ಮೋಸದ ಉದ್ದೇಶವಿಲ್ಲದ ಸುಳ್ಳು ಭರವಸೆ ವೃತ್ತಿ ದುರ್ನಡತೆ ಅಲ್ಲ: ವಕೀಲರ ವಿರುದ್ದದ ಕೇಸ್ ರದ್ದುಪಡಿಸಿದ ಸುಪ್ರೀಂಕೋರ್ಟ್

ನವದೆಹಲಿ: ಮೋಸದ ಉದ್ದೇಶವಿಲ್ಲದ ಸುಳ್ಳು ಭರವಸೆ ವೃತ್ತಿ ದುರ್ನಡತೆ ಆಗುವುದಿಲ್ಲ. ಅಲ್ಲದೆ ಅದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ನ್ಯಾಯಪೀಠವು ವೃತ್ತಿಪರ ದುರ್ನಡತೆ, ಕಕ್ಷಿದಾರರಿಗೆ ಸುಳ್ಳು ಭರವಸೆಗಳು ಮತ್ತು ಆರ್ಥಿಕ ವಂಚನೆ ಕುರಿತು ವಕೀಲರೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಿ ತೀರ್ಪು ನೀಡಿದೆ.
ಪ್ರಕರಣದ ಒಂದನೇ ಎದುರುದಾರರು ವೃತ್ತಿಯಲ್ಲಿ ವಕೀಲರಾಗಿದ್ದು, ತಮ್ಮ ಕಕ್ಷಿದಾರರಿಗೆ ಪ್ರಕರಣವನ್ನು ಗೆಲ್ಲಿಸಿಕೊಡುವುದಾಗಿ ಸುಳ್ಳು ಭರವಸೆ ನೀಡಿ ದೊಡ್ಡ ಮೊತ್ತದ ಶುಲ್ಕವನ್ನು ಪಡೆದುಕೊಂಡಿದ್ದರು ಎಂದು ಆಪಾದಿಸಲಾಗಿತ್ತು. ಆರೋಪಿ ವಕೀಲರು ಎದುರುದಾರರ ಜೊತೆಗೆ ಶಾಮೀಲಾಗಿ ತಮ್ಮ ಪ್ರಕರಣಕ್ಕೆ ಹಿನ್ನಡೆಯಾಗಿದೆ. ಈ ಮೂಲಕ ಅವರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಮೇಲ್ಮನವಿದಾರರು ಆರೋಪಿಸಿದ್ದರು. ಅಲ್ಲದೆ ಪ್ರಕರಣದ ಸೋಲಿನ ಹಿನ್ನೆಲೆಯಲ್ಲಿ ಕಕ್ಷಿದಾರರ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ವಕೀಲರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420, 323, 506 ಮತ್ತು 109 ಅಡಿಯಲ್ಲಿ ವಂಚನೆಯ ಪ್ರಕರಣ ದಾಖಲಾಗಿತ್ತು.
ತಮ್ಮ ವಿರುದ್ದ ದಾಖಲಾದ ಎಫ್ ಐಆರ್ ರದ್ದು ಕೋರಿ ಆರೋಪಿ ವಕೀಲರು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ವಕೀಲರ ವಿರುದ್ಧದ ಪ್ರಕರಣವನ್ನು ಬಾಂಬೆ ಹೈಕೋರ್ಟ್ ರದ್ದುಪಡಿಸಿತ್ತು. ಇದರಿಂದ ಬಾಧಿತರಾದ ಮೇಲ್ಮನವಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಈ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, ವಕೀಲರ ವಿರುದ್ದದ ಎಫ್ಐಆರ್ ರದ್ದುಗೊಳಿಸಿದ್ದ ಬಾಂಬೆ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿ ಮೇಲ್ಮನವಿಯನ್ನು ತಿರಸ್ಕರಿಸಿತು. ಹಾಗೆಯೇ ಮೋಸ ಮಾಡುವ ಉದ್ದೇಶವಿಲ್ಲದೆ ಭರವಸೆ ನೀಡುವುದು ಕಾನೂನು ವೃತ್ತಿಯಲ್ಲಿ ಸೆಕ್ಷನ್ 420ರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ವಕೀಲರ ವಿರುದ್ಧದ ಎಫ್ ಐಆರ್ ರದ್ದು ಮಾಡಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ