ಆರೋಪಿಗೆ ಜಾಮೀನು ನೀಡಲು ನಕಾರ: ವಂಚಕರಿಗೆ ಕರುಣೆ ತೋರಿದ್ರೆ ಸಮಾಜದ ಮೇಲೆ ಪ್ರತಿಕೂಲ ಪರಿಣಾಮ: ಹೈಕೋರ್ಟ್

ಬೆಂಗಳೂರು: ಮಹಿಳೆಯೊಬ್ಬರಿಗೆ ಆನ್ ಲೈನ್ ಟ್ರೇಡಿಂಗ್ ಹೆಸರಿನಲ್ಲಿ 4 ಕೋಟಿ ರೂ. ವಂಚಿಸಿದ್ದ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿರುವ ಹೈಕೋರ್ಟ್, ವಂಚಕರಿಗೆ ಕರುಣೆ ತೋರಿದ್ರೆ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟಿದೆ.
ಆನ್ ಲೈನ್ ಟ್ರೇಡಿಂಗ್ ಗಾಗಿ ವಿವಿಧ ಹೆಸರುಗಳಲ್ಲಿ ಇನ್ಸ್ಟಾ ಗ್ರಾಮ್ ಖಾತೆಗಳನ್ನು ಸೃಷ್ಟಿಸಿ 100ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಬಳಸಿ ಬೆಂಗಳೂರಿನ ಸಾಪ್ಟವೇರ್ ಎಂಜಿನಿಯರ್ ಆಗಿರುವ ಮಹಿಳೆಗೆ 4 ಕೋಟಿ ರೂ. ವಂಚಿಸಿದ ಆರೋಪದಲ್ಲಿ ಬಂಧನ ಭೀತಿಯಲ್ಲಿದ್ದ ಕೋಲ್ಕತ್ತಾದ ಶಹನವಾಜ್ ಖಾನ್ ಎಂಬವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಪೀಠ, ನಿರೀಕ್ಷಣಾ ಜಾಮೀನು ನಿರಾಕರಿಸಿ ಅರ್ಜಿ ವಜಾಗೊಳಿಸಿದೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಟ್ರೇಡಿಂಗ್ ಹೆಸರಿನಲ್ಲಿ ವಂಚನೆ ಆರೋಪಗಳು ಹೆಚ್ಚಾಗುತ್ತಿದ್ದು, ಅದನ್ನು ಕಡಿಮೆ ಮಾಡಬೇಕಾಗಿದೆ. ಈ ರೀತಿಯ ಪ್ರಕರಣಗಳಲ್ಲಿ ಕರುಣೆ ತೋರಿದಲ್ಲಿ ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು, ಮತ್ತಷ್ಟು ಅಪರಾಧಗಳು ನಡೆಯುವುದನ್ನು ನಿರಾಕರಿಸಲಾಗುವುದಿಲ್ಲ ಎಂದು ಹೇಳಿದೆ.
ಜತೆಗೆ ದೂರುದಾರ ವಂಚನೆಗೊಳಗಾದ ಇನ್ಸ್ಟಾಗ್ರಾಮ್ ಖಾತೆಯನ್ನು ಅರ್ಜಿದಾರರ ಮೊಬೈಲ್ ಸಂಖ್ಯೆಯಿಂದ ನಿರ್ವಹಣೆ ಮಾಡಲಾಗುತ್ತಿದ್ದು, ಈ ವಂಚನೆ ಪ್ರಕರಣದಲ್ಲಿ ಅವರ ಪಾತ್ರವಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಅವರಿಂದ ವಂಚನೆಗೊಳಗಾದ 4,46,86,593 ರು. ಕುರಿತು ವಿಚಾರಣೆಗೆ ಒಳಪಡಿಸಬೇಕಾಗಿದೆ. ಅಲ್ಲದೆ, ಅರ್ಜಿದಾರ ಪಶ್ಚಿಮ ಬಂಗಾಳದ ಕೋಲ್ಕತ್ತದವರಾಗಿದ್ದು ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದಲ್ಲಿ ತನಿಖೆಗೆ ಅಡ್ಡಿಯಾಗಲಿದೆ ಎಂದು ನ್ಯಾಯಪೀಠ ಹೇಳಿ ಜಾಮೀನು ನೀಡಲು ನಿರಾಕರಿಸಿದೆ.
ಏನಿದು ಪ್ರಕರಣ
ಬೆಂಗಳೂರಿನ ಚೂಡಸಂದ್ರದ ಸಾಫ್ಟ್ ವೇರ್ ಎಂಜಿನಿಯರ್ ಲೀಲಾ ಪದ್ಮಜಾ ಆಗಸ್ತ್ಯಾ ಅವರಿಗೆ ಅಪರಿಚಿತ ಇನ್ಸಾಗ್ರಾಮ್ ಖಾತೆಯ ವೇದಿಕಾ ಶರ್ಮಾ ಎಂಬವರು ಸಂಪರ್ಕಿಸಿ ಫಾರ್-ಎಕ್ಸ್ /ಬಿಟ್ ಕಾಯಿನ್ ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗಲಿದೆ. 10 ಸಾವಿರ ಹೂಡಿಕೆ ಮಾಡಿದಲ್ಲಿ 30 ಸಾವಿರ ಸಿಗಲಿದೆ, ಅದರಲ್ಲಿ ಶೇ.10ರಷ್ಟು ಕಮಿಷನ್ ರೂಪದಲ್ಲಿ ನೀಡಬೇಕು ಎಂದು ತಿಳಿಸಿದ್ದರು.
ಹಾಗೆಯೇ ಇದೇ ವೇಳೆ ಪದೇ ಪದೆ ಹಣ ಹೂಡಿಕೆ ಮಾಡಲು ಒತ್ತಾಯಿಸಿದ್ದು, ಹಲವು ಸಂದರ್ಭಗಳಲ್ಲಿ ಹೂಡಿಕೆ ಮಾಡಿಸಿ ಹಣ ಹಿಂದಿರುಗಿಸಿಲ್ಲ ಎಂದು ದೂರಲಾಗಿದೆ. ಇದಾದ ಕೆಲ ದಿನಗಳ ಬಳಿಕ ಮನೀಶ್ ಎಂಬ ಹೆಸರಿನಲ್ಲಿ ಟ್ರೇಡರ್ ಮನೀಶ್ ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ದೂರುದಾರರನ್ನು ಸಂಪರ್ಕಿಸಿ, ಈವರೆಗೆ ಹೂಡಿಕೆ ಮಾಡಿರುವ ಹಣ ಹಿಂಪಡೆಯಬಹುದಾಗಿದೆ. ಅದಕ್ಕಾಗಿ ಹಣ ಕಳುಹಿಸಬೇಕು ಎಂದು ತಿಳಿಸಿ ಮೊಬೈಲ್ ಸಂಖ್ಯೆ ನೀಡಿ, ಹಂತ-ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ 4,46,86,593 ಪಡೆದು ಹಿಂದಿರುಗಿಸದೆ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ