20/05/2025

Law Guide Kannada

Online Guide

ನ್ಯಾಯಮೂರ್ತಿಗಳಿಗೆ ರಾಜಕೀಯ ಧೋರಣೆ ಇರಬಾರದು- ನ್ಯಾ. ಬಿ. ವಿ. ನಾಗರತ್ನ ಅಭಿಮತ

ಚೆನ್ನೈ: ನ್ಯಾಯಮೂರ್ತಿಗಳಿಗೆ ರಾಜಕೀಯ ಧೋರಣೆ ಇರಬಾರದು. ರಾಜಕೀಯ ನಿಲುವಿನಿಂದ ದೂರ ಇರಬೇಕು. ರಾಜಕೀಯ ಅಭಿಪ್ರಾಯಗಳಿಂದ ದೂರ ಇರುವುದು, ನಿಷ್ಪಕ್ಷಪಾತವಾಗಿರುವುದು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಬಹಳ ಮುಖ್ಯವಾಗಿರುವ ಅಂಶವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಅಭಿಪ್ರಾಯಪಟ್ಟರು.

ಚೆನ್ನೈನಲ್ಲಿ ನ್ಯಾಯಮೂರ್ತಿ ಎಸ್. ನಟರಾಜನ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾ. ಬಿವಿ ನಾಗರತ್ನ, ನ್ಯಾಯಾಂಗದ ಅಧಿಕಾರವನ್ನು ಯಾರ ಒತ್ತಡಕ್ಕೂ ಮಣಿಯದೆ ಚಲಾಯಿಸುವುದು ನ್ಯಾಯಮೂರ್ತಿಯೊಬ್ಬರಿಗೆ ಇರುವ ಪರಮಾಧಿಕಾರ. ಹಾಗೆಯೇ ಅದು ಅವರ ಆದ್ಯ ಕರ್ತವ್ಯವೂ ಹೌದು. ಭಿನ್ನ ನಿಲುವು, ಭಿನ್ನಾಭಿಪ್ರಾಯಗಳನ್ನು ಆ ನ್ಯಾಯಮೂರ್ತಿಗಳ ಅಭಿವ್ಯಕ್ತಿ ಸ್ವಾತಂತ್ರ ಎಂಬ ನೆಲೆಯಲ್ಲಿ ನೋಡಬೇಕು. ಇಬ್ಬರು ನ್ಯಾಯಮೂರ್ತಿಗಳ ನಡುವಿನ ಭಿನ್ನ ನಿಲುವುಗಳು ಅಥವಾ ಭಿನ್ನಾಭಿಪ್ರಾಯಗಳು ನ್ಯಾಯಾಂಗದ ಪ್ರಬುದ್ಧತೆಯನ್ನು ಸೂಚಿಸುತ್ತದೆ ಎಂದು ನುಡಿದರು.

“ನ್ಯಾಯಮೂರ್ತಿಯೊಬ್ಬರು ಕಾನೂನನ್ನು ತಾವು ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ ಅಥವಾ ವ್ಯಾಖ್ಯಾನಿಸುತ್ತಾರೆ. ಅವರ ಆತ್ಮಸಾಕ್ಷಿ ಏನು ಹೇಳುತ್ತದೆ ಎನ್ನುವುದರ ಮೇಲೆ ನ್ಯಾಯಾಂಗ ಅಧಿಕಾರವನ್ನು ಚಲಾಯಿಸುತ್ತಾರೆ. ಅಧಿಕಾರವನ್ನು ಚಲಾಯಿಸುವ ವೇಳೆ ಬೇರೆಯವರ ಅಭಿಪ್ರಾಯಗಳಿಗೆ ಮಣೆಯಬಾರದು’ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅಭಿಪ್ರಾಯಿಸಿದರು.

ರಾಜಕೀಯ ಅಭಿಪ್ರಾಯಗಳಿಂದ ದೂರ ಇರುವುದು, ನಿಷ್ಪಕ್ಷಪಾತವಾಗಿರುವುದು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಬಹಳ ಮುಖ್ಯವಾಗಿರುವ ಅಂಶವಾಗುತ್ತದೆ. ಇದನ್ನೇ ಹಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ನಿಷ್ಪಕ್ಷಪಾತವಾಗಿರುವುದು ಎಂದರೆ, ನ್ಯಾಯಮೂರ್ತಿಯೊಬ್ಬರು ತಮ್ಮ ನಿರ್ಧಾರವನ್ನು ಕಾನೂನು ಹಾಗೂ ತಮ್ಮ ಮುಂದಿರುವ ಸತ್ಯದ ಆಧಾರದಲ್ಲಿಯೇ ರೂಪಿಸಿಕೊಳ್ಳಬೇಕು. ಅರ್ಜಿದಾರರ ಪರ ಒಲವು-ನಿಲುವುಗಳ ಮೇಲೆ ನಿರ್ಧಾರ ರೂಪಿಸಿಕೊಳ್ಳಬಾರದು’ ಎಂದು ಹೇಳಿದರು.

ನ್ಯಾಯಮೂರ್ತಿಗಳು ತಮ್ಮ ನ್ಯಾಯದತ್ತ ಅಧಿಕಾರ ಚಲಾಯಿಸುವ ಸಂದರ್ಭದಲ್ಲಿ ಬೇರೆಯವರ ಅಭಿಪ್ರಾಯಗಳಿಗೆ ಮಣಿಯಬಾರದು. ಅಂತಿಮವಾಗಿ, ನ್ಯಾಯಮೂರ್ತಿಯೊಬ್ಬರ ನಂಬಿಕೆ, ಧೈರ್ಯ ಮತ್ತು ಅವರ ಸ್ವಾತಂತ್ರ್ಯವೇ ನ್ಯಾಯಾಂಗದ ಮುಂದಿರುವ ಪ್ರಕರಣಗಳನ್ನು ಇತ್ಯರ್ಥಪಡಿಸುತ್ತವೆ ಎಂದು ಅವರು ಹೇಳಿದರು.

ನ್ಯಾಯಾಂಗದ ನಿರ್ಧಾರಗಳನ್ನು ಕಾರ್ಯಾಂಗ ಸರಳವಾಗಿ ತಳ್ಳಿ ಹಾಕುವಂತಿಲ್ಲ ನ್ಯಾಯಾಂಗ ಮತ್ತು ಕಾರ್ಯಾಂಗ ಅಧಿಕಾರ ವಿಭಜನೆಯ ಕುರಿತು ಮಾತನಾಡಿದ ನ್ಯಾ. ಬಿ.ವಿ. ನಾಗರತ್ನ ಅವರು, ಯಾವುದೇ ಕಾನೂನು ತಿದ್ದುಪಡಿ ಮಾಡುವ ಅಧಿಕಾರ ಕಾರ್ಯಾಂಗಕ್ಕೆ ನೀಡಲಾಗಿದೆ. ಆದರೆ, ಕಾನೂನಿನ ವ್ಯಾಖ್ಯಾನದ ಪ್ರಶ್ನೆ ಬಂದಾಗ, ನ್ಯಾಯಾಂಗ ಮಧ್ಯಪ್ರವೇಶ ಮಾಡಬಹುದು. ಆಗ, ನ್ಯಾಯಾಂಗದೇ ಪರಮಾಧಿಕಾರವಾಗುತ್ತದೆ. ನ್ಯಾಯಾಂಗದ ನಿರ್ಧಾರಗಳನ್ನು ಕಾರ್ಯಾಂಗ ಸರಳವಾಗಿ ತಳ್ಳಿ ಹಾಕುವಂತಿಲ್ಲ ಎಂದು ಅವರು ವಿಶ್ಲೇಷಿಸಿದರು.

ಬುಲ್ಡೋಜರ್ ನ್ಯಾಯ ಒದಗಿಸುವ ಅಧಿಕಾರಿಗಳ ಕ್ರಮವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿರುವ ಐತಿಹಾಸಿಕ ತೀರ್ಪು ಶ್ಲಾಘಿಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, ಕಾರ್ಯಾಂಗ ತನ್ನ ಎಲ್ಲೆ ಮೀರಿದೆ ಎನ್ನುವುದಕ್ಕೆ ಬುಲ್ಡೋಜರ್ ನ್ಯಾಯ ಸ್ಪಷ್ಟ ಉದಾಹರಣೆಯಾಗಿದೆ. ಆರೋಪಿಗಳನ್ನು ಶಿಕ್ಷಿಸಲು ವಿಚಾರಣೆ ನಡೆಸದೆ ಅವರ ಮನೆ ಅಥವಾ ಅಂಗಡಿಗಳನ್ನು ನೆಲಸಮ ಮಾಡಿರುವುದು ಅಪರಾಧ ಪ್ರಕ್ರಿಯೆಯಲ್ಲಿ ಒಪ್ಪತಕ್ಕದ್ದಲ್ಲ ಎಂದು ಹೇಳಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.