20/05/2025

Law Guide Kannada

Online Guide

ಗೊಂದಲ ಬೇಡ: ಎ ಅಥವಾ ಬಿ ಖಾತಾ ಯಾವುದೇ ಖಾತೆ ಇದ್ರೂ ನೋಂದಣಿ ಮಾಡಬಹುದು: ಸ್ಪಷ್ಟನೆ

ಬೆಂಗಳೂರು: ರಾಜ್ಯದ ಯಾವುದೇ ಸ್ಥಳೀಯ ಸಂಸ್ಥೆ ಅಡಿ ಬರುವ ಸ್ಥಿರಾಸ್ತಿಗಳಿಗೆ ಅನ್ವಯಿಸುವಂತೆ ಕಡ್ಡಾಯವಾಗಿ ಇ-ಸ್ವತ್ತು ಅಥವಾ ಇ-ಆಸ್ತಿಯ ಇ-ತಂತ್ರಾಂಶದಿಂದ ಮಾಹಿತಿ ಪಡೆದು ಅದು ‘ಎ’ ಖಾತಾ ಅಥವಾ ‘ಬಿ’ ಖಾತಾ ಯಾವುದೇ ಇದ್ದರೂ ನೋಂದಣಿ ಮಾಡಬೇಕು ಎಂದು ನೋಂದಣಿ ಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಎ ಅಥವಾ ಬಿ ಖಾತಾದಲ್ಲಿ ಗೊಂದಲ ಉಂಟಾದ ಹಿನ್ನೆಲೆಯಲ್ಲ ಈ ಬಗ್ಗೆ ಮುದ್ರಾಂಕ ಆಯುಕ್ತ ದಯಾನಂದ್ ಅವರು ಸ್ಪಷ್ಟಿಕರಣ ನೀಡಿದ್ದು, ಎ ಅಥವಾ ಬಿ ಖಾತಾದಲ್ಲಿ ಯಾವುದೇ ಗೊಂದಲ ಬೇಡ. ಯಾವುದೇ ಖಾತೆ ಇದ್ದರೂ ನೋಂದಣಿ ಮಾಡಬಹುದು ಎಂದು ಹೇಳಿದ್ದಾರೆ.

ಇ-ತಂತ್ರಾಂಶದಡಿ ಇ-ಖಾತಾ ಹೊಂದಿರುವ ಬಿ-ಖಾತಾ ಆಸ್ತಿಗಳ ನೋಂದಣಿಗೆ ಕೆಲ ಉಪ ನೋಂದಣಾಧಿಕಾರಿಗಳು ಗೊಂದಲ ಸೃಷ್ಟಿಸುತ್ತಿದ್ದರು. ಎ-ಖಾತಾ ಆಸ್ತಿ ಆಗಿರಲಿ, ಬಿ-ಖಾತಾ ಆಸ್ತಿ ಆಗಿರಲಿ ಇ-ಆಸ್ತಿ ಅಥವಾ ಇ-ಸ್ವತ್ತಿನ ಇ-ತಂತ್ರಾಂಶದಡಿ ನೋಂದಣಿಯಾಗಿ ಇ-ಖಾತಾ ಪಡೆದಿದ್ದರೆ ನೋಂದಣಿ ಮಾಡಬೇಕು ಎಂಬರ್ಥದಲ್ಲಿ ಸೂಚನೆ ನೀಡಿದ್ದಾರೆ.

ಇ-ಸ್ವತ್ತು, ಇ-ಆಸ್ತಿಯ ಇ-ತಂತ್ರಾಂಶದಿಂದ ಮಾಹಿತಿ ಪಡೆದು ಎ ಖಾತಾ, ಬಿ ಖಾತಾ ಯಾವುದೇ ಇದ್ದರೂ ನೋಂದಣಿ ಪ್ರಕ್ರಿಯೆ ನಡೆಸಬೇಕು ಎಂದು ತಿಳಿಸಿದ್ದಾರೆ. ‘ಎ ಖಾತಾ ಅಥವಾ ಬಿ ಖಾತಾ ಇದ್ದರೂ ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಕೆಲವು ಉಪ ನೋಂದಣಾಧಿಕಾರಿಗಳು ಗೊಂದಲ ಸೃಷ್ಟಿಸುತ್ತಿದ್ದರು. ಇದಕ್ಕೆ ತೆರೆ ಎಳೆದ ದಯಾನಂದ್ ಅವರು, ಇ-ಸ್ವತ್ತು, ಇ-ಆಸ್ತಿಯ ಇ-ತಂತ್ರಾಂಶದಲ್ಲಿ ನೋಂದಣಿ ಆಗಿದ್ದರೆ ಅಂತಹ ಆಸ್ತಿಯನ್ನು ನೋಂದಣಿ ಮಾಡಬೇಕು ಎಂದು ಅವರು ಸೂಚನೆ ನೀಡಿದ್ದಾರೆ.

ಕೆಲವು ಉಪ ನೋಂದಣಾಧಿಕಾರಿಗಳು ಸುತ್ತೋಲೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಗೊಂದಲ ಸೃಷ್ಟಿಸಿದ್ದಾರೆ. ಅವರಿಗೆ ಕೇಂದ್ರ ಕಚೇರಿಯಿಂದ ತರಬೇತಿ ನೀಡಲಾಗಿದೆ. ಇನ್ನು ಮುಂದೆ ಇಂತಹ ಗೊಂದಲ, ಮಾಹಿತಿಯ ಕೊರತೆ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ಈ ಹಿಂದಿನ ಸರ್ಕಾರದ ಸುತ್ತೋಲೆ ಹಾಗೂ ಪತ್ರಗಳಲ್ಲಿ ಇರುವ ನಿರ್ದೇಶನವನ್ನು ಉಲ್ಲಂಘಿಸಿ ನೋಂದಣಿ ಮಾಡಲು ಅವಕಾಶ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ಸುತ್ತೋಲೆ ಮತ್ತು ಕೇಂದ್ರ ಕಚೇರಿಯ ನಿರ್ದೇಶನ ಉಲ್ಲಂಘಿಸಿ ಸ್ಥಿರಾಸ್ತಿಯನ್ನು ನೋಂದಣಿ ಮಾಡುವ ಉಪ ವಿಭಾಗಾಧಿಕಾರಿಗಳ ವಿರುದ್ಧ ಕೆಸಿಎಸ್ಆರ್ ನಿಯಮಗಳಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.