20/05/2025

Law Guide Kannada

Online Guide

ಮಗು ಪ್ರತಿರೋಧ ವ್ಯಕ್ತಪಡಿಸಿದರೂ ತಂದೆಗೆ ಭೇಟಿಯ ಹಕ್ಕು- ಮಹತ್ವದ ತೀರ್ಪು ಕೊಟ್ಟ ಸುಪ್ರೀಂಕೋರ್ಟ್

ನವದೆಹಲಿ: ವಿಚ್ಚೇದನ ಪ್ರಕರಣ ಹಿನ್ನೆಲೆ ಮಗು ಭೇಟಿಗೆ ನಿರಾಕರಿಸಿದರೂ, ತಂದೆಯ ಭೇಟಿಯ ಹಕ್ಕನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್, ಮಗುವಿನ ಭೇಟಿಗೆ ಅಡ್ಡಿಪಡಿಸಿದ ತಾಯಿಯ ನಡೆಯನ್ನು ತೀವ್ರವಾಗಿ ಖಂಡಿಸಿದೆ.

ತನ್ನ ಮಗುವನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅಹಸಾನುದ್ದೀನ್ ಅಮಾನುಲ್ಲಾಹ್ ಅವರನ್ನು ಒಳಗೊಂಡ ನ್ಯಾಯಪೀಠವು, ವಿಚ್ಛೇದನ ಪ್ರಕರಣಗಳಲ್ಲಿ ಮಗು ಯಾರ ಜೊತೆ ಇರಬೇಕು ಎಂಬ ವಿಚಾರದಲ್ಲಿ ತೀರ್ಪು ಪ್ರಕಟಿಸುವ ಮುನ್ನ ನ್ಯಾಯಾಲಯವು ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ಒತ್ತಿ ಹೇಳಿದೆ. ಅಲ್ಲದೆ ತಂದೆ ಭೇಟಿಗೆ ಮಗು ಪ್ರತಿರೋಧ ವ್ಯಕ್ತಪಡಿಸಿದ್ದರೂ, ಮಗುವನ್ನು ಭೇಟಿ ಮಾಡಲು ತಂದೆಗೆ ಅವಕಾಶ ನೀಡಿದೆ.

ಇದೇ ಸಂದರ್ಭದಲ್ಲಿ, ಇದು ಅಪ್ರಾಪ್ತ ವಯಸ್ಸಿನ ಬಾಲಕನ ಜೀವನಕ್ಕೆ ಸಂಬಂಧಿಸಿದ ವಿಚಾರ. ಬಾಲಕನಿಗೆ ತನಗೇನು ಸೂಕ್ತ ಎಂದು ನಿರ್ಧರಿಸುವ ಪ್ರಬುದ್ಧತೆ ಬಂದಿಲ್ಲ. ಮಗು ಇನ್ನೂ ಪ್ರಬುದ್ಧವಾಗಿಲ್ಲದ ಕಾರಣ, ತಂದೆಯ ಭೇಟಿ ಮಗುವಿನ ಬೆಳವಣಿಗೆಗೆ ಅಗತ್ಯ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?
ದಂಪತಿ ವಿವಾಹವಾದ 9 ವರ್ಷಗಳ ನಂತರ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದು, ಮಗು ತಾಯಿಯೊಟ್ಟಿಗೆ ನೆಲಸಿದೆ. 2012ರಲ್ಲಿ ವಿವಾಹವಾದ ದಂಪತಿಗಳಿಗೆ 2014ರಲ್ಲಿ ಮಗು ಜನಿಸಿತ್ತು. ನಂತರ ವಿಚ್ಛೇದನ ಪಡೆದ ದಂಪತಿಗಳ ಮಗುವಿನ ಪಾಲನೆ ಹಕ್ಕು ತಾಯಿಗೆ ನೀಡಲಾಗಿತ್ತು. ವಾರಾಂತ್ಯದಲ್ಲಿ ತಂದೆಗೆ ಮಗುವನ್ನು ಭೇಟಿಯಾಗಲು ಅವಕಾಶ ನೀಡಲಾಗಿತ್ತು. ಆದರೆ, ತಾಯಿ ಮಗುವನ್ನು ಭೇಟಿಯಾಗಲು ನಿರಾಕರಿಸಿದ್ದರಿಂದ ತಂದೆ ನ್ಯಾಯಾಲಯದ ಮೊರೆ ಹೋಗಿದ್ದರು.

ಕುಟುಂಬ ನ್ಯಾಯಾಲಯವು ಮಗು ಭೇಟಿಗೆ ತಂದೆಗೆ ಅವಕಾಶ ನೀಡಿತ್ತು. ಆದರೆ ಹೈಕೋರ್ಟ್ ಈ ತೀರ್ಪನ್ನು ವಜಾಗೊಳಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ವ್ಯಕ್ತಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಮಗುವಿನ ಭೇಟಿಗೆ ತಾಯಿ ಅಡ್ಡಿಪಡಿಸುತ್ತಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಮಗುವಿನ ಭವಿಷ್ಯಕ್ಕಾಗಿ ತಂದೆ-ತಾಯಿ ಇಬ್ಬರೂ ಜೊತೆಯಾಗಿರುವುದು ಅಗತ್ಯ ಎಂದು ನ್ಯಾಯಾಲಯ ಹೇಳಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.