20/05/2025

Law Guide Kannada

Online Guide

ವಿಚ್ಚೇದನ ಪ್ರಕರಣ: ಜೀವನಾಂಶ ಮೊತ್ತ ನಿರ್ಧರಿಸುವ ಅಂಶಗಳನ್ನ ಪಟ್ಟಿ ಮಾಡಿದ ಸುಪ್ರೀಂಕೋರ್ಟ್

ನವದೆಹಲಿ: ವಿಚ್ಚೇಧನ ಪ್ರಕರಣದ ಸಂದರ್ಭದಲ್ಲಿ ವಿಚ್ಚೇದನದ ನಂತರ ಮಹಿಳೆಗೆ ಜೀವನಾಂಶ ಮೊತ್ತವನ್ನು ನಿರ್ಧರಿಸಲು ಎಂಟು ಅಂಶಗಳನ್ನು ಹೊಂದಿರುವ ಸೂತ್ರವೊಂದನ್ನು ಸುಪ್ರೀಂಕೋರ್ಟ್ ಪ್ರತಿಪಾದಿಸಿದೆ.

ಪ್ರವೀಣ್ ಕುಮಾರ್ ಜೈನ್ ವರ್ಸಸ್ ಅಂಜು ಜೈನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ್ಯಾ. ವಿಕ್ರಮ್ ನಾಥ್ ಮತ್ತು ನ್ಯಾ. ಪ್ರಸನ್ನ ಬಿ. ವರಾಳೆ ಅವರಿದ್ದ ವಿಭಾಗೀಯ ನ್ಯಾಯಪೀಠವು, ವಿಚ್ಚೇದನ ಪ್ರಕರಣದಲ್ಲಿ ಜೀವನಾಂಶ ಮೊತ್ತವನ್ನು ನಿರ್ಧರಿಸುವ ಅಂಶಗಳನ್ನು ಪಟ್ಟಿ ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಹೊರಡಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ, ವಿಚ್ಚೇದಿತ ಪತ್ನಿ ಅಂಜು ಜೈನ್ ಅವರಿಗೆ ಅರ್ಜಿದಾರ ಪ್ರವೀಣ್ ಕುಮಾರ್ ಜೈನ್ 5 ಕೋಟಿ ಜೀವನಾಂಶ ನೀಡುವಂತೆ ನಿರ್ದೇಶನ ನೀಡಿದೆ. ಪ್ರಕರಣದ ಸಂದರ್ಭದಲ್ಲಿ ವಿಚ್ಚೇದನದ ನಂತರ ಮಹಿಳೆಗೆ ಜೀವನಾಂಶ ಮೊತ್ತವನ್ನು ನಿರ್ಧರಿಸಲು ಎಂಟು ಅಂಶಗಳನ್ನು ಹೊಂದಿರುವ ಸೂತ್ರವೊಂದನ್ನು ನೀಡಿದೆ. ಅವುಗಳು ಈ ಕೆಳಕಂಡಂತಿದೆ.
ಭವಿಷ್ಯದಲ್ಲಿ ಹೆಂಡತಿ ಮತ್ತು ಮಕ್ಕಳ ಮೂಲಭುತ ಅಗತ್ಯಗಳು
ಪತಿ ಮತ್ತು ಪತ್ನಿಯ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ
ಪತ್ನಿಯ ಉದ್ಯೋಗದ ಸ್ಥಿತಿ
ಆದಾಯ ಮತ್ತು ಆಸ್ತಿಗಳ ಮೂಲಗಳು
ಎರಡೂ ಪಕ್ಷಕಾರರ ಅರ್ಹತೆ ಮತ್ತು ಉದ್ಯೋಗ
ಅತ್ತೆಯ ಮನೆಯಲ್ಲಿ ಮಾಸಿಸುತ್ತಿರುವಾಗ ಪತ್ನಿಯ ಜೀವನ ಮಟ್ಟ
ನಿರ್ವಹಣೆ ಭತ್ಯೆಯೊಂದಿಗೆ ಗಂಡನ ಆರ್ಥಿಕ ಸ್ಥಿತಿ ಮತ್ತು ಪತಿಯ ಆದಾಯ/ಗಳಿಕೆ ಹಾಗೂ ಇತರ ಜವಾಬ್ದಾರಿಗಳು ಹೇಗಿರುತ್ತವೆ. ಕೆಲಸ ಮಾಡದ ಪತ್ನಿಗೆ ಕಾನೂನು ಹೋರಾಟಕ್ಕೆ ಸಮಂಜಸವಾದ ಮೊತ್ತ ನಿಗದಿಪಡಿಸುವುದು.

ವ್ಯಕ್ತಿಯೊಬ್ಬರಿಗೆ ಎಷ್ಟು ಅವಶ್ಯಕತೆ ಇದೆ ಎಂಬ ಆಧಾರದಲ್ಲಿ ಜೀವನಾಂಶ ಕೊಡಬೇಕಾ ಅಥವಾ ಪತಿ-ಪತ್ನಿಯ ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನ ನೋಡಿ ಪರಿಹಾರ ನೀಡಬೇಕೇ.. ಎಂಬ ಜಿಜ್ಞಾಸೆ ನಡೆದಿದೆ. ನ್ಯಾಯಾಲಯಗಳು ಯಾವ ಆಧಾರದಲ್ಲಿ ಜೀವನಾಂಶ ಕೊಡಬೇಕು ಎಂಬ ಪ್ರಶ್ನೆ ಎದ್ದಿರುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪಿನ ಮೂಲಕ ಮಾರ್ಗಸೂಚಿಯನ್ನು ಪ್ರಕಟಿಸಿದೆ. ವಿಚ್ಚೇದನ ಪ್ರಕರಣಗಳಲ್ಲಿ ಜೀವನಾಂಶಕ್ಕಾಗಿ ಅವೈಜ್ಞಾನಿಕ ಬೇಡಿಕೆ ಇಡಲಾಗುತ್ತಿತ್ತು. ಕೆಲವೊಮ್ಮೆ ಪತಿಯ ವೇತನ ಅಥವಾ ಆದಾಯ ಕಡಿಮೆ ಇದ್ದರೂ ಪತ್ನಿ ಅಗತ್ಯಕ್ಕೆ ಬೇಕಾಗುವಷ್ಟು ಆರ್ಥಿಕ ಪರಿಹಾರ ಕೊಡಬೇಕು ಎಂದು ಬೇಡಿಕೆ ಮಂಡಿಸಲಾಗುತ್ತಿತ್ತು.

ಈ ಮಾರ್ಗಸೂಚಿಗಳು ಸುಪ್ರೀಂ ಕೋರ್ಟ್ನ ರಜನೀಶ್ ವರ್ಸಸ್ ನೇಹಾ ಪ್ರಕರಣದ ಮುಂದುವರಿದ ಭಾಗವಾಗಿದೆ ಎಂದು ಕಾನೂನು ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಪತಿಯ ಆರ್ಥಿಕ ಪರಿಸ್ಥಿತಿ ಮತ್ತು ಕುಟುಂಬದ ಸಾಮಾಜಿಕ ಸ್ನಾನಮಾನ ಹಾಗೂ ಪತ್ನಿಯ ಅವಶ್ಯಕತೆ ಕುರಿತಾದ ಮಾಹಿತಿಗಳನ್ನು ಪರಿಶೀಲಿಸಿ ಎಷ್ಟು ಜೀವನಾಂಶ ಕೊಡಬೇಕು ಎಂದು ನಿರ್ಧರಿಸುತ್ತದೆ. ವ್ಯಕ್ತಿಯ ಸಂಬಳದಲ್ಲಿ ಶೇ. 30ರಿಂದ 40ರಷ್ಟು ಮೊತ್ತವನ್ನು ಜೀವನಾಂಶವಾಗಿ ಕೊಡಬಹುದು ಎಂಬ ನಿಯಮವನ್ನು ಮಾಡಿದೆ. ಹೀಗೆ ಕೊಡುವಾಗ, ಪತ್ನಿಯ ವಿದ್ಯಾರ್ಹತೆ ಮತ್ತು ಆದಾಯ, ವೃತ್ತಿ ಜೀವನದ ಮಾಹಿತಿಯನ್ನೂ ಕಲೆ ಹಾಕುತ್ತದೆ.
ಒಂದು ವೇಳೆ, ಪತ್ನಿಯು ಪತಿಯಷ್ಟೇ ಆದಾಯವನ್ನು ಪಡೆಯುತ್ತಿದ್ದರೆ ಆಗ ಪತಿಯು ಪತ್ನಿಗೆ ಪರಿಹಾರವನ್ನು ನೀಡುವ ಅಗತ್ಯವಿಲ್ಲ. ಆದರೆ, ಮಕ್ಕಳಿಗೆ ಜೀವನಾಂಶ ಕೊಡಬೇಕು. ಮಕ್ಕಳ ಪಾಲನೆ ಮತ್ತು ಪೋಷಣೆಯು ಸಹಜವಾಗಿಯೇ ಆ ಮಕ್ಕಳ ತಂದೆಯ ಜವಾಬ್ದಾರಿ ಎಂಬುದನ್ನು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಪತ್ನಿಗೆ ಉತ್ತಮ ಆದಾಯ ಇದ್ದರೆ, ಆಕೆಯೂ ಮಕ್ಕಳ ವಿದ್ಯಾಭ್ಯಾಸಕ್ಕೆ ಪಾಲು ನೀಡಬೇಕು ಎಂಬುದನ್ನು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಜೀವನಾಂಶ ಅಥವಾ ವೈವಾಹಿಕ ಸಂಬಂಧಗಳಲ್ಲಿ ರಾಜಿ ಮಾಡಿಕೊಳ್ಳಲು ಮುಂದಾಗುವ ವಿಚ್ಚೇದಿತ ದಂಪತಿಗಳು ಕೋರ್ಟ್ ಮುಂದೆ ಆದಾಯ ಹಾಗೂ ಆಸ್ತಿ ವಿವರದ ಅಫಿಡವಿಟ್ ಸಲ್ಲಿಸಬೇಕು. ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸಿದ “ರಜನೀಶ್ ವರ್ಸಸ್ ನೇಹಾ” ಪ್ರಕರಣದಲ್ಲಿ ವಿವರವಾಗಿ ಚರ್ಚಿಸಲಾಗಿದೆ.

ಅಫಿಡವಿಟ್ ನಲ್ಲಿ ಇಬ್ಬರೂ ತಮ್ಮ ವಿದ್ಯಾರ್ಹತೆ, ವೇತನ, ಇತರ ಆದಾಯ, ಅವಲಂಬಿತರ ವಿವರ, ಮಕ್ಕಳ ವಿವರ, ವೈದ್ಯಕೀಯ ಹಾಗೂ ಇತರ ವೆಚ್ಚಗಳ ಸಂಭಾವ್ಯ ಪಟ್ಟಿ ಹಾಗೂ ಇತರ ಮಾಹಿತಿಯನ್ನು ವಿವರವಾಗಿ ನೀಡಬೇಕು. ಜೊತೆಗೆ ತಮ್ಮ ಬ್ಯಾಂಕ್ ಖಾತೆಯ ಮೂರು ವರ್ಷಗಳ ತಖ್ತೆಯನ್ನು ಹಾಜರುಪಡಿಸಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ಸೂಚಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.