20/05/2025

Law Guide Kannada

Online Guide

ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ಎಫ್ಐಆರ್ ದಾಖಲಾಗಿರಬೇಕೇ..? : ಸುಪ್ರೀಂ ಕೊಟ್ಟ ತೀರ್ಪಿದು.

ನವದೆಹಲಿ: ಜಿಎಸ್ಟಿ (ಸರಕು ಮತ್ತು ಸೇವೆಗಳ ಕಾಯ್ದೆ) ಮತ್ತು ಕಸ್ಟಮ್ಸ್ ಕಾಯ್ದೆಗಳಿಗೂ ನಿರೀಕ್ಷಣಾ ಜಾಮೀನು ಕಾನೂನು ಅನ್ವಯವಾಗುತ್ತದೆ ಮತ್ತು ಎಫ್ಐಆರ್ ಆಗಿರದಿದ್ದರೂ ವ್ಯಕ್ತಿಗಳು ನಿರೀಕ್ಷಣಾ ಜಾಮೀನು (ಬಂಧನ ಪೂರ್ವ ಜಾಮೀನು) ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್, ಬೇಲಾ ಎಂ. ತ್ರಿವೇದಿ ಅವರಿದ್ದ ತಿ ಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ. ಕಸ್ಟಮ್ಸ್ ಕಾಯ್ದೆ, ಜಿಎಸ್ಟಿ ಕಾಯ್ದೆಯಲ್ಲಿನ ದಂಡದ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಮೇಲಿನ ತೀರ್ಪನ್ನು ನ್ಯಾಯಪೀಠವು ಕಾಯ್ದಿರಿಸಿತ್ತು. ತೀರ್ಪು ಪ್ರಕಟಿಸಿದ್ದು ಯಾವುದೇ ವ್ಯಕ್ತಿ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಸಂದರ್ಭದಲ್ಲಿ ಎಫ್ಐಆರ್ ದಾಖಲಾಗಿರಬೇಕು ಎಂಬ ನಿಯಮ ಇಲ್ಲ. ಎಫ್ಐಆರ್ ಇಲ್ಲದಿದ್ದರೂ ನಿರೀಕ್ಷಣಾ ಜಾಮೀನು ಸಲ್ಲಿಸಬಹುದು ಎಂದು ತ್ರಿಸದಸ್ಯ ಪೀಠ ತೀರ್ಪು ನೀಡಿದೆ.

ಅಪರಾಧಿಕ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ನಿರೀಕ್ಷಣಾ ಜಾಮೀನಿಗೆ ಕುರಿತಾಗಿರುವ ಇರುವ ಅಂಶಗಳು ಸೀಮಾ ಸುಂಕ ಕಾಯ್ದೆ ಮತ್ತು ಜಿಎಸ್ಟಿ ಕಾಯ್ದೆಗೆ ಕೂಡ ಅನ್ವಯವಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ತೀರ್ಪು ಪ್ರಕಟಿಸುವಾಗ ಸ್ಪಷ್ಟಪಡಿಸಿದರು.

ಸಿಆರ್ಪಿಸಿಯ ಸೆಕ್ಷನ್ 438ರ ಅಡಿಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸುವುದಕ್ಕೂ ಮೊದಲು ಎಫ್ ಐಆರ್ ದಾಖಲಾಗಿರಬೇಕು ಎಂಬ ನಿಯಮ ಇಲ್ಲ. ವಾಸ್ತವ ಏನು ಎಂಬುದು ಸ್ಪಷ್ಟವಾಗಿದ್ದರೆ, ಬಂಧನದ ಭೀತಿಗೆ ಸಕಾರಣಗಳು ಇದ್ದರೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಪೀಠ ಹೇಳಿದೆ. ಸೀಮಾ ಸುಂಕ ಅಧಿಕಾರಿಗಳು ಪೊಲೀಸರಲ್ಲ, ಸೀಮಾ ಸುಂಕ ಅಧಿಕಾರಿಗಳಿಂದ ಬಂಧಿತ ವ್ಯಕ್ತಿಯು ತನ್ನ ವಕೀಲರನ್ನು ಭೇಟಿ ಮಾಡುವ ಹಕ್ಕು ಹೊಂದಿರುತ್ತಾನೆ. ಆದರೆ, ವಿಚಾರಣೆಯ ಉದ್ದಕ್ಕೂ ಆತ ವಕೀಲರನ್ನು ಭೇಟಿ ಮಾಡುವಂತಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.