ಚೆಕ್ ಅಮಾನ್ಯ ಕೇಸ್: ಫಿರ್ಯಾದಿಗೆ ಸಮರ್ಪಕ ನ್ಯಾಯಯುತ ಪರಿಹಾರ ಖಾತ್ರಿ ಮಾಡುವಂತಿರಬೇಕು – ಹೈಕೋರ್ಟ್

ಪಂಜಾಬ್: ಚೆಕ್ ಅಮಾನ್ಯ ಪ್ರಕರಣಗಳಲ್ಲಿ ಆರೋಪಿಗೆ ವಿಧಿಸಲಾಗುವ ದಂಡವು ಫಿರ್ಯಾದಿಗೆ ಸಮರ್ಪಕ ನ್ಯಾಯಯುತ ಪರಿಹಾರ ಖಾತ್ರಿ ಮಾಡುವಂತಿರಬೇಕು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪು ನೀಡಿದೆ
ಈ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎನ್.ಎಸ್. ಶೆಖಾವತ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಚೆಕ್ ಅಮಾನ್ಯ ಪ್ರಕರಣಗಳಲ್ಲಿ ಆರೋಪಿಗೆ ವಿಧಿಸಲಾಗುವ ದಂಡವು ಫಿರ್ಯಾದಿಗೆ ಚೆಕ್ ಮೊತ್ತ ಹಾಗೂ ವಾರ್ಷಿಕ ಶೇಕಡಾ 6ರಷ್ಟು ಮೊತ್ತದ ಹಣವನ್ನು ಪರಿಹಾರವಾಗಿ ನೀಡುವಂತೆ ಇರಬೇಕು. ಈ ರೀತಿಯ ತೀರ್ಪನ್ನು ವಿಚಾರಣಾ ನ್ಯಾಯಾಲಯಗಳು ನೀಡುವಂತಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ಹಾಗೆಯೇ ವಿಚಾರಣಾ ನ್ಯಾಯಾಲಯ ನೀಡಿದ ತೀರ್ಪನ್ನು ಬದಿಗೆ ಸರಿಸಿ, ಪರಿಹಾರ ಮತ್ತು ಶಿಕ್ಷೆಯ ಪ್ರಮಾಣದ ಬಗ್ಗೆ ಮತ್ತೆ ಸಮರ್ಪಕ ನ್ಯಾಯಯುತ ತೀರ್ಮಾನ ಮಾಡುವಂತೆ ಸೂಚನೆ ನೀಡಿ ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಕಳುಹಿಸಿತು.
ಚೆಕ್ನ ದ್ವಿಗುಣ ಮೊತ್ತದಷ್ಟು ಪರಿಹಾರ ಮತ್ತು ಗರಿಷ್ಟ ಎರಡು ವರ್ಷಗಳ ಜೈಲು ವಾಸದ ಶಿಕ್ಷೆಯನ್ನು ನೀಡುವ ಅಧಿಕಾರವಿದ್ದರೂ ವಿಚಾರಣಾ ನ್ಯಾಯಾಲಯಗಳು ಈ ಅಧಿಕಾರವನ್ನು ಪ್ರಯೋಗಿಸಲು ಹಿಂದೇಟು ಹಾಕುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ನ್ಯಾಯಪೀಠ, ಫಿರ್ಯಾದುದಾರರು ವ್ಯವಹಾರದ ದಿನದಿಂದ ಪ್ರಕರಣ ದಾಖಲಿಸಿದ ಬಳಿಕ ಆ ಪ್ರಕರಣ ಇತ್ಯರ್ಥದವರೆಗೆ ಸಾಕಷ್ಟು ನೊಂದು ಹೋಗಿರುತ್ತಾರೆ. ಅವರಿಗೆ ಸೂಕ್ತ ಪರಿಹಾರ ಕಲ್ಪಿಸಿಕೊಡುವುದು ನ್ಯಾಯದಾನದ ಲಕ್ಷ್ಯವಾಗಿರಬೇಕು.
ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ತಪ್ಪಿತಸ್ಥ ಎಂದು ತೀರ್ಮಾನ ಮಾಡುವುದು ಮುಖ್ಯ. ಅದೇ ರೀತಿ. ಫಿರ್ಯಾದಿಗೆ ಸಮರ್ಪಕ ಪರಿಹಾರ ಮತ್ತು ಆರೋಪಿಗೆ ತಕ್ಕುದಾದ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಬೇಕು ಎಂದು ತೀರ್ಪು ನೀಡಿತು.
ಇದೇ ವೇಳೆ, ಸುಪ್ರೀಂ ಕೋರ್ಟ್ 2010ರಲ್ಲಿ ದಾಮೋದರ್ ಎಸ್. ಪ್ರಭು ಗಿs ಸಯ್ಯದ್ ಬಾಬಲಾಲ್ ಎಚ್. ಪ್ರಕರಣದಲ್ಲಿ ವಿಶ್ಲೇಷಿಸಿದಂತೆ, ಚೆಕ್ ಅಮಾನ್ಯ ಪ್ರಕರಣಗಳಲ್ಲಿ ಪರಿಹಾರದ ಮೊತ್ತವನ್ನು ನಿರ್ಧರಿಸುವುದು ಆರೋಪಿಗೆ ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸುವುದಕ್ಕಿಂತ ಹೆಚ್ಚಿನದಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಆರೋಪಿಯು ಫಿರ್ಯಾದಿಗೆ ಚೆಕ್ ಮೊತ್ತಕ್ಕೆ ಕನಿಷ್ಟ ಶೇ. 6ರಷ್ಟು ಬಡ್ಡಿ ಮೊತ್ತವಾದರೂ ನೀಡುವ ಹಾಗೆ ಪರಿಹಾರದ ಮೊತ್ತವನ್ನು ನಿರ್ಧರಿಸಬೇಕು ಎಂದು ನ್ಯಾಯಪೀಠ ತಿಳಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ