ಕಪ್ಪುಪಟ್ಟಿಗೆ 7 ಮಂದಿ RTI ಕಾರ್ಯಕರ್ತರು: ಮಾಹಿತಿ ಆಯೋಗ ಮಹತ್ವದ ಆದೇಶ

ಬೆಂಗಳೂರು: ಆರ್ಟಿಐ ಕಾಯ್ದೆ ದುರ್ಬಳಕೆಯಾಗುತ್ತಿರುವ ಸಂಬಂಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೆ ಅನಗತ್ಯ ಅರ್ಜಿ ಸಲ್ಲಿಸುತ್ತಿದ್ದ ಆರ್ ಟಿಐ ಕಾರ್ಯಕರ್ತರ ವಿರುದ್ದ ಮಾಹಿತಿ ಆಯೋಗ ಕಠಿಣ ಕ್ರಮ ಕೈಗೊಂಡಿದೆ.
ಹೌದು ಸಾರ್ವಜನಿಕ ಹಿತಾಸಕ್ತಿ ಇಲ್ಲದ ಅರ್ಜಿಗಳನ್ನು ಸಲ್ಲಿಸುತ್ತಿದ್ದ ಆರೋಪದ ಮೇಲೆ 7 ಆರ್ಟಿಐ ಕಾರ್ಯಕರ್ತರನ್ನು ಶಾಶ್ವತವಾಗಿ ಕಪ್ಪುಪಟ್ಟಿಗೆ ಸೇರಿಸಿ ಮಾಹಿತಿ ಆಯೋಗ ಮಹತ್ವದ ಆದೇಶ ಹೊರಡಿಸಿದೆ. ಕೆಲವೇ ಕೆಲವು ವ್ಯಕ್ತಿಗಳು ಸಲ್ಲಿಸಿರುವ ಬರೋಬ್ಬರಿ 54,407 ಮೇಲ್ಮನವಿಗಳು ಮಾಹಿತಿ ಆಯೋಗದಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ. ಮುಖ್ಯ ಮಾಹಿತಿ ಆಯುಕ್ತರಾದ ಡಾ. ಎಚ್ ಸಿ ಸತ್ಯನ್ ಅರ್ಜಿಗಳ ಶೀಘ್ರ ಇತ್ಯರ್ಥಕ್ಕಾಗಿ ‘ವಿಶೇಷ ಅಭಿಯಾನ ಆರಂಭಿಸಿದ್ದಾರೆ. ಅನಗತ್ಯವಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಜಾಗೊಳಿಸಲಾಗುತ್ತಿದೆ. ಇದೇ ಸಂದರ್ಭಧಲ್ಲಿ ಪದೇಪದೆ ಅರ್ಜಿಗಳನ್ನ ಸಲ್ಲಿಸಿ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿರುವ ಆರೋಪದಲ್ಲಿ 7 ಮಂದಿಯನ್ನು ಬ್ಲ್ಯಾಕ್ ಲೀಸ್ಟ್ ಗೆ ಸೇರಿಸಿ ಆದೇಶಿಸಿದ್ದಾರೆ.
ಕಪ್ಪುಪಟ್ಟಿಗೆ ಸೇರ್ಪಡೆಯಾದ ಆರ್ ಟಿಐ ಕಾರ್ಯಕರ್ತರ ಪಟ್ಟಿ ಈ ಕೆಳಕಂಡಂತಿದೆ.
1.ಎಸ್.ಶೇಖರ್: 1103 ಮೇಲ್ಮನವಿ ಸಲ್ಲಿಸಿದ್ದಾರೆ. 473 ಪ್ರಕರಣ ವಿಲೇವಾರಿ, 530 ಪ್ರಕರಣ ವಿಚಾರಣೆಗೆ ಬಾಕಿ
2. ಸತೀಶ್ ಕೆ. ಕೆ.ನಲ್ಲಗಾನಹಳ್ಳಿ: 334 ಮೇಲ್ಮನವಿ ಸಲ್ಲಿಕೆ. 90ಪ್ರಕರಣ ವಿಲೇವಾರಿ, 244 ಕೇಸ್ ಬಾಕಿ ಇವೆ.
3. ಸಿ.ಪಿ.ತಿಪ್ಪೇಸ್ವಾಮಿ: 2255 ದೂರು/ಮೇಲ್ಮನವಿಗಳ ಸಲ್ಲಿಕೆ. 1940 ಪ್ರಕರಣ ಇತ್ಯರ್ಥ, 315 ಕೇಸ್ ವಿಚಾರಣೆಗೆ ಬಾಕಿ.
4.ವಿ.ರಾಮಕೃಷ್ಣ: 1313 ಮೇಲ್ಮನವಿ ಸಲ್ಲಿಕೆ, 1105 ಕೇಸ್ ಇತ್ಯರ್ಥ, 208 ಪ್ರಕರಣ ವಿಚಾರಣೆಗೆ ಬಾಕಿ.
5.ರಂಗಸ್ವಾಮಿ, 1295 ಮೇಲ್ಮನವಿ ಸಲ್ಲಿಕೆ . 969 ಕೇಸ್ ವಿಲೇವಾರಿ, 326 ಕೇಸ್ ಗಳು ಬಾಕಿ ಇವೆ
6. ಬಿಎಸ್ ರಮೇಶ್ 611 ದೂರು/ಮೇಲ್ಮನವಿ ಸಲ್ಲಿಕೆ. 349 ಇತ್ಯರ್ಥ, 262 ಪ್ರಕರಣ ವಿಚಾರಣೆಗೆ ಬಾಕಿ.
7. ಎ.ಎನ್ ಮಂಜುನಾಥ್ 1479 ಮೇಲ್ಮನವಿ ಸಲ್ಲಿಕೆ, 957 ಪ್ರಕರಣ ವಿಲೇವಾರಿ. 522 ಅರ್ಜಿ ವಿಚಾರಣೆ ಬಾಕಿ.
ಕಪ್ಪುಪಟ್ಟಿಗೆ ಸೇರಿರುವ ವ್ಯಕ್ತಿಗಳು ಇನ್ನುಮುಂದೆ ಮಾಹಿತಿ ಹಕ್ಕು ಅಧಿನಿಯಮ ಕಲಂ 6(1). 18(1)ಮತ್ತು 19(3) ಅನ್ವಯ ಸಲ್ಲಿಸುವಂತಹ ಅರ್ಜಿ ಮೇಲ್ಮನವಿಗಳು ಹಾಗೂ ದೂರುಗಳ ಅರ್ಜಿಯನ್ನು ಆಯೋಗದಲ್ಲಿ ನೋಂದಣಿ ಮಾಡದಂತೆ ಮಾಹಿತಿ ಆಯೋಗದ ಕಾರ್ಯದರ್ಶಿಗೆ ಡಾ. ಎಚ್.ಸಿ. ಸತ್ಯನ್ ನೇತೃತ್ವದ ನ್ಯಾಯಪೀಠ ತೀರ್ಪು ನೀಡಿದೆ.
1 ಅರ್ಜಿಗೆ Rs 1000 ದಂಡ..
ಮಾಹಿತಿ ಹಕ್ಕು ಕಾಯ್ದೆ ದುರ್ಬಳಕೆ ಮಾಡಿಕೊಂಡಿರುವುದರಿಂದ ತಲಾ ಅರ್ಜಿಗೆ 1 ಸಾವಿರ ರೂ. ದಂಡ ವಿಧಿಸಲಾಗಿದ್ದು, ಆದೇಶದಂತೆ ಈಗ 1000 ಅರ್ಜಿ ಸಲ್ಲಿಸಿದ್ದರೆ ಆತ 10 ಲಕ್ಷ ರೂ. ಪಾವತಿಸಬೇಕು. 60 ದಿನಗಳ ಒಳಗಾಗಿ ದಂಡ ಪಾವತಿಸಬೇಕು. ಕಟ್ಟದಿದ್ದರೆ ವಸೂಲಿ ಮಾಡುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.
ಕಪ್ಪುಪಟ್ಟಿಗೆ ಸೇರಿಸಲು ಕಾರಣ ಈ ಕೆಳಕಂಡಂತಿದೆ..
ಸದರಿ ಅರ್ಜಿಗಳಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲದಿರುವುದು ಸ್ಪಷ್ಟ.
ಯಾವ ಉದ್ದೇಶಕ್ಕಾಗಿ ಮಾಹಿತಿ ಕೇಳಿದ್ದಾರೆಂದು ಆಯೋಗಕ್ಕೆ ಮನದಟ್ಟು ಮಾಡಿಲ್ಲ.
ಅಧಿಕಾರಿಗಳ ದೈನಂದಿನ ಕರ್ತವ್ಯ ನಿರ್ವಹಣೆಗೆ ತೊಂದರೆಯಾಗುತ್ತಿರುವುದು ಕಂಡಿದೆ.
ನಿರಂತರವಾಗಿ ಅಸಂಖ್ಯಾತ ಮಾಹಿತಿ ಕೋರಿ ಅರ್ಜಿಗಳನ್ನು ಸಲ್ಲಿಸುವುದು ರೂಢಿಗತ.
ಕಪ್ಪುಪಟ್ಟಿಗೆ ಸೇರಿಸಲು, ದಂಡ ವಿಧಿಸಲು ಗುಜರಾತ್ ಹೈಕೋರ್ಟ್ ತೀರ್ಪು ಉಲ್ಲೇಖ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ