ಪತ್ನಿ, ಮಕ್ಕಳಿಗೆ ಜೀವನಾಂಶ ನೀಡದ ವೈದ್ಯ ಪತಿ ವಿರುದ್ದ ಹೈಕೋರ್ಟ್ ತೀವ್ರ ಆಕ್ರೋಶ: ಜೈಲು ಶಿಕ್ಷೆ ಪ್ರಕಟ..

ಬಾಂಬೆ: ಕೌಟುಂಬಿಕ ನ್ಯಾಯಾಲಯದ ಆದೇಶದ ಪ್ರಕಾರ ಪತ್ನಿ ಮತ್ತು ಮಕ್ಕಳಿಗೆ ಜೀವನಾಂಶ ನೀಡದ ಇಲ್ಲೊಬ್ಬ ವೈದ್ಯ ಪತಿ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಾಂಬೆ ಹೈಕೋರ್ಟ್ ಆರು ತಿಂಗಳ ಸಿವಿಲ್ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನ್ಯಾಯಾಲಯ ನೀಡಿದ ವಿವಿಧ ಆದೇಶಗಳನ್ನು ಕಡೆಗಣಿಸಿ ಇಬ್ಬರು ಮಕ್ಕಳು ಹಾಗೂ ಪತ್ನಿಗೆ ಉದ್ದೇಶಪೂರ್ವಕವಾಗಿ ಜೀವನಾಂಶ ನೀಡದ ವೈದ್ಯ ಪತಿಗೆ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ಜಿ.ಎಸ್. ಕುಲಕರ್ಣಿ ಮತ್ತು ಅವೈತ್ ಸೇತ್ನಾ ಅವರಿದ್ದ ನ್ಯಾಯಪೀಠ ಆರು ತಿಂಗಳ ಸಿವಿಲ್ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ವೈದ್ಯರು ನಿಯಮ ಪಾಲಿಸುವುದನ್ನು ತಪ್ಪಿಸಲು ಮಾಡಿದ ಪ್ರಯತ್ನಗಳನ್ನು ನ್ಯಾಯಪೀಠ ಗಂಭೀರವಾಗಿ ಪರಿಗಣಿಸಿದ್ದು, ಆದೇಶ ಉಲ್ಲಂಘಿಸಿದವರಿಗೆ ಕಾನೂನಿನ ಬಗ್ಗೆ ಗೌರವ ಇಲ್ಲ ಎಂದು ಆರೋಪಿ ವೈದ್ಯನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಪೀಠವು, ವೈದ್ಯ ಕೋರ್ಟ್ ಆದೇಶ ಉಲ್ಲಂಘಿಸಿದ್ದಲ್ಲದೆ, ಪತ್ನಿ ಮತ್ತು ತನ್ನ ಹೆಣ್ಣು ಮಗಳನ್ನು ಕಾಪಾಡಿಕೊಳ್ಳಬೇಕೆಂಬ ಸಹಜ ಹಾಗೂ ನ್ಯಾಯಯುತ ಕಾಳಜಿ ಇಲ್ಲ ಎಂದು ಚಾಟಿ ಬೀಸಿತು.
ವೈದ್ಯರ ಪರ ವಾದ ಮಂಡಿಸಿದ್ದ ವಕೀಲರು, ಜೀವನಾಂಶದ ಮೊತ್ತ ವಿಪರೀತವಾಗಿದೆ. ಇದನ್ನು ಪಾವತಿಸಲು ವೈದ್ಯ ಅಸಮರ್ಥರಾಗಿದ್ದಾರೆ. ಮತ್ತು ಪಾವತಿ ಮಾಡದೇ ಇರುವುದಕ್ಕೆ ಸೂಕ್ತ ಕಾರಣ ಇದೆ ಎಂದು ಹೇಳಿದರು. ಆದರೆ ವೈದ್ಯ ಪರ ವಕೀಲರ ವಾದವನ್ನು ತಿರಸ್ಕರಿಸಿದ ನ್ಯಾಯಪೀಠ, ಸುಪ್ರೀಂ ಕೋರ್ಟ್ ಹಾಗೂ ವಿವಿಧ ಹೈಕೋರ್ಟ್ ಗಳು ನೀಡಿದ ಆದೇಶದ ಪ್ರಕಾರವೇ ಜೀವನಾಂಶವನ್ನು ನಿರ್ಧರಿಸಲಾಗಿದೆ ಎಂದು ಹೇಳಿತು.
ಕೋರ್ಟ್ ಆದೇಶ ಪಾಲಿಸದೇ ಇರುವುದು ಆತನ ಬಹಿರಂಗ ಪ್ರತಿಭಟನೆಯ ಕೃತ್ಯ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಆರೋಪಿಯ ನಿರ್ಲಕ್ಷ್ಯಕ್ಕೆ ಶಿಕ್ಷೆ ನೀಡದೇ ಹಾಗೆ ಬಿಡಲು ಸಾಧ್ಯವಿಲ್ಲ. ಹಾಗಾಗಿ, ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿಲಾಗುತ್ತಿದೆ ಎಂದು ತೀರ್ಪು ಪ್ರಕಟಿಸಿ ನಂತರ ಕೋರ್ಟ್ ಕಲಾಪದ ವೇಳೆ ಹಾಜರಿದ್ದ ಪತಿ ವೈದ್ಯನನ್ನು ವಶಕ್ಕೆ ಪಡೆಯುವಂತೆ ಪೋಲೀಸರಿಗೆ ಆದೇಶ ಹೊರಡಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ