19/05/2025

Law Guide Kannada

Online Guide

ರಾಜಕೀಯ ವಿಡಂಬನೆಗೆ ಕಾನೂನು ರಕ್ಷಣೆ ಇದೆ: ಹಾಸ್ಯ ಕಲಾವಿದ ಕುನಾಲ್ ಕಮ್ರಾಗೆ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು

ಚೆನ್ನೈ: ಮಹಾರಾಷ್ಟ್ರದಲ್ಲಿ ತಲ್ಲಣ ಎಬ್ಬಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮೂಲದ ಹಾಸ್ಯ ಕಲಾವಿದ (ಸ್ಯಾಂಡ್ ಅಪ್ ಕಮೀಡಿಯನ್) ಕುನಾಲ್ ಕಮ್ರಾ ಅವರಿಗೆ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ನೀಡಿ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.

ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಸುಂದರ್ ಮೋಹನ್ ಅವರಿದ್ದ ಏಕ ಸದಸ್ಯ ನ್ಯಾಯಪೀಠವು ಕುನಾಲ್ ಕಮ್ರಾ ಅವರಿಗೆ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ವಾಕ್ ಸ್ವಾತಂತ್ರದ ಭಾಗವಾಗಿ ಮಾಡಲಾಗುವ ರಾಜಕೀಯ ವಿಡಂಬನೆಗೆ ಕಾನೂನು ರಕ್ಷಣೆ ಇದೆ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಆರೋಪಿತರಾದ ಕುನಾಲ್ ಕಮಾ ಅವರು ತಮಿಳುನಾಡಿನ ವಿಲ್ಲುಪರಂ ಜಿಲ್ಲೆಯ ನಿವಾಸಿಯಾಗಿದ್ದಾರೆ. ಈ ಮಧ್ಯೆ ಶಾರುಖ್ ಖಾನ್ ಅಭಿನಯದ ಜನಪ್ರಿಯ ಹಿಂದಿ ಫಿಲ್ಡ್ “ದಿಲ್ ತೋ ಪಾಗಲ್ ಹೇ”ನ ಭೋಲಿ ಸಿ ಸೂರತ್ ಹಾಡನ್ನು ವಿಡಂಬನೆಯಲ್ಲಿ ಬಳಸಿ ಕುನಾಲ್ ಕಮ್ರಾ ಶಿವಸೇನೆಯ ಮನೋಹರ್ ಶಿಂಧೆಯನ್ನು ಅಣಕಿಸಿದ್ದರು. ದೇವೇಂದ್ರ ಫಡ್ನವಿಸ್ ಅವರ ಜೊತೆಗಿನ ಮೈತ್ರಿಗೆ ಮಾತಿನ ಬಾಣದ ಮೂಲಕ ತಿವಿದಿದ್ದರು.

ಬಳಿಕ ಕುನಾಲ್ ಕಮ್ರಾ ಅವರ ವಿರುದ್ಧ ಮುಂಬೈ ಸಹಿತ ಮಹಾರಾಷ್ಟ್ರದ ಹಲವೆಡೆ ಎಫ್ಐಆರ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಕಮ್ರಾ ಅವರು ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಆದರೆ, ಕಮಾ ತಮ್ಮ ಕಾರ್ಯಕ್ರಮದಲ್ಲಿ ಯಾವುದೇ ವ್ಯಕ್ತಿಯ ಹೆಸರನ್ನೂ ಉಚ್ಚರಿಸಿರಲಿಲ್ಲ. ಅವರಿಗೆ ಮತ್ತು ಅವರ ಮಾತುಗಳಿಗೆ ಅಭಿವ್ಯಕ್ತಿ ಸ್ವಾತಂತ್ರದ ಭಾಗವಾಗಿ ಕಾನೂನಿನಾತ್ಮಕ ರಕ್ಷಣೆ ಇದೆ ಎಂದು ಕುನಾಲ್ ಕಮ್ರಾ ಅವರ ಪರ ವಕೀಲರು ವಾದ ಮಂಡಿಸಿದ್ದರು.

ರಾಜಕೀಯ ಪಕ್ಷವೊಂದರ ಕಾರ್ಯಕರ್ತರಿಂದ ದೈಹಿಕ ಹಿಂಸೆ ಹಾಗೂ ಜೀವ ಬೆದರಿಕೆ ಇರುವುದರಿಂದ ಕಮಾ ಅವರಿಗೆ ಮಹಾರಾಷ್ಟ್ರದ ನ್ಯಾಯಾಲಯಗಳ ಮೆಟ್ಟಿಲೇರಲು ಆಗುತ್ತಿಲ್ಲ ಎಂಬುದನ್ನು ಕಮಾ ತಮ್ಮ ಅರ್ಜಿಯಲ್ಲಿ ಹೇಳಿದ್ದರು. ಇದಕ್ಕೆ ಪೂರಕವಾಗಿ ಹಲವು ಪತ್ರಿಕೆಗಳ ಸುದ್ದಿ ವರದಿಯನ್ನು ಹಾಜರುಪಡಿಸಿದ್ದರು. ಇದೀಗ ನ್ಯಾಯಾಲಯ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಏನಿದು ಟ್ರಾನ್ಸಿಟ್ ಜಾಮೀನು..?
ಯಾವುದೇ ವ್ಯಕ್ತಿಯ ವಿರುದ್ಧ ಬೇರೆ ರಾಜ್ಯದಲ್ಲಿ ಎಫ್ಐಆರ್ ದಾಖಲಾಗಿದ್ದರೆ, ಅಂತಹ ವ್ಯಕ್ತಿಯು ತನ್ನ ಸ್ವಂತ ರಾಜ್ಯದಲ್ಲಿ ಬಂಧನಪೂರ್ವ ಜಾಮೀನು ಪಡೆಯುವುದನ್ನು ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಎಂದು ಕರೆಯಲಾಗುತ್ತದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.