20/05/2025

Law Guide Kannada

Online Guide

ಲೈಂಗಿಕ ದೌರ್ಜನ್ಯ; ಮಗು ಸಾಕ್ಷ್ಯ ನುಡಿಯುತ್ತಿಲ್ಲ ಎಂಬ ಅಂಶ ಆರೋಪಿಗೆ ಶಿಕ್ಷೆ ನೀಡದೇ ಇರುವುದಕ್ಕೆ ಆಧಾರವಾಗದು – ಸುಪ್ರೀಂಕೋರ್ಟ್

ನವದೆಹಲಿ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಗು ಸಾಕ್ಷ್ಯ ನುಡಿಯದಿದ್ದರೂ ಆರೋಪಿಗೆ ಶಿಕ್ಷೆ ವಿಧಿಸಬಹುದು. ಮಗು ಸಾಕ್ಷ್ಯ ನುಡಿಯುತ್ತಿಲ್ಲ ಎಂಬ ಅಂಶ ಆರೋಪಿಗೆ ಶಿಕ್ಷೆ ನೀಡದಿರುವುದಕ್ಕೆ ಆಧಾರವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ವಿಕ್ರಮನಾಥ ಹಾಗೂ ಸಂಜಯ್ ಕರೋಲ್ ಅವರು ಇದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ರಾಜಸ್ಥಾನದಲ್ಲಿ 1986ರ ಮಾರ್ಚ್ 3ರಂದು 1ನೇ ತರಗತಿ ಬಾಲಕಿ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ, ಚತ್ರಾ ಎಂಬ ವ್ಯಕ್ತಿ ದೋಷಿ ಎಂದು ಘೋಷಿಸಿದ್ದ ಟೊಂಕ್ ನ ನ್ಯಾಯಾಲಯ, ಆತನಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಚತ್ರಾ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ರಾಜಸ್ಥಾನ ಹೈಕೋರ್ಟ್, ಆತನಿಗೆ ವಿಧಿಸಿದ್ದ ಶಿಕ್ಷೆಯನ್ನು ರದ್ದುಪಡಿಸಿ 2013ರಲ್ಲಿ ತೀರ್ಪು ನೀಡಿತ್ತು.
ಹೈಕೋರ್ಟ್ನ ಈ ಆದೇಶ ಪ್ರಶ್ನಿಸಿ ರಾಜಸ್ಥಾನ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿ ಪುರಸ್ಕರಿಸಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠವು, ಹೈಕೋರ್ಟ್ ಆದೇಶ ರದ್ದುಪಡಿಸಿದೆ.

ಹಾಗೆಯೇ ಲೈಂಗಿಕ ದೌರ್ಜನ್ಯದಿಂದಾಗಿ ಆಘಾತಕ್ಕೆ ಒಳಗಾಗಿರುವ ಮಗು, ಕಣ್ಣೀರು ಹಾಕುವುದನ್ನು ಹೊರತುಪಡಿಸಿ ಬೇರೆ ಏನೂ ಸಾಕ್ಷ್ಯ ನುಡಿಯುತ್ತಿಲ್ಲ ಎಂಬ ಅಂಶವು ಆರೋಪಿಗೆ ಶಿಕ್ಷೆ ನೀಡದೇ ಇರುವುದಕ್ಕೆ ಆಧಾರವಾಗದು. ಇಂತಹ ಪ್ರಕರಣಗಳಲ್ಲಿ, ಲಭ್ಯವಿರುವ ವೈದ್ಯಕೀಯ ಹಾಗೂ ಸಾಂದರ್ಭಿಕ ಸಾಕ್ಷ್ಯಗಳೇ ಆರೋಪಿಯು ತಪ್ಪಿತಸ್ಥ ಎಂದು ಘೋಷಿಸಲು ಆಧಾರವಾಗುತ್ತವೆ. ‘ಸಂತ್ರಸ್ತ ಮಗುವಿನ ಹೇಳಿಕೆ ಇಲ್ಲದಿರುವ ಕಾರಣ, ತಪ್ಪಿತಸ್ಥ ವ್ಯಕ್ತಿಗೆ ಶಿಕ್ಷೆ ನೀಡಬಾರದು ಎಂಬಂತಹ ಯಾವುದೇ ಕಠಿಣ ನಿಯಮ ಇಲ್ಲ’ ಎಂದು ನ್ಯಾಯಪೀಠ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.