ನ್ಯಾಯಾಲಯ ಪರಿಗಣಿಸುವ ಮೊದಲೇ ಮಾಧ್ಯಮಕ್ಕೆ ಅರ್ಜಿ ದಾಖಲೆ ಬಿಡುಗಡೆ ಸ್ವೀಕಾರ್ಹವಲ್ಲ – ಹೈಕೋರ್ಟ್ ಅಸಮಾಧಾನ

ಬೆಂಗಳೂರು: ಅರ್ಜಿ, ದಾಖಲೆ, ಅಫಿಡವಿಟ್ ಇತ್ಯಾದಿಗಳನ್ನು ನ್ಯಾಯಾಲಯ ಪರಿಗಣಿಸಿ ಆದೇಶ ಮಾಡುವ ಮೊದಲೇ ವಕೀಲರು ಮತ್ತು ದಾವೆದಾರರು, ಮಾಹಿತಿಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡುವ ನಡೆಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ತಾನು ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಪ್ರತಿಭಾ ಎಂ. ಸಿಂಗ್ ಮತ್ತು ಅಮಿತ್ ಶರ್ಮಾ ಅವರಿದ್ದ ನ್ಯಾಯಪೀಠ ಈ ರೀತಿ ಬೇಸರ ವ್ಯಕ್ತಪಡಿಸಿದೆ.
ನ್ಯಾಯಾಲಯ ಪರಿಗಣಿಸುವ ಮೊದಲೇ ಮಾಧ್ಯಮಕ್ಕೆ ಅರ್ಜಿ ಮತ್ತು ದಾಖಲೆಗಳನ್ನು ಬಿಡುಗಡೆ ಮಾಡುವುದು ಸ್ವೀಕಾರ್ಹವಲ್ಲ. ಇತ್ತೀಚೆಗೆ ಈ ಪ್ರವೃತ್ತಿ ಹೆಚ್ಚುತ್ತಿದ್ದು, ಇದು ಸರಿಯಲ್ಲ ಮತ್ತು ಸ್ವೀಕಾರ್ಹವಲ್ಲ. ಇದು ಕಕ್ಷಿದಾರರಿಗೆ ಪೂರ್ವಗ್ರಹ ಉಂಟು ಮಾಡಬಹುದು. ಜೊತೆಗೆ ಕೋರ್ಟ್ ಸ್ವತಂತ್ರ ನಿರ್ಧಾರದ ಮೇಲೂ ಪರಿಣಾಮ ಬೀರಬಹುದು ಎಂದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಏನಿದು ಪ್ರಕರಣ…
ಹೀರೋ ಮೋಟೋ ಕಾರ್ಪ್ ಲಿ.ಗೆ ಬೈನ್ ಲಾಜಿಸ್ಟಿಕ್ಸ್ ಪ್ರೈಲಿ. ಸಂಸ್ಥೆಯು ನೀಡಿದ್ದ ದಿನಾಂಕವಿಲ್ಲದ ಸಹಿ ಮಾಡದ ಲೀಗಲ್ ನೋಟೀಸನ್ನು ನ್ಯೂ ಇಂಡಿಯನ್ ಸುದ್ದಿ ಜಾಲತಾಣದ ಪತ್ರಕರ್ತರೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದ್ದ ಪ್ರಕರಣ ಇದಾಗಿದೆ.
ಹೈಕೋರ್ಟ್ ರಿಜಿಸ್ಟ್ರಿಯ ಕಾರ್ಯಚಟುವಟಿಕೆ, ಅನುಕೂಲಕರ ತೀರ್ಪು ಪಡೆಯುವುದು, ನ್ಯಾಯಾಲಯದ ಎದುರು ಪ್ರಕರಣ ಮಂಡಿಸುವಲ್ಲಿ ಅವ್ಯವಹಾರ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಲೀಗಲ್ ನೋಟೀಸ್ ನಲ್ಲಿ ಸುಳ್ಳು, ವೃಥಾ ಆರೋಪ ಮತ್ತು ಅವಹೇಳನ ಮಾಡಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಆರಂಭಿಸಿತ್ತು.
ಬೈನ್ ಲಾಜಿಸ್ಟಿಕ್ ನಿರ್ದೇಶಕರೊಬ್ಬರು ಹೀರೋ ಮೋಟೋ ಕಾರ್ಪ್ ನ ಪ್ರತಿಷ್ಠೆಗೆ ಧಕ್ಕೆ ತರಲು ಉದ್ದೇಶಪೂರ್ವಕವಾಗಿ ಲೀಗಲ್ ನೋಟೀಸನ್ನು ಮಾಧ್ಯಮಕ್ಕೆ ಸೋರಿಕೆ ಮಾಡಿದ್ದಾರೆ ಎಂದು ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿತು. ಲೀಗಲ್ ನೋಟೀಸ್ ನೀಡಿದ್ದ ವಕೀಲರು ಕೋರ್ಟ್ ನಲ್ಲಿ ಬೇಷರತ್ ಕ್ಷಮೆ ಯಾಚಿಸಿದ್ದು. ಸುಳ್ಳು ಆರೋಪ ಮಾಡಿರುವುದನ್ನು ಒಪ್ಪಿಕೊಂಡರು. ಆಗ, ಕೋರ್ಟ್ ಮಾಧ್ಯಮ ಸಂಸ್ಥೆಗಳು ಮತ್ತು ಪಕ್ಷಕಾರರ ಕರ್ತವ್ಯಗಳು ಮತ್ತು ಜವಾಬ್ದಾರಿಯನ್ನು ವಿವರಿಸಿದೆ.
ಕೋರ್ಟ್ ಮತ್ತು ತಮ್ಮ ಕಕ್ಷಿದಾರರ ಬಗ್ಗೆ ವಕೀಲರಿಗೆ ಇರುವ ಕರ್ತವ್ಯಗಳನ್ನು ಬಿಸಿಐ ನಿಯಮಗಳು ಸ್ಪಷ್ಟಪಡಿಸಿವೆ. ಈ ಪ್ರಕಾರ ವಕೀಲರು ಕಾರ್ಯನಿರ್ವಹಿಸಿಲ್ಲ. ವಕೀಲರ ಹೆಸರು ಮತ್ತು ವಕೀಲರ ಪರಿಷತ್ ನೋಂದಣಿ ಸಂಖ್ಯೆಗಳನ್ನು ಲೀಗಲ್ ನೋಟೀಸ್ನಲ್ಲಿ ಉಲ್ಲೇಖಿಸದೇ ಇರುವುದು ದೆಹಲಿ ಹೈಕೋರ್ಟ್ ಮತ್ತು ಬಿ.ಸಿ.ಐ. ನಿಯಮಗಳು ಸೂಚಿಸಿದ ವೃತ್ತಿಪರತೆ ಕುರಿತ ನಿರ್ದೇಶನಗಳಿಗೆ ವಿರುದ್ಧವಾಗಿವೆ. ಈ ಹಿನ್ನೆಲೆಯಲ್ಲಿ ವಕೀಲರ ಮೇಲೆ ಶಿಸ್ತುಕ್ರಮಗಳನ್ನು ಆರಂಭಿಸುವಂತೆ ದೆಹಲಿ ವಕೀಲರ ಪರಿಷತ್ತಿಗೆ ನ್ಯಾಯಾಲಯ ಸೂಚನೆ ನೀಡಿತು.
ಲೀಗಲ್ ನೋಟೀಸ್ ಬಹಿರಂಗ ಪಡಿಸುವ ಮುನ್ನ ಆರೋಪಗಳನ್ನು ಪರಿಶೀಲಿಸುವುದು ಪತ್ರಕರ್ತರ ಕರ್ತವ್ಯ. ಭವಿಷ್ಯದಲ್ಲಿ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಮತ್ತು ಗರಿಷ್ಠ ಜವಾಬ್ದಾರಿಯೊಂದಿಗೆ ಪತ್ರಿಕಾಧರ್ಮದಲ್ಲಿ ತೊಡಗಬೇಕು ಎಂದು ಪತ್ರಕರ್ತನಿಗೆ ಎಚ್ಚರಿಕೆ ನೀಡಿ ಹೈಕೋರ್ಟ್ ನ್ಯಾಯಪೀಠ ಪ್ರಕರಣದಿಂದ ಕೈಬಿಟ್ಟಿತು. ಇದೇ ವೇಳೆ, ಲೀಗಲ್ ನೋಟೀಸ್ ಜಾರಿಗೊಳಿಸಿದ್ದ ಪಾಂಡೆ ರೂಢಿಗತ ಅಪರಾಧಿಯಾಗಿದ್ದು, ಕೋರ್ಟ್ ನ ಕ್ಷಮೆಯಾಚನೆ ಮಾಡಿದ್ದರೂ ಪ್ರಕರಣದಿಂದ ಕೈಬಿಡಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಪೀಠ ವಕೀಲರಿಗೆ ಎರಡು ವಾರಗಳ ಸಾದಾ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ಪ್ರಕಟಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ