19/05/2025

Law Guide Kannada

Online Guide

ಇನ್ಮುಂದೆ ಕಸ ಗುಡಿಸುವವರಿಗೆ ‘ಜಾಡಮಾಲಿ’ ಎನ್ನುವಂತಿಲ್ಲ..! ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ನಗರ ಮತ್ತು ಪಟ್ಟಣಗಳಲ್ಲಿ ಸ್ವಚ್ಛತೆಗಾಗಿ ತಮ್ಮ ಸೇವೆ ಸಲ್ಲಿಸುತ್ತಿರುವ ಸ್ವಚ್ಛತಾ ನೌಕರರ ಬಗ್ಗೆ ಇನ್ನುಮುಂದೆ ‘ಜಾಡಮಾಲಿ’ ಪದ ಬಳಸಬಾರದು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.

ಹೈಕೋರ್ಟ್ನ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ರಾಮಚಂದ್ರ ಹುದ್ದಾರ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ. ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ತಾವು ಕಳೆದ 14ರಿಂದ 34 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಸ್ವಚ್ಛತಾ ನೌಕರರಾಗಿ (ಸ್ವೀಪರ್ ಉದ್ಯೋಗ) ಸೇವೆ ಸಲ್ಲಿಸಿದ್ದು, ತಮ್ಮ ಸೇವೆ ಕಾಯಂಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ರಮೇಶ್ ಬಾಬು ಮತ್ತಿತರ ಸ್ವಚ್ಛತಾ ನೌಕರರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು, ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು ಇನ್ನು ಮುಂದೆ ಯಾವುದೇ ಕಡತ ದಾಖಲೆಗಳಲ್ಲಿ ಸ್ವೀಪರ್, ಕಸ ಗುಡಿಸುವವರಿಗೆ ಜಾಡಮಾಲಿ ಎಂಬ ಪದ ಬಳಸುವಂತಿಲ್ಲ ಎಂದು ತಿಳಿಸಿದೆ. ಕಸ ಗುಡಿಸುವವರಿಗೆ “ಜಾಡಮಾಲಿ” ಎಂದು ಸಂಬೋಧಿಸುವುದನ್ನು ಮತ್ತು ಆ ಪದ ಬಳಕೆ ಮಾಡುವುದನ್ನು ನಿಷೇಧಿಸಿ ಮಾಡಿ ಆದೇಶಿಸಿದೆ.

ಈ ರೀತಿಯ ಪದಗಳನ್ನು ಕೇಳಿದರೆ ನೋವಾಗುತ್ತದೆ. ಇವು ಸಂತೋಷ ತರಿಸುವಂತಹ ಪದನಾಮಗಳು (ಡಿಸಿಗ್ನೇಷನ್) ಅಲ್ಲ. ಹಾಗಾಗಿ, ಎಲ್ಲಾ ನಗರ ಮತ್ತು ಪಟ್ಟಣಗಳನ್ನು ಸ್ವಚ್ಛವಾಗಿ ಇಡುವ ಮೂಲಕ ಸ್ವಚ್ಛತಾ ನೌಕರರು ಸಮಾಜಕ್ಕೆ ಅಮೂಲ್ಯವಾದ ಸೇವೆ ಸಲ್ಲಿಸುತ್ತಾರೆ. ಅಂತಹ ಒಂದು ವರ್ಗದ ನೌಕರರನ್ನು ಉದ್ದೇಶಿಸಿ ಬಳಸುವ ಪದ ಗೌರವದಿಂದ ಕೂಡಿರಬೇಕು. ಹಾಗಾಗಿ, ಸರ್ಕಾರ ಇನ್ನು ಮುಂದೆ ಜಾಡಮಾಲಿ ಪದದ ಬದಲಾಗಿ ಸ್ವಚ್ಛತಾ ನೌಕರರು ಎಂಬುದಾಗಿಯೇ ಬಳಸುವುದು ಸೂಕ್ತ ಎಂದು ಪೀಠ ಸೂಚಿಸಿತು.

ಸರ್ಕಾರ ಜಾಡಮಾಲಿ ಪದ ಬಳಸುತ್ತಿರುವುದು ಸರಿಯಲ್ಲ. ಆದ್ದರಿಂದ ಅದಕ್ಕೆ ಪರ್ಯಾಯವಾಗಿ ಸ್ವಚ್ಚತಾ ಕಾರ್ಮಿಕ ಎಂಬುದನ್ನು ಬಳಸುವಂತೆ ನ್ಯಾಯಪೀಠಕ್ಕೆ ಹೆಚ್ಚುವರಿ ಅಡ್ಡಕೇಟ್ ಜನರಲ್ ಅಹ್ಮದ್ ಅವರು ಕೋರಿಕೊಂಡಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.