ತಾಪಮಾನ ಏರಿಕೆ ವಿಪರೀತ ಸೆಕೆ: ಕರಿಕೋಟ್ ಗೆ ವಿನಾಯಿತಿ ನೀಡುವಂತೆ ವಕೀಲರ ಮನವಿ

ಬೆಂಗಳೂರು: ಈಗಾಗಲೇ ಬೇಸಿಗೆಕಾಲ ಶುರುವಾಗಿದ್ದು ರಾಜ್ಯದಲ್ಲಿ ತಾಪಮಾನ ಏರಿಕೆಯಾಗುತ್ತಿದೆ. ವಿಪರೀತ ಸೆಕೆಯ ವಾತಾವರಣ ಹಿನ್ನೆಲೆಯಲ್ಲಿ ಕಪ್ಪು ಕೋಟು ಹಾಕಿಕೊಂಡು ಕರ್ತವ್ಯ ನಿರ್ವಹಿಸುವುದು ಕಷ್ಟಕರವಾಗುತ್ತಿದೆ. ಹಾಗಾಗಿ ಕರಿಕೋ ಟ್ ಗೆ ವಿನಾಯಿತಿ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಬೆಂಗಳೂರು ವಕೀಲರ ಸಂಘ ಮನವಿ ಸಲ್ಲಿಸಿದ್ದಾರೆ .
ಬೆಂಗಳೂರು ವಕೀಲರ ಸಂಘ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಹಾಗೂ ಪದಾಧಿಕಾರಿಗಳು ಸಿಜೆ ಎನ್.ವಿ. ಅಂಜಾರಿಯಾ ಅವರನ್ನು ಭೇಟಿ ಮಾಡಿ, ರಾಜ್ಯದ ಎಲ್ಲ ಜಿಲ್ಲಾ ನ್ಯಾಯಾಲಯಗಳಲ್ಲಿ ವಕೀಲರಿಗೆ ಕರಿ ಕೋಟು ಧರಿಸುವುದರಿಂದ ವಿನಾಯಿತಿ ನೀಡಬೇಕು ಎಂದು ಲಿಖಿತವಾಗಿ ಮನವಿ ಸಲ್ಲಿಸಿದ್ದಾರೆ.
ನೆರೆಯ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಈಗಾಗಲೇ ವಕೀಲರಿಗೆ ಕರಿಕೋಟು ಧರಿಸುವಲ್ಲಿ ವಿನಾಯಿತಿ ನೀಡಲಾಗಿದೆ. ಉರಿ ಸೆಕೆ ಮತ್ತು ಬಿಸಿಲ ಬೇಗೆಯಲ್ಲಿ ಕರಿ ಕೋಟು ಹಾಕಿಕೊಂಡು ಅತ್ತಿತ್ತ ಓಡಾಡಲು ವಕೀಲರಿಗೆ ಕಷ್ಟವಾಗುತ್ತಿದೆ. ತಾಪಮಾನ ಇನ್ನಷ್ಟು ಹೆಚ್ಚುತ್ತಿದೆ. ಹಾಗಾಗಿ, ಈ ವಿನಾಯಿತಿ ಅಗತ್ಯವಾಗಿ ನೀಡಬೇಕು ಎಂದು ವಕೀಲರು ಮನವಿ ಮಾಡಿದ್ದಾರೆ.
ಜಿಲ್ಲಾ ನ್ಯಾಯಾಲಯಗಳಲ್ಲಿ ಹವಾ ನಿಯಂತ್ರಿತ ವ್ಯವಸ್ಥೆ ಇಲ್ಲ. ಬಿಳಿ ವಸ್ತ್ರದ ಮೇಲೆ ಕರಿಕೋಟು ಧರಿಸುವುದು ಕಷ್ಟ. ಹಾಗಾಗಿ, ಬೇಸಿಗೆ ರಜೆ ಮುಗಿದು ಕೋರ್ಟ್ ಪುನಾರಂಭಗೊಳ್ಳುವವರೆಗೆ ಕರಿ ಕೋಟ್ ಗೆ ವಿನಾಯಿತಿ ನೀಡಬೇಕು ಎಂದು ವಕೀಲರು ಕೋರಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ