19/05/2025

Law Guide Kannada

Online Guide

ಕಚೇರಿಗೆ ತಡವಾಗಿ ಬರುವ ಸರ್ಕಾರಿ ನೌಕರರೇ ಎಚ್ಚರ: ‘AI’ ಆಧಾರಿತ ಹಾಜರಾತಿ ವ್ಯವಸ್ಥೆ ಬಳಕೆಗೆ ನಿರ್ಧಾರ

ಬೆಂಗಳೂರು: ಸರ್ಕಾರಿ ಕಚೇರಿಗಳಿಗೆ ತಡವಾಗಿ ಬರುವ ನೌಕರರಿಗೆ ಬಿಸಿ ಮುಟ್ಟಿಸಲು ಮುಂದಾಗಿರುವ ರಾಜ್ಯ ಸರ್ಕಾರ ಇದೀಗ ಇದೇ ಮೊದಲ ಬಾರಿಗೆ ‘ಕೃತಕ ಬುದ್ಧಿಮತ್ತೆ ಆಧಾರಿತ ಹಾಜರಾತಿ ವ್ಯವಸ್ಥೆ’ ಜಾರಿಗೆ ತರಲು ಮುಂದಾಗಿದೆ.

ಹೌದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಇ- ಆಡಳಿತ ವತಿಯಿಂದ ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದ್ದು , ಶೀಘ್ರದಲ್ಲೇ ಕೃತಕ ಬುದ್ಧಿಮತ್ತೆ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಕಚೇರಿಗೆ ತಡವಾಗಿ ಬರುವ ಸರ್ಕಾರಿ ನೌಕರರ ಕಳ್ಳಾಟಕ್ಕೆ ಬ್ರೇಕ್ ಬೀಳಲಿದೆ.

ಇದಕ್ಕೂ ಮೊದಲು ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡುವ ಮೂಲಕ ನೌಕರರ ಹಾಜರಾತಿ ದಾಖಲಿಸಲಾಗುತ್ತಿತ್ತು. ಬಳಿಕ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ಬಂದಿತು. ಇದರಲ್ಲಿ ನೌಕರರು ತಮ್ಮ ಬೆರಳಚ್ಚು ನೀಡಬೇಕಿತ್ತು. ಈ ವ್ಯವಸ್ಥೆಯಲ್ಲಿ ನೌಕರರು ಕಚೇರಿಗೆ ಆಗಮಿಸಿದ ಸಮಯ ಸಿಗುತ್ತಿತ್ತು. ಆದರೆ ಕೆಲವು ಕಚೇರಿಗಳಲ್ಲಿ ಬಯೋಮೆಟ್ರಿಕ್ ಯಂತ್ರಗಳನ್ನು ಹಾಳು ಮಾಡಿ, ದುರಸ್ತಿ ನೆಪ ಹೇಳಿ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕುತ್ತಿದ್ದ ಪ್ರಕರಣಗಳು ಕಂಡು ಬಂದವು.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಇದೀಗ ಎಐ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೆ ಮುಂದಾಗಿದೆ. ಹೊಸ ತಂತ್ರಾಂಶದಲ್ಲಿ ನೌಕರರ ಜಿಪಿಎಸ್ ಟ್ರಾಕಿಂಗ್ ವ್ಯವಸ್ಥೆಯೊಂದಿಗೆ ಸಿಬ್ಬಂದಿಯ ಫೋಟೋ ಕೂಡ ಚಿತ್ರೀಕರಣಗೊಳ್ಳಲಿದ್ದು, ನೌಕರ ಯಾವ ಸ್ಥಳದಲ್ಲಿದ್ದಾರೆ ಎನ್ನುವ ಖಚಿತ ಮಾಹಿತಿ ತಿಳಿಯಲಿದೆ. ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಸಾಧಕ ಬಾಧಕ ಪರಿಶೀಲಿಸಿ ಎಲ್ಲಾ ಸರ್ಕಾರಿ ಕಚೇರಿಗಳಿಗೆ ವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.