ಮತ್ತೆ ಕರಾವಳಿಯಲ್ಲಿ ಹೈಕೋರ್ಟ್ ವಿಭಾಗೀಯ ಪೀಠದ ಕೂಗು: ಸದನದಲ್ಲಿ ಪ್ರಸ್ತಾಪಿಸಿದ ಶಾಸಕ

ಬೆಂಗಳೂರು: ಮೂರೂವರೆ ದಶಕಗಳ ಹಿಂದೆ ಆರಂಭವಾದ- ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯ ಹೋರಾಟ ಸದ್ದು ಮಾಡುತ್ತಲೇ ಇದ್ದು ಇದೀಗ ಮತ್ತೆ ಈ ಬಗ್ಗೆ ಪ್ರಸ್ತಾಪವಾಗಿದೆ.
ಹೌದು, ಮಂಗಳೂರಿನಲ್ಲಿ ಹೈಕೋರ್ಟ್ ವಿಭಾಗೀಯ ಪೀಠದ ಬೇಡಿಕೆ ಮತ್ತೆ ಮೊಳಗಿದೆ. ರಾಜ್ಯ ವಿಧಾನಸಭೆಯ ಅಧಿವೇಶನದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಈ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಮತ್ತೆ ಸದ್ದು ಮಾಡಿದ್ದಾರೆ.
ಹರೀಶ್ ಪೂಂಜ ಅವರು ತಮ್ಮ ಭಾಷಣದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಕ್ತ ಅನುದಾನ ನೀಡಬೇಕು ಹಾಗೂ ಮಲೆಕುಡಿಯರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬ ಒತ್ತಾಯವನ್ನೂ ಮಾಡಿದ್ದಾರೆ.
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಆಗಬೇಕು ಎಂಬ ಬೇಡಿಕೆ ಇದೆ. ಎರಡು ಜಿಲ್ಲೆಗಳ ಎಲ್ಲಾ ವಕೀಲರ ಜನಸಾಮಾನ್ಯರ ಆಪೇಕ್ಷೆಯೂ ಇದೇ ಆಗಿದೆ. ಹೀಗಾಗಿ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ವಿಧಾನಸಭೆಯಲ್ಲಿ ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.
ಕರಾವಳಿ ಮತ್ತು ಆಸುಪಾಸಿನ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಹಾಸನ, ಉತ್ತರ ಕನ್ನಡ ಭಾಗದಿಂದ ಬರೋಬ್ಬರಿ 10 ಸಾವಿರಕ್ಕೂ ಅಧಿಕ ಪ್ರಕರಣಗಳು ಹೈಕೋರ್ಟ್ನಲ್ಲಿವೆ. ಪ್ರಸ್ತುತ ಹೈಕೋರ್ಟ್ ಮೆಟ್ಟಿಲೇರಲು ದೊಡ್ಡ ಮೊತ್ತದ ಹಣ ಖರ್ಚಾಗುವುದು ಒಂದೆಡೆಯಾದರೆ, ಪ್ರತಿಸಲವೂ ಬೆಂಗಳೂರಿಗೆ ಹೋಗಿ ಬರುವ ಕಷ್ಟ, ಸುದೀರ್ಘ ಸಮಯ ತಗಲುವುದರಿಂದ ಜನಸಾಮಾನ್ಯರು ನ್ಯಾಯ ವಂಚಿತರಾಗುವ ಅಪಾಯ ಹೆಚ್ಚು. ಕರಾವಳಿಯಲ್ಲಿ ಸಂಚಾರಿ ಪೀಠ ಸ್ಥಾಪನೆಯಾದರೆ ಹಣ- ಸಮಯ ಎಲ್ಲವೂ ಉಳಿತಾಯವಾಗಲಿದೆ ಎನ್ನುತ್ತಾರೆ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ. ರಾಘವೇಂದ್ರ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ