20/05/2025

Law Guide Kannada

Online Guide

‘ಅತ್ಯಾಚಾರಕ್ಕೆ ಸಂತ್ರಸ್ತೆಯೇ ಹೊಣೆ’: ಆರೋಪಿಗೆ ಜಾಮೀನು ಮಂಜೂರು ಮಾಡಿ ವಿವಾದಿತ ತೀರ್ಪು ಕೊಟ್ಟ ಹೈಕೋರ್ಟ್

ಅಲಹಾಬಾದ್: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ವಿವಾದಿತ ತೀರ್ಪೊಂದನ್ನ ನೀಡಿ ಭಾರಿ ಸುದ್ದಿಯಾಗಿದೆ. ಹೌದು, ಕುಡಿತ ಮತ್ತಿನಲ್ಲಿ ಗೆಳೆಯನ ಜೊತೆ ಆತನ ಮನೆಗೆ ಯುವತಿ ತೆರಳಿದ್ದು ಸ್ವಯಂ ಅಪಾಯಕ್ಕೆ ಆಹ್ವಾನ ನೀಡಿದಂತೆ. ಇದು ಅತ್ಯಾಚಾರವಲ್ಲ, ಒಪ್ಪಿತ ಸೆಕ್ಸ್ ಎಂದು ಅಲಹಬಾದ್ ಹೈಕೋರ್ಟ್ ಅಭಿಪ್ರಾಯಿಸಿ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.
ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್ ಅವರು ಈ ವಿವಾದಿತ ತೀರ್ಪು ನೀಡಿದ್ದು, ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯನ್ನೇ ದೂಷಿಸಲಾಗಿದೆ. ಕುಡಿದ ಮತ್ತಿನಲ್ಲಿ ಸ್ವಯಂ ಪ್ರೇರಿತಳಾಗಿ ಸ್ನೇಹಿತನ ಜೊತೆಗೆ ಆತನ ಮನೆಗೆ ತೆರಳಿರುವುದು ಸ್ವಯಂ ಅಪಾಯಕ್ಕೆ ಆಹ್ವಾನ ನೀಡಿದಂತೆ. ಹಾಗಾಗಿ, ಅತ್ಯಾಚಾರಕ್ಕೆ ಸಂತ್ರಸ್ತೆಯೇ ಹೊಣೆ ಎಂದು ನ್ಯಾಯಪೀಠ ಹೇಳಿದೆ.
ಏನಿದು ಘಟನೆ

2024ರ ಡಿಸೆಂಬರ್ ನಲ್ಲಿ ದಿಲ್ಲಿಯ ರೆಸ್ಟೋರೆಂಟ್ ಗೆ ಸ್ನೇಹಿತರ ಜೊತೆಗೆ ಪಾರ್ಟಿಗೆ ತೆರಳಿದ್ದ ನೋಯ್ತಾ ಮೂಲದ ಸ್ನಾತಕೋತ್ತರ ವಿದ್ಯಾರ್ಥಿನಿ ಮೇಲೆ ಆಕೆಯ ಸ್ನೇಹಿತ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದನು. ಈ ಬಗ್ಗೆ ಆಕೆ ದೂರು ನೀಡಿದ ಹಿನ್ನೆಲೆಯಲ್ಲಿ 2024ರ ಡಿಸೆಂಬರ್ 11ರಂದು ಆರೋಪಿಯನ್ನು ಬಂಧಿಸಲಾಗಿತ್ತು. ವಿಚಾರಣಾ ನ್ಯಾಯಾಲಯ ಜಾಮೀನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿ ಜಾಮೀನುಕೋರಿ ಅರ್ಜಿ ಸಲ್ಲಿಸಿದ್ದನು.

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಇದೊಂದು ಒಪ್ಪಿತ ಸೆಕ್ಸ್. ಇದು ಅತ್ಯಾಚಾರವಲ್ಲ, ಈ ಅತ್ಯಾಚಾರಕ್ಕೆ ಸಂತ್ರಸ್ತೆಯೇ ಹೊಣೆಯಾಗಿದ್ದಾರೆ. ಅಪರಾಧದ ಸ್ವರೂಪ, ಸಾಕ್ಷ್ಯಗಳು, ಆರೋಪಿಯ ಭಾಗೀದಾರಿಕೆ ಮತ್ತು ವಕೀಲರ ವಾದ-ಪ್ರತಿವಾದ ಗಮನಿಸಿದಾಗ ಕುಡಿದ ನಶೆಯಲ್ಲಿ ಇದ್ದ ಆಕೆ ತನ್ನ ಸ್ನೇಹಿತನ ಮನೆಗೆ ಹೋಗುವ ಮೂಲಕ ಸ್ವಯಂ ತೊಂದರೆಯನ್ನು ಆಹ್ವಾನಿಸಿಕೊಂಡಿದ್ದಾರೆ ಎಂದು ತಿಳಿಸಿ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.