿರ್ವಹಣೆ ಕಟ್ಟುನಿಟ್ಟಾಗಿ ಸಾಬೀತುಪಡಿಸಿ – ಹೈಕೋರ್ಟ್
ರಾಯಪುರ: ಭಾರತೀಯ ಸಾಕ್ಷ್ಯ ಕಾಯ್ದೆ, 1872ರ ಸೆಕ್ಷನ್ 90 ಅಡಿಯಲ್ಲಿ 30 ವರ್ಷಕ್ಕಿಂತ ಹಳೆಯ ದಾಖಲೆಗಳಿಗೆ ನೀಡಲಾಗುವ ಪೂರ್ವ ಭಾವನೆಯು ವಿಲ್ ಗಳಿಗೆ ಅನ್ವಯಿಸುವುದಿಲ್ಲ, ಏಕೆಂದರೆ ವಿಲ್ನ ನಿರ್ವಹಣೆ ಮತ್ತು ದೃಢೀಕರಣವು ಸಂಬಂಧಿತ ಕಾನೂನು ವಿಧಿಗಳ ಕಟ್ಟುನಿಟ್ಟಾದ ಪಾಲನೆಯ ಮೂಲಕ ಸಾಬೀತುಪಡಿಸಬೇಕಾಗುತ್ತದೆ ಎಂದು ಛತ್ತೀಸ್ ಗಢ ಹೈಕೋರ್ಟ್ ಸ್ಪಷ್ಟಪಡಿಸಿದೆ.
1958ರಲ್ಲಿ ನೋಂದಾಯಿತ ವಿಲ್ ಆಧಾರವಾಗಿ ಸ್ವಾಮ್ಯ ಘೋಷಣೆ ಮತ್ತು ನಿಷೇಧಾಜ್ಞೆಗಾಗಿ ಸಲ್ಲಿಸಲಾದ ಅಪೀಲಾಂಟ್ ಮೊಕದ್ದಮೆಯನ್ನು ಕಾನೂನುಬದ್ಧವಾಗಿ ಸಾಬೀತುಪಡಿಸಲಾಗಿಲ್ಲ ಎಂಬ ಕಾರಣದಿಂದ ತಿರಸ್ಕರಿಸಿದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಈ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿಭು ದತ್ತ ಗುರು ಅವರ ಪೀಠವು , 30 ವರ್ಷ ಹಳೆಯ ವಿಲ್ ಗಳಿಗೆ ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 90 ಅಡಿಯಲ್ಲಿ ಮಾನ್ಯತೆಯ ಪೂರ್ವ ಭಾವನೆ ಅನ್ವಯವಾಗುವುದಿಲ್ಲ. ವಿಲ್ ನ ನಿರ್ವಹಣೆಯನ್ನು ಕಟ್ಟುನಿಟ್ಟಾಗಿ ಸಾಬೀತುಪಡಿಸಬೇಕು ಎಂದು ತಿಳಿಸಿದರು.
“ವಿಲ್ ಟೆಸ್ಟ್ಟರ್ ನ (ವಿಲ್ ಬರೆಯುವ ವ್ಯಕ್ತಿಯ) ಮರಣದಿಂದ ಮಾತ್ರ ಜಾರಿಯಾಗುತ್ತದೆ ಮತ್ತು ಅವನು ಬದುಕಿರುವ ಅವಧಿಯಲ್ಲಿ ಅದನ್ನು ಹಿಂತೆಗೆದು ಕೊಳ್ಳಬಹುದು; ಆದ್ದರಿಂದ ಅದರ ಪುರಾತನತೆಯ ಆಧಾರದ ಮೇಲೆ ಮಾತ್ರ ಅದರ ನಿಜತ್ವವನ್ನು ಊಹಿಸಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಬಿಭು ದತ್ತ ಗುರು ಹೇಳಿದರು.
ವಿಲ್ ಅನ್ನು ಸರಿಯಾಗಿ ಸಾಬೀತುಪಡಿಸಲಾಗಿಲ್ಲ ಮತ್ತು ಅದರ ಆಧಾರದ ಮೇಲೆ ಮಾತ್ರ ಸ್ವಾಮ್ಯ ಹಕ್ಕು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ನ್ಯಾಯಪೀಠವು ಗಮನಿಸಿತು. ವಿಚಾರಣೆಯಲ್ಲಿರುವ ಭೂಮಿಯ ಮೇಲೆ ಹಕ್ಕು ಬೇಡುವ ಮುಖ್ಯ ಆಧಾರವೆಂದರೆ 1958ರ ವಿಲ್ ಎಂಬ 30 ವರ್ಷ ಹಳೆಯ ದಾಖಲೆ. ಆದರೆ, ಭಾರತೀಯ ಉತ್ತರಾಧಿಕಾರ ಕಾಯ್ದೆ ಸೆಕ್ಷನ್ 63 ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆ ಸೆಕ್ಷನ್ 68 ಮತ್ತು 69ರ ವಿಧಿಗಳ ಪ್ರಕಾರ ಸಾಕ್ಷಿಗಳ ಮೂಲಕ ಅಪೀಲಾಂಟ್ ಗಳು ವಿಲ್ ಅನ್ನು ಸರಿಯಾಗಿ ಸಾಬೀತುಪಡಿಸಿಲ್ಲ. ಆದ್ದರಿಂದ, ವಿಲ್ 30 ವರ್ಷ ಹಳೆಯ ದಾಖಲೆ ಎಂಬ ಕಾರಣಕ್ಕೆ ಮಾತ್ರ, ಭಾರತೀಯ ಸಾಕ್ಷ ಕಾಯ್ದೆ ಸೆಕ್ಷನ್ 90 ಅಡಿಯಲ್ಲಿ ಸರಿಯಾಗಿ ನಿರ್ವಹಿಸಲಾಗಿದೆ ಎಂದು ಊಹಿಸಲು ಸಾಧ್ಯವಿಲ್ಲ. ಬದಲಾಗಿ, ವಿಲ್ ಅನ್ನು ದೃಢೀಕರಣ ಸಾಕ್ಷಿಗಳ ಮೂಲಕ ಕಾನೂನುಬದ್ಧವಾಗಿ ಸಾಬೀತುಪಡಿಸುವುದು ಕಡ್ಡಾಯವಾಗಿದೆ” ಎಂದು ಹೇಳಿದರು.
ಏನಿದು ವ್ಯಾಜ್ಯ.
ಮೇಲ್ಮನವಿದಾರರು ತನ್ನ ಅಜ್ಜನಿಂದ 1958ರಲ್ಲಿ ರಚಿಸಲಾದ ನೋಂದಾಯಿತ ವಿಲ್ ಆಧಾರವಾಗಿ ಆಸ್ತಿಯ ಮೇಲೆ ತನಗೆ ಹಕ್ಕು ಪ್ರಾಪ್ತವಾಗಿದೆ ಎಂದು ಹೇಳಿ, ಸ್ವಾಮ್ಯ ಘೋಷಣೆ, ಸ್ವಾಧೀನ ಮತ್ತು ಶಾಶ್ವತ ನಿಷೇಧಾಜ್ಞೆಗಾಗಿ ಸಿವಿಲ್ ವ್ಯಾಜ್ಯ ದಾಖಲಿಸಿದ್ದರು. ಆದರೆ ಪ್ರತಿವಾದಿಯಾದ ಮೇಲ್ಮನವಿಗಾರನ ಮಾವನು ಆಸ್ತಿಯು ವಂಶಪಾರಂಪರ್ಯ ಆಸ್ತಿ ಹಾಗೂ ಸಂಯುಕ್ತವಾಗಿ ಹೊಂದಿರುವ ಆಸ್ತಿ ಎಂದು ಹೇಳಿ, ವಿಲ್ ನಕಲಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. 1958ರ ವಿಲ್ ಭಾರತೀಯ ಉತ್ತರಾಧಿಕಾರ ಕಾಯ್ದೆ ಸೆಕ್ಷನ್ 63 ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ ಸೆಕ್ಷನ್ 68 ಮತ್ತು 69ರ ಪ್ರಕಾರ ಸಾಬೀತುಪಡಿಸಲ್ಪಟ್ಟಿಲ್ಲ ಎಂದು ವಿಚಾರಣಾ ನ್ಯಾಯಾಲಯವು ತೀರ್ಮಾನಿಸಿ, ದಾವೆಯನ್ನು ತಿರಸ್ಕರಿಸಿತು. ಅಪೀಲಿನಲ್ಲಿ, ಮೇಲ್ಮನವಿ ನ್ಯಾಯಾಲಯವು ಸಹ ವಿಚಾರಣಾ ನ್ಯಾಯಾಲಯದ ಆದೇಶವನ್ನು ದೃಢಪಡಿಸಿ ಅಪೀಲನ್ನು ತಿರಸ್ಕರಿಸಿತು.
ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೇಟ್ಟಿಲೇರಿದರು. ಹೈಕೋರ್ಟ್ ಮುಂದೆ ಮೇಲ್ಮನವಿದಾರನು, ವಿವಾದಿತ ಭೂಮಿಯನ್ನು 40 ವರ್ಷಕ್ಕೂ ಹೆಚ್ಚು ಕಾಲ ತನ್ನ ವಶದಲ್ಲಿಟ್ಟಿದ್ದೇನೆ ಮತ್ತು ವಿಲ್ 30 ವರ್ಷಕ್ಕಿಂತ ಹಳೆಯದು ಎಂದು ವಾದಿಸಿದರು. ವಿಲ್ ನ ದೃಢೀಕರಣ ಸಾಕ್ಷಿಗಳು ಮೃತರಾಗಿರುವುದರಿಂದ, ಸೆಕ್ಷನ್ 90 ಅಡಿಯಲ್ಲಿ ವಿಲ್ ಸರಿಯಾಗಿ ಸಾಬೀತಾಗಿದೆ ಎಂದು ಹೇಳಲಾಯಿತು. ಜೊತೆಗೆ, ವಿಚಾರಣಾ ನ್ಯಾಯಾಲಯವು ಸೆಕ್ಷನ್ 90 ಅನ್ವಯಿಕೆಯನ್ನು ಕಡೆಗಣಿಸಿದೆ ಎಂದು ವಾದಿಸಿದರು.
ವಿಲ್ ಕಾನೂನುಬದ್ಧವಾಗಿ ಸಾಬೀತಾಗಿಲ್ಲ ಎಂದು ಏಕಸದಸ್ಯ ಪೀಠವು ತೀರ್ಮಾನಿಸಿ, “ವಿಲ್ ನೋಂದಾಯಿತವಾಗಿದೆ ಎಂಬುದರಿಂದ ಮಾತ್ರ ದೃಢೀಕರಣ ಸಾಕ್ಷಿಗಳ ಮೂಲಕ ಸಾಬೀತುಪಡಿಸುವ ಕಡ್ಡಾಯ ನಿಯಮದಿಂದ ವಿನಾಯಿತಿ ದೊರಕುವುದಿಲ್ಲ ಎಂದು ಅಭಿಪ್ರಾಯಪಟ್ಟು, ಈ ಕಾರಣ, ನ್ಯಾಯಾಲಯವು ಮೇಲ್ಮನವಿ ನ್ಯಾಯಾಲಯದ ಆದೇಶವನ್ನು ದೃಢಪಡಿಸಿ ಅಪೀಲನ್ನು ತಿರಸ್ಕಾರ ಮಾಡಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
