ಇನ್ಮುಂದೆ ತಂದೆ-ತಾಯಿ ಆರೈಕೆ ಮಾಡದಿದ್ರೆ ಅವರ ಆಸ್ತಿಯಲ್ಲಿ ಮಕ್ಕಳಿಗೆ ಪಾಲಿಲ್ಲ: ಹಿರಿಯ ನಾಗರಿಕ ಕಾಯ್ದೆಯ ನಿಯಮಗಳೇನು…?

ಬೆಂಗಳೂರು: ಹಿಂದೆ ತಂದೆ ತಾಯಿಯ ಆಸ್ತಿ ಮಕ್ಕಳಿಗೆ ಸೇರುತ್ತೆ ಎಂಬ ಕಾನೂನಿತ್ತು. ಕೆಲವರು ಆಸ್ತಿ ಸಿಕ್ಕ ಮೇಲೆ ತಂದೆ-ತಾಯಿಯನ್ನು ನಡುನೀರಿನಲ್ಲಿ ಕೈಬಿಡುತ್ತಿದ್ದರು. ವಯಸ್ಸಾದ ತಂದೆ ತಾಯಿಯನ್ನ ಸರಿಯಾಗಿ ಆರೈಕೆ ಮಾಡದೇ ವೃದ್ಧಾಶ್ರಮಕ್ಕೆ ಸೇರಿಸುವ ಸಂಖ್ಯೆ ಹೆಚ್ಚಾಯಿತು. ಇದನ್ನೆಲ್ಲ ಮನಗಂಡಿರುವ ಕರ್ನಾಟಕ ಸರ್ಕಾರವು ಆಸ್ತಿಯಲ್ಲಿ ಪಾಲು ಕೇಳುವ ವಿಚಾರದಲ್ಲಿ ಹೊಸ ನಿಯಮಗಳನ್ನು ರೂಪಿಸಿದೆ.
ಹೌದು ತಂದೆ-ತಾಯಿ ಹಾಗೂ ಹಿರಿಯರನ್ನು ಆರೈಕೆ ಮಾಡದಿದ್ದರೆ, ತನ್ನ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ಅವರು ನೀಡಿದ ವಿಲ್-ಧಾನಪತ್ರವನ್ನು ರದ್ದು ಮಾಡುವ ಅವಕಾಶವನ್ನು ಕೇಂದ್ರ ಸರ್ಕಾರದ “ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007” ನೀಡಿದೆ ಎಂದು ಪರಿಷತ್ ನಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದ್ದಾರೆ
ಹಾಗಾದರೇ ತಂದೆ-ತಾಯಿಯನ್ನು ಕಡೆಗಣಿಸಿದರೆ ಕಾನೂನು ಪ್ರಕಾರ ಮಕ್ಕಳಿಗೆ ಆಸ್ತಿ ಪಾಲು ಸಿಗದಂತೆ ಮಾಡಬಹುದೇ..? ಹಿರಿಯ ನಾಗರಿಕ ಕಾಯ್ದೆಯಲ್ಲಿ ಈ ಬಗ್ಗೆ ನಿಯಮ ಇದೆಯೇ..? ಈ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ ಉತ್ತರ ನೀಡಿದೆ.
ಈ ಕಾಯ್ದೆಯಲ್ಲಿ ಪೋಷಕರನ್ನು ನಿರ್ಲಕ್ಷಿಸುವ ಮಕ್ಕಳಿಗೆ ಹೆತ್ತವರ ಆಸ್ತಿಯಲ್ಲಿ ಪಾಲು ಸಿಗದಂತೆ ಮಾಡುವ ನಿಯಮ ಇದೆ. ಪೋಷಕರನ್ನು ಆರೈಕೆ ಮಾಡದಿದ್ದರೆ ತನ್ನ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ನೀಡಿದ ವಿಲ್ ಅಥವಾ ದಾನಪತ್ರವನ್ನು ರದ್ದು ಮಾಡಲು ಅವಕಾಶ ಇದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಈ ಕಾಯ್ದೆಯ ಪ್ರಕಾರ, ಮಕ್ಕಳು ಅಥವಾ ಸಂಬಂಧಿಕರು ಹಿರಿಯ ನಾಗರಿಕರನ್ನು ಆರೈಕೆ ಮಾಡಬೇಕು. ಔಷಧಿ ಸೇರಿದಂತೆ ಅವರ ತಿಂಗಳ ಖರ್ಚಿಗೆ ಹಣ ನೀಡಬೇಕು. ಒಂದು ವೇಳೆ ಹಣ ನೀಡದೇ ಇದ್ದರೆ ಅಥವಾ ಆರೈಕೆಯಲ್ಲಿ ನಿರ್ಲಕ್ಷ್ಯ ತೋರಿದರೆ ಹಿರಿಯ ನಾಗರಿಕರ ಕಾಯ್ದೆಯ ಸೆಕ್ಷನ್ 9ರ ಅಡಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ದೂರು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು ಎಂದು ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ತಂದೆ ತಾಯಿಯಿಂದ ಆಸ್ತಿ ಪಡೆದು ಅವರ ಆರೈಕೆ ಮಾಡದಿದ್ದರೆ ಸೆಕ್ಷನ್ 23ರಂತೆ ತಮ್ಮ ಮಕ್ಕಳ ಅಥವಾ ಸಂಬಂಧಿಕರ ಹೆಸರಿನಲ್ಲಿ ಬರೆದಿರುವ ವಿಲ್ ಅಥವಾ ದಾನಪತ್ರವನ್ನು ರದ್ದುಗೊಳಿಸಿ ಮರಳಿ ಪೋಷಕರ ಹೆಸರಿಗೆ ಮರುಸ್ಥಾಪಿಸಲು ಈ ಕಾಯ್ದೆಯಲ್ಲಿ ಅವಕಾಶ ಇದೆ. ಈ ಜವಾಬ್ದಾರಿಯನ್ನು ಉಪ ವಿಭಾಗಾಧಿಕಾರಿಯವರಿಗೆ ನೀಡಲಾಗಿದೆ. ಈಗಾಗಲೇ ಉಪ ವಿಭಾಗಾಧಿಕಾರಿಯವರ ಮುಂದೆ ಸಾವಿರಾರು ಪ್ರಕರಣಗಳಿವೆ. ಉಪ ವಿಭಾಗಾಧಿಕಾರಿಯವರ ಆದೇಶದ ಮೇರೆಗೆ ಜಿಲ್ಲಾಧಿಕಾರಿಯವರಿಗೆ ಮೇಲ್ಮನವಿ ಸಲ್ಲಿಸುವ ಅವಕಾಶ ನೀಡಲಾಗಿದೆ ಎಂದು ಕಂದಾಯ ಸಚಿವರು ಮಾಹಿತಿ ನೀಡಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ