20/05/2025

Law Guide Kannada

Online Guide

ಅಪಘಾತ ಪ್ರಕರಣದಲ್ಲಿ DL ಇಲ್ಲದಿರುವುದು ನಿರ್ಲಕ್ಷ್ಯವಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ವ್ಯಕ್ತಿಯು ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡಿ ಅಪಘಾತವಾದರೆ ಅದು ನಿರ್ಲಕ್ಷ್ಯದಿಂದ ಆದ ಅಪಘಾತವೆಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ, ಕೆ. ವಿನೋದ್ ಚಂದ್ರನ್ ಅವರಿದ್ದ ನ್ಯಾಯಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಸ್ತುತ ಐಎಎಸ್ ಅಧಿಕಾರಿಯಾಗಿರುವ ಶ್ರೀ ಕೃಷ್ಣಕಾಂತ್ ಸಿಂಗ್ 1999ರ ನವೆಂಬರ್ ನಲ್ಲಿ ಲರ್ನಿಂಗ್ ಲೈಸೆನ್ಸ್ ಹೊಂದಿದ್ದ ವ್ಯಕ್ತಿಯೊಬ್ಬರ ಸ್ಕೂಟರ್ ಹಿಂಬದಿಯಲ್ಲಿ ಕುಳಿತು ಹೋಗುವಾಗ ಅಪಘಾತ ಸಂಭವಿಸಿತ್ತು. ಈ ವೇಳೆ ಶ್ರೀ ಕೃಷ್ಣಕಾಂತ್ ಸಿಂಗ್ ಅವರ ಕಾಲು ತುಂಡಾಗಿತ್ತು. ಈ ಪ್ರಕರಣದಲ್ಲಿ ವಿಮಾ ಕಂಪನಿ ಕೇವಲ 7.5 ಲಕ್ಷ ರೂ. ಪರಿಹಾರ ನೀಡಿತ್ತು.

ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಪೀಠ, ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು ಅಪರಾಧ. ಆದರೆ, ಅಪಘಾತ ಪ್ರಕರಣಗಳಲ್ಲಿ ನಿರ್ಲಕ್ಷ್ಯವಲ್ಲ. ಸ್ಕೂಟರ್ ಚಾಲಕನ ಬಳಿ ಲರ್ನಿಂಗ್ ಲೈಸೆನ್ಸ್ ಮಾತ್ರ ಇತ್ತು ಎನ್ನುವ ಅಂಶ ಸ್ಕೂಟರ್ ಚಾಲಕನ ಕಡೆಯಿಂದ ನಿರ್ಲಕ್ಷ್ಯ ಉಂಟಾಗಿದೆ ಎನ್ನುವ ತೀರ್ಮಾನಕ್ಕೆ ಬರಲು ಕಾರಣವಾಗುತ್ತದೆ ಎಂದು ನಾವು ಭಾವಿಸುವುದಿಲ್ಲ. ಲಾರಿ ಹಿಂಬದಿಗೆ ಸ್ಕೂಟರ್ ಡಿಕ್ಕಿ ಹೊಡೆದಿದೆ ಎಂದ ಮಾತ್ರಕ್ಕೆ ಸ್ಕೂಟರ್ ಚಾಲಕ ಜಾಗರೂಕನಾಗಿರಲಿಲ್ಲ ಎಂದು ಹೇಳಲಾಗದು.

ಈ ಪ್ರಕರಣದಲ್ಲಿ ಪೊಲೀಸರ ತನಿಖೆಯ ವೇಳೆ ಲಾರಿ ಚಾಲಕನ ನಿರ್ಲಕ್ಷತೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅಪಘಾತದಲ್ಲಿ ಕಾಲು ಕಳೆದುಕೊಂಡ ಕಕ್ಷಿದಾರರಿಗೆ 16 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.