ಮೈಸೂರಿನ ಜೆಎಸ್‌ಎಸ್ ಕಾನೂನು ಕಾಲೇಜು ವಿದ್ಯಾರ್ಥಿಗಳಿಗೆ ಮೂಟ್ ಕೋರ್ಟ್ ಸ್ಪರ್ಧೆಯ ಗೆಲುವಿನ ಗರಿ – 30 ಸಾವಿರ ನಗದು ಬಹುಮಾನ

ದೇಶದ ಪ್ರತಿಷ್ಟಿತ ಕಾನೂನು ಕಾಲೇಜುಗಳಲ್ಲಿ ಒಂದಾದ ಸಾಂಸ್ಕೃತಿಕ ನಗರಿ ಮೈಸೂರಿನ ಜೆ ಎಸ್ ಎಸ್ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಬೆಂಗಳೂರಿನ ಸೌಂದರ್ಯ ಕಾನೂನು ಕಾಲೇಜು ಆಯೋಜಿಸಿದ್ದ ಮೊದಲನೇ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಜೆ ಎಸ್ ಎಸ್ ಕಾನೂನು ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿನಿ ಯು ಜೆ ಶೀತಲ್, ಎರಡನೇ ವರ್ಷದ ವಿದ್ಯಾರ್ಥಿಗಳಾದ ಅನನ್ಯ ಹಾಗೂ ರೋಹನ್ ವಿ ಗಂಗಡ್ಕರ್ 2023ನೇ ಸಾಲಿನ ಮೂಟ್ ಕೋರ್ಟ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಬೆಂಗಳೂರಿನ ಸೌಂದರ್ಯ ಕಾನೂನು ಕಾಲೇಜು ಸಭಾಂಗಣದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿಜೇತರಿಗೆ ಟ್ರೋಫಿ ಹಾಗೂ 30 ಸಾವಿರ ನಗದು ಬಹುಮಾನವನ್ನು ಗೌರವಾನ್ವಿತ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ಕಾನೂನು ಪ್ರಾಧಿಕಾರದ ಮುಖ್ಯಸ್ಥರಾದ ಎಸ್ ಆರ್ ಬನ್ನೂರ್‌ಮಠ್ ಹಾಗೂ ನಿವೃತ್ತ ನ್ಯಾಯಾಧೀಶರಾದ ಧರ್ಮಗೌಡರ್ ಮತ್ತು ಪ್ರೊ ಸಿ ಎಸ್ ಪಾಟೀಲ್ ವಿತರಿಸಿದರು. ಇದೇ ವೇಳೆ ವಿಜೇತ ಮೂವರು ವಿದ್ಯಾರ್ಥಿಗಳಾದ ಯು ಜೆ ಶೀತಲ್, ಅನನ್ಯ ಹಾಗೂ ರೋಹನ್ ವಿ ಗಂಗಡ್ಕರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. 2023ರ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ದೇಶದ ನೂರಕ್ಕೂ ಹೆಚ್ಚು ಪ್ರತಿಷ್ಠಿತ ಕಾಲೇಜಿನ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ಮೈಸೂರಿನ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ಜೆಎಸ್‌ಎಸ್ ಕಾನೂನು ಕಾಲೇಜು ಹಾಗೂ ಮೈಸೂರಿನ ಗೌರವವನ್ನು ಇಮ್ಮಡಿಗೊಳಿಸಿದ್ದಾರೆ.