19/05/2025

Law Guide Kannada

Online Guide

ಸ್ವತಃ ನಿವೃತ್ತ ಜಡ್ಜ್ ಗೆ 90 ಲಕ್ಷ ರೂ. ಟೋಪಿ ಹಾಕಿದ ಸೈಬರ್ ಚೋರರು

ಕೇರಳ: ಸೈಬರ್ ವಂಚನೆಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಜನಸಾಮಾನ್ಯರು, ರಾಜಕಾರಣಿಗಳು ಉದ್ಯಮಿಗಳು ಹೀಗೆ ಹಲವರು ಸೈಬರ್ ವಂಚಕರ ಬಲೆಗೆ ಬಿದ್ದ ಪ್ರಕರಣಗಳು ವರದಿಯಾಗುತ್ತಿತ್ತು. ಇದೀಗ ಸ್ವತಃ ನಿವೃತ್ತ ನ್ಯಾಯಾಮೂರ್ತಿಗಳೇ ಸೈಬರ್ ವಂಚನೆಯ ಜಾಲಕ್ಕೆ ಸಿಲುಕಿ 90 ಲಕ್ಷ ರೂ. ಟೋಪಿ ಹಾಕಿಸಿಕೊಂಡಿದ್ದಾರೆ.

ಹೌದು ಸ್ವತಃ ನಿವೃತ್ತ ನ್ಯಾಯಮೂರ್ತಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದ ಸುದ್ದಿ ಇದೀಗ ಬಯಲಾಗಿದೆ. 73 ವರ್ಷದ ನ್ಯಾ. ಶಶಿಧರನ್ ನಂಬಿಯಾರ್ ಎಂಬುವವರೇ ವಂಚನೆಗೊಳಗಾಗಿರುವ ನಿವೃತ್ತ ನ್ಯಾಯಾಧೀಶರು. ಅವರು ತ್ರಿಪುಣಿತುರಾದ ಎರೂರ್ ಅಮೃತ ಲೇನ್ ನಲ್ಲಿ ವಾಸಿಸುತ್ತಿದ್ದಾರೆ. ಶೇ.850ರಷ್ಟು ಲಾಭಾಂಶವನ್ನು ನೀಡುತ್ತೇವೆ ಎಂದು ವಂಚಕರು ಆನ್ ಲೈನ್ ಷೇರು ಮಾರುಕಟ್ಟೆ ಮೂಲಕ ಒಳ್ಳೆಯ ಆದಾಯದ ಭರವಸೆ ನೀಡಿ ವಂಚಿಸಿದ್ದಾರೆ.

ಕೇರಳದ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎಂ ಸಸಿಧರನ್ ನಂಬಿಯಾರ್ ವಂಚಕರ ಮಾತಿಗೆ ಮರುಳಾಗಿ ಅವರು ಬರೋಬ್ಬರಿ 90 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಹಿಲ್ ಪ್ಯಾಲೇಸ್ ಪೋಲಿಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ ಐ ಆರ್ ಪ್ರಕಾರ, ನಿವೃತ್ತ ನ್ಯಾಯಮೂರ್ತಿ ನಂಬಿಯಾರ್ ಅವರು ಆದಿತ್ಯ ಬಿರ್ಲಾ ಇಕ್ವಿಟಿ ಲರ್ನಿಂಗ್ ಗ್ರೂಪ್ ಎಂಬ ವಾಟ್ಸಾಪ್ ಗುಂಪಿನ ಮೂಲಕ ಈ ವಂಚನೆಗೊಳಗಾಗಿದ್ದಾರೆ. ಆಯನಾ ಜೋಸೆಫ್ ಮತ್ತು ವರ್ಷಾ ಸಿಂಗ್ ಎಂಬವರ ನೇತೃತ್ವದ ಮಹಿಳಾ ಗುಂಪು ಶಶಿಧರನ್ ಅವರನ್ನು ವಂಚನಾ ಜಾಲಕ್ಕೆ ಬೀಳಿಸಿತ್ತು. ವಂಚಕರ ಹೇಳಿಕೆ ಪ್ರಕಾರ, ಆದಿತ್ಯ ಬಿರ್ಲಾ ಇಕ್ವಿಟಿ ಲರ್ನಿಂಗ್ ಗ್ರೂಪ್ ಎಂಬ ವಾಟ್ಸಾಪ್ ಗುಂಪಿನ ಮೂಲಕ ನಕಲಿ ಶೇರು ವ್ಯಾಪಾರ ಅಪ್ಲಿಕೇಶನ್ ನಲ್ಲಿ ಹೂಡಿಕೆ ಮಾಡಲು ಶಶಿಧರನ್ ಹಣ ವರ್ಗಾಯಿಸಿದ್ದಾರೆ. ವಾಟ್ಸಪ್ ಗ್ರೂಪಿಗೆ ಸೇರಿದವರಿಗೆ ಆನ್ಲೈನ್ ಷೇರು ಮಾರುಕಟ್ಟೆಯ ಮೂಲಕ ಶೇಕಡ 850 ಆದಾಯ ನೀಡುವುದಾಗಿ ವಂಚಕರು ಭರವಸೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಶಶಿಧರನ್ ಅವರು 2024ರ ಡಿಸೆಂಬರ್ 4 ರಿಂದ ಡಿಸೆಂಬರ್ 30ರ ನಡುವೆ ಸುಮಾರು 90 ಲಕ್ಷ ರೂಪಾಯಿ ಹಣವನ್ನು ಅವರು ವರ್ಗಾವಣೆ ಮಾಡಿದ್ದಾರೆ. ನಂತರ ತಾವು ಪಂಚನೆಗೆ ಒಳಗಾಗಿದ್ದೇನೆ ಎಂದು ನಂಬಿಯಾರ್ ತಮ್ಮ ದೂರಿನಲ್ಲಿ ಹೇಳಿದ್ದಾರೆ. ವಂಚನೆಯ ದೂರು ದಾಖಲಾಗುತ್ತಿದ್ದಂತೆ ವಂಚಕರ ಮೊಬೈಲ್ ಫೋನ್ಗಳು ಸ್ವಿಚ್ ಆಫ್ ಆಗಿವೆ. ಅವರು ದಾಖಲಿಸಿರುವ ದೂರಿನಲ್ಲಿ ಜೋಸೆಫ್ ಮತ್ತು ವರ್ಷ ಸಿಂಗ್ ಎಂಬ ಹೆಸರಿನ ಇಬ್ಬರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 316 (2) ಕ್ರಿಮಿನಲ್ ನಂಬಿಕೆ ದ್ರೋಹ ಮತ್ತು 318(4) (ವಂಚನೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಡಿ (ಕಂಪ್ಯೂಟರ್ ಸಂಪನ್ಮೂಲವನ್ನು ಬಳಸಿಕೊಂಡು ಸೋಗು ಹಾಕಿ ವಂಚನೆ) ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ಸಸಿಧರನ್ ಅವರು ವರ್ಗಾಯಿಸಿರುವ ಬ್ಯಾಂಕ್ ಖಾತೆಗಳು ಉತ್ತರ ಭಾರತಕ್ಕೆ ಸೇರಿದ್ದಾಗಿದೆ. ಈ ಖಾತೆಗಳ ಮೂಲವನ್ನು ಈಗಾಗಲೇ ಪತ್ತೆ ಹಚ್ಚಲಾಗಿದ್ದು, ಹಣವನ್ನು ಮರಳಿಸುವ ಭರವಸೆಯನ್ನು ತನಿಖಾಧಿಕಾರಿ ಯೇಸುದಾಸ್ ನೀಡಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.