20/05/2025

Law Guide Kannada

Online Guide

ಜನ್ಮ ದಿನಾಂಕ ನಿರ್ಧರಿಸಲು ಆಧಾರ್ ಕಾರ್ಡ್ ಅಧಿಕೃತ ಪುರಾವೆಯೇ..? ಸುಪ್ರೀಂ ಕೊಟ್ಟ ತೀರ್ಪೇನು?

ನವದೆಹಲಿ: ಆಧಾರ್ ಕಾರ್ಡ್ ನ್ನು ಗುರುತಿನ ಪುರಾವೆಯಾಗಿ ಬಳಸಬಹುದು. ಅದರೆ ಯಾವುದೇ ವ್ಯಕ್ತಿಯ ಜನ್ಮ ದಿನಾಂಕವನ್ನು ನಿರ್ಧರಿಸಲು ಆಧಾರ್ ಕಾರ್ಡ್ ಅಧಿಕೃತ ಪುರಾವೆಯಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ನೀಡಲಾಗುವ ಪರಿಹಾರವನ್ನ ಆಧಾರ್ ಕಾರ್ಡ್ ನಲ್ಲಿ ನಮೂದಿಸಿದ ಜನ್ಮ ದಿನಾಂಕವನ್ನು ಅವಲಂಬಿಸಿ ಕಡಿಮೆ ಮಾಡಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪಿನ ವಿರುದ್ಧ ಸರೋಜ್ ಮತ್ತು ಇತರರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾ. ಸಂಜಯ್ ಕರೋಲ್ ಮತ್ತು ಉಜ್ವಲ್ ಭುಯಾನ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.

ಪರಿಹಾರವನ್ನ ನಿಗದಿಪಡಿಸಲು ಶಾಲಾ ಬಿಡುವ ಪ್ರಮಾಣಪತ್ರದ ಆಧಾರದ ಮೇಲೆ ಮೃತರ ವಯಸ್ಸನ್ನ ನಿರ್ಧರಿಸುವ ಮೋಟಾರು ಅಪಘಾತ ಕ್ಲೈಮ್ ಟ್ರಿಬ್ಯೂನಲ್ ಆದೇಶವನ್ನು ನ್ಯಾಯಾಲಯ ಎತ್ತಿಹಿಡಿದಿದೆ.

ಜನ್ಮ ದಿನಾಂಕದ ಪುರಾವೆಗೆ ಸಂಬಂಧಿಸಿದಂತೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಹೊರಡಿಸಿರುವ ಸುತ್ತೋಲೆ ಮತ್ತು ಸಂಬಂಧಪಟ್ಟ ಕಾಯ್ದೆಯಲ್ಲಿ ಇರುವ ಅಂಶಗಳನ್ನು ನ್ಯಾಯಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಆಧಾರ್ ಕಾರ್ಡ್ ನ್ನು ಗುರುತಿನ ಪುರಾವೆಯಾಗಿ ಬಳಸಬಹುದು. ಇದು ಜನ್ಮ ದಿನಾಂಕದ ಅಧಿಕೃತ ಪುರಾವೆಯಲ್ಲ ಎಂಬುದನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ತನ್ನ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.

ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠವು, ಅಪಘಾತದಲ್ಲಿ ಸಂಭವಿಸಿದ ಸಾವಿನ ಕುರಿತಾಗಿ ಪರಿಹಾರ ಮೊತ್ತವನ್ನು ನಿಗದಿ ಮಾಡಲು ವರ್ಗಾವಣೆ ಪ್ರಮಾಣ ಪತ್ರವನ್ನೇ ಜನ್ಮ ದಿನಾಂಕ ದೃಢೀಕರಣಕ್ಕೆ ಆಧಾರವಾಗಿ ಪರಿಗಣಿಸಿ ಮೋಟಾರು ಅಪಘಾತ ಕ್ಷೇಮುಗಳ ನ್ಯಾಯಮಂಡಳಿ ಹೊರಡಿಸಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.

ಡಿಸೆಂಬರ್ 20, 2018 ರಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿದ ಕಚೇರಿ ಜ್ಞಾಪಕ ಪತ್ರವನ್ನು ಉಲ್ಲೇಖಿಸಿ, ಆಧಾರ್ ಕಾರ್ಡ್ ಗುರುತನ್ನು ಸ್ಥಾಪಿಸಲು ಬಳಸಬಹುದಾದರೂ, ಅದು ಹುಟ್ಟಿದ ದಿನಾಂಕದ ಪುರಾವೆಯಲ್ಲ ಎಂದು 2023 ರಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಹೇಳಿದೆ ಎಂದು ನ್ಯಾಯಪೀಠ ತಿಳಿಸಿದೆ.

ಹಾಗೆಯೇ ಪರಿಹಾರದ ಮೊತ್ತವನ್ನು 9.22 ಲಕ್ಷ ರೂ.ಗಳಿಗೆ 15 ಲಕ್ಷಕ್ಕೆ ಹೆಚ್ಚಿಸಿ ಬಡ್ಡಿದರ ಶೇಕಡಾ 8ರಷ್ಟು ನಿಗದಿ ಮಾಡಿ ಆದೇಶ ಹೊರಡಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.