ಆಸ್ತಿ ಮಾರಿದ ವಿಷಯ ಮುಚ್ಚಿಟ್ಟು ಮತ್ತೆ ಹಕ್ಕು ಕೇಳಿದ ಕುಟುಂಬ: ಹೈಕೋರ್ಟ್ ನಿಂದ ಬಿತ್ತು ದಂಡ

ಬೆಂಗಳೂರು: ಸರ್ಕಾರದಿಂದ ಮಂಜೂರಾಗಿದ್ದ ಜಮೀನನ್ನು ಮಾರಿದ ಬಳಿಕವೂ ಅದನ್ನು ಮುಚ್ಚಿಟ್ಟು ಮತ್ತೆ ಹಕ್ಕು ಪುನರ್ ಸ್ಥಾಪಿಸಿ ಆದೇಶಿಸಲು ಕೋರಿದ್ದ ಪರಿಶಿಷ್ಟ ವರ್ಗದ ಕುಟುಂಬಕ್ಕೆ ಹೈಕೋರ್ಟ್ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಅವರ ನೇತೃತ್ವದ ನ್ಯಾಯಪೀಠವು ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರದ ಮೃತ ನಿವಾಸಿ ವೆಂಕಟಸ್ವಾಮಿ ಅವರ ವಾರಸುದಾರರಿಗೆ ದಂಡ ವಿಧಿಸಿ ಆದೇಶಿಸಿದೆ. ದಂಡದ ಮೊತ್ತವನ್ನು 6 ವಾರಗಳಲ್ಲಿ ಕರ್ನಾಟಕ ರಾಜ್ಯ ವಕೀಲರ ಕಲ್ಯಾಣ ನಿಧಿಗೆ ಪಾವತಿಸಬೇಕು. ತಪ್ಪಿದರೆ ಹೈಕೋರ್ಟ್ ರಿಜಿಸ್ಟ್ರಾರ್ ಅವರು ಈ ಮೊತ್ತವನ್ನು ಮೇಲ್ಮನವಿದಾರರಿಂದ ವಸೂಲಿ ಮಾಡಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಆನೇಕಲ್ ತಾಲೂಕಿನ ಸರ್ಜಾಪುರ ಸಿಂಗೇನ ಅಗ್ರಹಾರ ಗ್ರಾಮದಲ್ಲಿ ಒಂದು ಎಕರೆ ಭೂಮಿಯನ್ನು 1982ರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಚಿಕ್ಕವೆಂಕಟಮ್ಮಗೆ ಸರ್ಕಾರ ಮಂಜೂರು ಮಾಡಿತ್ತು. ಈ ಜಮೀನನ್ನು 1996ರಲ್ಲಿ ಮಾರಾಟ ಮಾಡಿದ್ದರು. ಇದಾದ ಬಳಿಕ ಚಿಕ್ಕವೆಂಕಟಮ್ಮ ಪುತ್ರ ಜಮೀನನ್ನು ಪುನಃ ತಮ್ಮ ಹೆಸರಿಗೆ ಮರುಸ್ಥಾಪನೆಗೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಇದೀಗ ಚಿಕ್ಕವೆಂಕಟಮ್ಮ ಪುತ್ರನಿಗೆ 25 ಸಾವಿರ ರೂ. ದಂಡ ದಂಡ ವಿಧಿಸಿದೆ. ಸಾಮಾಜಿಕ ಮತ್ತು ಆರ್ಥಿಕವಾಗಿ ತುಳಿತಕ್ಕೊಳಗಾದವರಿಗೆ ಸಹಾಯ ಹಸ್ತ ನೀಡಲು ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲ ಜಮೀನುಗಳ ಪರಾಭಾರೆ ನಿಷೇಧ) ಕಾಯ್ದೆ (ಪಿಟಿಸಿಎಲ್) ಜಾರಿಗೊಳಿಸಲಾಗಿದೆ. ಪರಿಶಿಷ್ಟ ವರ್ಗದವರಿಗೆ ಮಂಜೂರಾದ ಜಮೀನು ಪರಾಭಾರೆ ನಿಷೇಧವಿದೆ. ಆದರೂ ಆ ಜಮೀನು ಕಬಳಿಸಲು ಶ್ರೀಮಂತರು ಹಾಗೂ ಪ್ರಬಲ ವರ್ಗದವರು ಮಂಜೂರಾತಿದಾರರ ಬಡತನ ಮತ್ತು ಅವಿದ್ಯಾವಂತಿಕೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಪಿಟಿಸಿಎಲ್ ಕಾಯ್ದೆಯಡಿ ಪರಿಹಾರ ಕೋರಿ ಸಲ್ಲಿಕೆಯಾಗುವ ಅರ್ಜಿಗಳ ಶೀಘ್ರ ವಿಲೇವಾರಿಗೆ ತಕ್ಷಣವೇ ಅಧಿಕಾರಿಗಳು ಮುಂದಾಗುವುದನ್ನು ಖಾತರಿ ಪಡಿಸಲು ಸರ್ಕಾರ ಅಗತ್ಯ ಕಾರ್ಯ ವಿಧಾನ ಜಾರಿಗೊಳಿಸಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ