19/05/2025

Law Guide Kannada

Online Guide

ಇತಿಹಾಸ ಪುಟ ಸೇರಿದ ಮಂಗಳೂರಿನ ಮೊದಲ ತಾರಾ ಹೋಟೆಲ್ ‘ಮೋತಿ ಮಹಲ್’: ಇನ್ನು ನೆನಪು ಮಾತ್ರ..!

ಮಂಗಳೂರು: ಕಡಲನಗರಿ ಮಂಗಳೂರಿನ ಮೊತ್ತ ಮೊದಲ ಬಹುಮಹಡಿ, ಪ್ರತಿಷ್ಠಿತ ಐಷಾರಾಮಿ ಹೋಟೆಲ್ ಎಂಬ ಹಿರಿಮೆಯುಳ್ಳ, ತಾರಾ ಹೋಟೆಲ್ ಮೋತಿ ಮಹಲ್ ಇತಿಹಾಸ ಪುಟ ಸೇರಿದೆ.

1983ರಲ್ಲಿ ಆರಂಭವಾದ ಫೈವ್ ಸ್ಟಾರ್ ಹೋಟೆಲ್ ಮೋತಿ ಮಹಲ್ ಶೀಘ್ರ ಕಾರ್ಯಾಚರಣೆ ನಿಲ್ಲಿಸಲಿದ್ದು, ಇನ್ನು ನೆನಪಿನಲ್ಲಷ್ಟೇ ಉಳಿಯಲಿದೆ. ಆರು ದಶಕಗಳ ಕಾಲ ಮಂಗಳೂರಿನ ಹೃದಯ ಬಡಿತದಂತೆ ಇದ್ದ, ಹಂಪನಕಟ್ಟೆಯ ಹೆಮ್ಮೆಯಾಗಿದ್ದ ಮೋತಿ ಮಹಲ್ ಹೋಟೆಲ್ ತನ್ನ ಬಾಗಿಲು ಮುಚ್ಚುತ್ತಿದೆ.

ಮೋತಿ ಮಹಲ್ ನ ಹೋಟಲಿನ ಮಾಲಕರಿಗೆ ಹಾಗೂ ಅದರ ಜಮೀನಿನ ಮೂಲ ಮಾಲೀಕರಿಗೆ ಕಳೆದ ಹಲವು ದಶಕಗಳಿಂದ ನಡೆಯುತ್ತಿದ್ದ ಸಿವಿಲ್ ವ್ಯಾಜ್ಯದ ತೀರ್ಪು ಸುಪ್ರೀಂ ಕೋರ್ಟ್ ನಲ್ಲಿ ಹೊರ ಬಿದ್ದಿದೆ. ತೀರ್ಪಿನ ಪ್ರಕಾರ, ಮೋತಿ ಮಹಲ್ ಅನ್ನು ಏಪ್ರಿಲ್ ಅಂತ್ಯದೊಳಗೆ ಅದರ ಜಮೀನಿನ ಮಾಲೀಕರಿಗೆ ಹಿಂದಿರುಗಿಸಬೇಕಾಗಿದ್ದು, 3 ಕೋಟಿ ರೂಪಾಯಿಗಳ ಪರಿಹಾರವನ್ನು ನೀಡಬೇಕಾಗಿದೆ.ಈ ಮೂಲಕ ದಶಕಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ಪರದೆ ಬಿದ್ದಿದೆ. ಬೆಳೆಯುತ್ತಿರುವ ಮಹಾನಗರ ಮಂಗಳೂರಿಗೆ ದೇಶ-ವಿದೇಶಗಳಿಂದ ಉದ್ಯಮಿಗಳು, ಪ್ರವಾಸಿಗರು, ಹಿರಿಯ ಅಧಿಕಾರಿಗಳು ಬಂದಾಗ ಅವರ ನಿರೀಕ್ಷೆಯ ಐಷಾರಾಮಿ ಹೋಟೆಲ್ ಬೇಕೆನ್ನುವ ಉದ್ದೇಶದೊಂದಿಗೆ ಉದ್ಯಮಿ ಎ.ಜೆ. ಶೆಟ್ಟಿ ಅವರು ಈ ಹೋಟೆಲ್ ಅನ್ನು ಸ್ಥಾಪಿಸಿದ್ದರು. ಆ ಕಾಲದ ಅತೀ ದೊಡ್ಡ ಹೋಟೆಲ್ ಇದಾಗಿತ್ತು. ಐಷಾರಾಮಿ ಸೂಟ್ ರೂಮುಗಳು, 100ಕ್ಕೂ ಅಧಿಕ ರೂಮುಗಳು, ಪಾರ್ಟಿ ಹಾಲ್ಗಳು, ಕನ್ವೆನ್ಶನ್ ಹಾಲ್ಗಳು ಇಲ್ಲಿವೆ.

ಮೋತಿ ಮಹಲ್ ಹೋಟೆಲ್ನ ಲೀಸ್ ಅವಧಿ ಮುಗಿದಿರುವುದು ಕಾರ್ಯಾಚರಣೆ ನಿಲ್ಲಿಸಲು ಕಾರಣ. ಈ ಬಗ್ಗೆ ಅನೇಕ ರೀತಿಯಲ್ಲಿ ಮಾತುಕತೆ ನಡೆಸಿದ ಬಳಿಕ ಹೋಟೆಲ್ ವ್ಯವಹಾರವನ್ನು ಸ್ಥಗಿತಗೊಳಿಸಿ ಮೂಲ ಆಡಳಿತ ಮಂಡಳಿಗೆ ಬಿಟ್ಟು ಕೊಡುವುದು ಅನಿವಾರ್ಯವಾಗಿದೆ.

ಮೋತಿ ಮಹಲ್ ಸ್ಥಾಪನೆಯಾಗಿದ್ದೇಗೆ..?
ನವ ಮಂಗಳೂರಿನ ನಿರ್ಮಾತೃ ಉಳ್ಳಾಲ ಶ್ರೀನಿವಾಸ ಮಲ್ಯರ ಪ್ರಯತ್ನದ ಫಲವಾಗಿ 1951ರಲ್ಲಿ ಮಂಗಳೂರಿಗೆ ವಿಮಾನ ನಿಲ್ದಾಣ ಮಂಜೂರಾಯಿತು. ಆ ಕಾಲದಲ್ಲಿ ಗಣ್ಯ ಅತಿಥಿಗಳ ವಾಸ್ತವ್ಯಕ್ಕೆ ಮಂಗಳೂರಿನಲ್ಲಿ ಸರ್ಕ್ಯೂಟ್ ಹೌಸ್ ಅಥವಾ ಪ್ರವಾಸಿ ಬಂಗಲೆ ನಿರ್ಮಾಣವಾಗಿರಲಿಲ್ಲ. ಪ್ರಧಾನಿ ನೆಹರು ಅವರು ಮಂಗಳೂರಿಗೆ ಭೇಟಿ ನೀಡಿದಾಗ ಶ್ರೀಮಂತ ಜಮೀನ್ದಾರರಾದ ಕದ್ರಿ ಶಿವಭಾಗ್ ನ ವಕೀಲರಾದ ನಯಂಪಳ್ಳಿ ಶಿವರಾವ್ ಅವರ ಬಂಗಲೆಯಲ್ಲಿ ಉಳಿದುಕೊಂಡಿದ್ದರು.

ಮಂಗಳೂರಿನಲ್ಲಿ ಪಂಚತಾರಾ ಸೌಲಭ್ಯಗಳುಳ್ಳ ಹೋಟೆಲ್ ನ ಅವಶ್ಯಕತೆಯನ್ನು ಮನಗಂಡ ಸಂಸದ ಮಲ್ಯರು ಮಂಗಳೂರಿನ ಪ್ರಸಿದ್ದ ಉದ್ಯಮಿ ಹಾಗೂ ಹೋಟೆಲ್ ತಾಜ್ ಮಹಲ್ ನ ಮಾಲಕರಾದ ಕುಡಿ ಶ್ರೀನಿವಾಸ ಶೆಣೈ ಅವರಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದಾಗ ಮಂಗಳೂರಿನಲ್ಲಿ ತಾರಾ ಸೌಲಭ್ಯಗಳುಳ್ಳ ಹೋಟೆಲ್ ಸ್ಥಾಪನೆಗೆ ಕುಡ್ಲಿ ಶ್ರೀನಿವಾಸ್ ಶೆಣೈ ಅವರು ಸಮ್ಮತಿ ಸೂಚಿಸಿದರು.

ಪಂಚತಾರಾ ಹೋಟೆಲ್ ನಿರ್ಮಾಣಕ್ಕೆ ಮಂಗಳೂರಿನ ಹೃದಯ ಭಾಗದಲ್ಲಿರುವ ಅತ್ತಾವರ ಗ್ರಾಮದ ಫನ್ನೀರಿನಲ್ಲಿರುವ ಮಿಲಾಗ್ರಿಸ್ ಚರ್ಚ್ ಮೂಲಿದಾರರಾಗಿರುವ ಹಾಗೂ ಸೈಂಟ್ ಆಂಟನಿ ಚಾರಿಟೇಬಲ್ ಟ್ರಸ್ಟ್ ಮೂಲಗೇಣಿ ಹಕ್ಕು ಹೊಂದಿರುವ ಸುಮಾರು 1.70 ಎಕರೆ ಭೂಮಿಯನ್ನು ಆಯ್ಕೆ ಮಾಡಲಾಯಿತು. ಸದರಿ ಭೂಮಿಯನ್ನು ಖಂಡಿತ ಕ್ರಯಕ್ಕೆ ಮಾರಾಟ ಮಾಡುವ ಹಕ್ಕು ಚರ್ಚ್ ಗೆ ಇಲ್ಲದೆ ಇದ್ದುದರಿಂದ 50 ವರ್ಷಗಳ ಅವಧಿಗೆ ಮಾಸಿಕ ರೂಪಾಯಿ 852.50 ಪಾವತಿಸುವ ನೆಲೆಯಲ್ಲಿ ದಿನಾಂಕ 23.9.1961 ರಂದು ನೋಂದಾಯಿತ ಟರ್ಮ್ ಲೀಸ್ ಡೀಡ್ ಪ್ರಕಾರ ಕುಡ್ಲಿ ಶ್ರೀನಿವಾಸ ಶೆಣೈ ಎಂಡ್ ಕಂಪನಿ ಸಂಸ್ಥೆಯವರು ಸದರಿ ಜಮೀನನ್ನು ತಮ್ಮ ಸ್ವಾಧೀನಕ್ಕೆ ಪಡೆದು ಅದರಲ್ಲಿ ಭವ್ಯವಾದ ಬಹುಮಹಡಿಗಳ ಐಶಾರಾಮಿ ಮೋತಿ ಮಹಲ್ ಎಂಬ ಹೆಸರಿನ ಚತುರ್ತಾರಾ ಹೋಟೆಲ್ ಅನ್ನು ನಿರ್ಮಿಸಿದರು ಹಾಗೂ ಮಧುವನ್ ಎಂಬ ಹೆಸರಿನ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದರು.

ಚ್ಯಾರಿಟೇಬಲ್ ಸಂಸ್ಥೆಗೆ ಐದು ವರ್ಷಗಳಿಗಿಂತ ಅಧಿಕ ಅವಧಿಗೆ ಲೀಸ್ ಡೀಡ್ ಮಾಡಿಕೊಡುವ ಅಧಿಕಾರ ಇಲ್ಲದೆ ಇರುವುದರಿಂದ ಭಾರತೀಯ ಟ್ರಸ್ಟ್ ಕಾಯ್ದೆಯ ಸೆಕ್ಷನ್ 36 ರಡಿ ಜಿಲ್ಲಾ ನ್ಯಾಯಾಲಯದ ಅನುಮತಿ ಪಡೆದು 50 ವರ್ಷಗಳ ಲೀಸ್ ಡೀಡ್ ಮಾಡಿಕೊಳ್ಳಲಾಯಿತು.

ಲೀಸ್ ಡೀಡ್ ಶರ್ತ ಪ್ರಕಾರ 50 ವರ್ಷಗಳ ಅವಧಿ ಮುಗಿದ ಮೇಲೆ ಐಶಾರಾಮಿ ಹೋಟೆಲ್ ಕಟ್ಟಡ ಸಹಿತ ಸಂಪೂರ್ಣ ಜಮೀನನ್ನು ಯಾವುದೇ ಪರಿಹಾರ ಮೊತ್ತ ಕೇಳದೆ ಮೂಲಗೇಣಿ ಮಾಲೀಕರ ವಶಕ್ಕೆ ಒಪ್ಪಿಸತಕ್ಕದ್ದಾಗಿತ್ತು. ಆದರೆ ಉಭಯ ಪಕ್ಷಕಾರರ ಸಮ್ಮತಿಯೊಂದಿಗೆ ಲೀಸ್ ಡೀಡ್ ನವೀಕರಣ ಮಾಡಲು ಅವಕಾಶವನ್ನು ಕಲ್ಪಿಸಲಾಗಿತ್ತು. ಹೋಟೆಲ್ ಮೋತಿ ಮಹಲ್ ನಲ್ಲಿ ಸುಮಾರು 110 ವಾಸ್ತವ್ಯದ ಐಷಾರಾಮಿ ಕೊಠಡಿಗಳು ಹಾಗೂ ಸಮಾರಂಭಗಳನ್ನು ನಡೆಸುವ ಸಭಾಂಗಣಗಳು, ಸ್ವಿಮ್ಮಿಂಗ್ ಪೂಲ್ ಮುಂತಾದ ಎಲ್ಲಾ ರೀತಿಯ ತಾರಾ ಸೌಲಭ್ಯಗಳಿದ್ದವು. ಹೋಟೆಲ್ ಮೂತಿ ಮಹಲನ್ನು ಸ್ಥಾಪಿಸಿದ ಬಳಿಕ ಸುಮಾರು 25 ವರ್ಷಗಳ ಕಾಲ ಮೆ. ಕುಡ್ಲಿ ಶ್ರೀನಿವಾಸ ಶೆಣೈ ಎಂಡ್ ಕಂಪನಿ ಸಂಸ್ಥೆಯು ಹೋಟೆಲ್ ಮೋತಿ ಮಹಲ್ ನ ವ್ಯವಹಾರಗಳನ್ನು ನಡೆಸಿಕೊಂಡು ಬಂದಿತ್ತು.

ದಿನಾಂಕ 2.3.1984 ರಂದು ಕುಡ್ಲಿ ಶ್ರೀನಿವಾಸ್ ಶೆಣೈ ಎಂಡ್ ಕಂಪನಿ ಸಂಸ್ಥೆಯು ಮೋತಿ ಮಹಲ್ ಹೋಟೆಲ್ ಕಟ್ಟಡ ಸಹಿತ ಜಮೀನಿನಲ್ಲಿರುವ ತನಗಿರುವ ಹಕ್ಕನ್ನು ಎ.ಜೆ. ಶೆಟ್ಟಿ ಅಂಡ್ ಕಂಪನಿ ಸಂಸ್ಥೆಗೆ ನೋಂದಾಯಿತ ದಾಖಲೆ ಮೂಲಕ ವರ್ಗಾಯಿಸಿತು.

ಲೀಸ್ ಡೀಡ್ ಶರ್ತ ಪ್ರಕಾರ ದಿನಾಂಕ 22.9.2011ರ ವರೆಗೆ ಎ.ಜೆ. ಶೆಟ್ಟಿ ಅಂಡ್ ಕಂಪನಿ ಸಂಸ್ಥೆಗೆ ಮೋತಿ ಮಹಲ್ ಹೋಟೆಲ್ ನಡೆಸುವ ಹಕ್ಕು ಪ್ರಾಪ್ತವಾಗಿತ್ತು. ಆನಂತರ ಯಾವುದೇ ಪರಿಹಾರ ಕೋರದೆ ಕಟ್ಟಡ ಸಹಿತ ಜಮೀನನ್ನು ಮೂಲ ಮಾಲಕರಿಗೆ ಒಪ್ಪಿಸಬೇಕಾಗಿತ್ತು.

ಲೀಸ್ ಡೀಡ್ ಶರ್ತ ಪ್ರಕಾರ ನವೀಕರಣಕ್ಕೆ ಅವಕಾಶವಿದ್ದುದರಿಂದ ಮುಂದಿನ 50 ವರ್ಷಗಳ ಕಾಲ ಮಾಸಿಕ ಹೆಚ್ಚುವರಿ ಬಾಡಿಗೆ ನಿಗದಿಪಡಿಸಿ ನವೀಕರಣ ಮಾಡಿಕೊಡಬೇಕೆಂದು ಕೋರಿ ಎ.ಜೆ. ಶೆಟ್ಟಿ ಅಂಡ್ ಕಂಪನಿ ಸಂಸ್ಥೆಯವರು ದಿನಾಂಕ 12.10.2009 ರಂದು ಮೂಲ ಮಾಲಕರಿಗೆ ಪತ್ರ ಬರೆದಿದ್ದರು. ಆದರೆ ಮೂಲ ಮಾಲಕರಾದ ಮಿಲಾಗ್ರಿಸ್ ಚರ್ಚ್ ಸದರಿ ಪ್ರಸ್ತಾವನೆಯನ್ನು ದಿನಾಂಕ 8.2.2010 ರಂದು ತಿರಸ್ಕರಿಸಿತು. ಹಾಗೂ ಲೀಸ್ ಡೀಡ್ ಶರ್ತ ಪ್ರಕಾರ ದಿನಾಂಕ 22.9.2011 ರಂದು ಹೋಟೆಲ್ ಕಟ್ಟಡದ ಸ್ವಾಧೀನತೆಯನ್ನು ತಮಗೆ ಒಪ್ಪಿಸಲು ಸೂಚಿಸಿದರು.

ಲೀಸ್ ಡೀಡ್ ಶರ್ತ ಪ್ರಕಾರ ಮೋತಿ ಮಹಲ್ ಹೋಟೆಲ್ ಕಟ್ಟಡದ ಸ್ವಾಧೀನವನ್ನು ತಮಗೆ ಬಿಟ್ಟುಕೊಡದ ಕಾರಣ ಸೈಂಟ್ ಆಂಟನಿಸ್ ಚಾರಿಟೇಬಲ್ ಟ್ರಸ್ಟ್ ನವರು ಜಮೀನು ಹಾಗೂ ಹೋಟೆಲ್ ಕಟ್ಟಡದ ಸ್ವಾಧೀನ ಕೋರಿ ಮಂಗಳೂರಿನ ಮಾನ್ಯ 3ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಒ.ಎಸ್. 144/2011 ನಂಬರ್ ದಾವೆಯನ್ನು ಹೂಡಿದರು. ಲೀಸ್ ಅವಧಿಯ ಬಳಿಕ ಸ್ವಾಧೀನವನ್ನು ಒಪ್ಪಿಸದೆ ಇರುವುದರಿಂದ ದಿನವೊಂದಕ್ಕೆ ರೂಪಾಯಿ ಒಂದು ಲಕ್ಷದಂತೆ ಲಾಭಾಂಶ ಉತ್ಪತ್ತಿಯನ್ನು ನೀಡುವಂತೆ ಆದೇಶ ನೀಡಬೇಕೆಂದು ಕೋರಿದರು.

ಮೊದಲನೆಯ ಪ್ರತಿವಾದಿಯಾಗಿ ಕುಡ್ಲಿ ಶ್ರೀನಿವಾಸ ಶೆಣೈ ಎಂಡ್ ಕಂಪನಿ ಸಂಸ್ಥೆಯನ್ನು ಹಾಗೂ ಎರಡನೆಯ ಪ್ರತಿವಾದಿಯಾಗಿ ಎ.ಜೆ. ಶೆಟ್ಟಿ ಅಂಡ್ ಕಂಪನಿ ಸಂಸ್ಥೆಯನ್ನು ದಾವೆಯಲ್ಲಿ ಪಕ್ಷಕಾರರನ್ನಾಗಿ ಮಾಡಲಾಯಿತು. ಸದರಿ ದಾವೆಯಲ್ಲಿ ಒಂದನೇ ಪ್ರತಿವಾದಿ ಹಾಜರಾಗದೆ ಏಕ ಪಕ್ಷೀಯರಾದರು. ಎರಡನೇ ಪ್ರತಿವಾದಿ ಪರ ವಕೀಲರು ಹಾಜರಾದರು.

ಲೀಸ್ ಡೀಡ್ ಶರ್ತ ಪ್ರಕಾರ ಗುತ್ತಿಗೆ ಅವಧಿಯನ್ನು ನವೀಕರಣ ಮಾಡಿಕೊಳ್ಳುವ ಅವಕಾಶ ಇರುವುದರಿಂದ ತಮಗೆ ಮುಂದಿನ ಅವಧಿಗೆ ನವೀಕರಣ ಮಾಡಿಕೊಡುವಂತೆ ಮೂಲ ಮಾಲಕರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಎ.ಜೆ. ಶೆಟ್ಟಿ ಅಂಡ್ ಕಂಪನಿ ಸಂಸ್ಥೆಯವರು ಮಂಗಳೂರಿನ ಮಾನ್ಯ 3ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಓ ಎಸ್ 162/2014 ನಂಬರ್ ದಾವೆಯನ್ನು ಹೂಡಿದರು.
ಮಂಗಳೂರಿನ ಮಾನ್ಯ 3ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯವು ಎರಡು ದಾವೆಗಳನ್ನು ಸೇರಿಸಿ ವಿಚಾರಣೆ ನಡೆಸಿತು. ಸೈಂಟ್ ಆಂಟನೀಸ್ ಚಾರಿಟೇಬಲ್ ಟ್ರಸ್ಟ್ ಪರವಾಗಿ ಈ ಕೆಳಗಿನ ವಾದ ಮಂಡಿಸಲಾಯಿತು. ಲೀಸ್ ಅವಧಿ ಮುಗಿದ ಮೇಲೆ 2ನೇ ಪ್ರತಿವಾದಿ ಹೋಟೆಲ್ ಕಟ್ಟಡ ಸಹಿತ ಜಮೀನನ್ನು ಯಾವುದೇ ಪರಿಹಾರ ಕೋರದೆ ಮೂಲ ಮಾಲಕರ ವಶಕ್ಕೆ ಒಪ್ಪಿಸತಕ್ಕಾಗಿದೆ.

ಈ ಅಂಶವನ್ನು 2ನೇ ಪ್ರತಿವಾದಿಯು ಅರಿತಿದ್ದು ಒಂದನೇ ಪ್ರತಿವಾದಿಯಿಂದ ಗುತ್ತಿಗೆ ಹಕ್ಕನ್ನು ವರ್ಗಾಯಿಸಿಕೊಂಡಿರುತ್ತಾರೆ. ಗುತ್ತಿಗೆ ಅವಧಿಯ ನವೀಕರಣವನ್ನು ಹಕ್ಕು ಎಂದು ಪ್ರತಿಪಾದಿಸುವಂತಿಲ್ಲ. ಎರಡನೇ ಪ್ರತಿವಾದಿಯು ಹೋಟೆಲ್ ವ್ಯವಹಾರದಿಂದ ಪ್ರತಿನಿತ್ಯ ಮೂರು ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಿದ್ದಾರೆ. ಪ್ರತಿವಾದಿಗಳು ಶ್ರೀಮಂತ ಪ್ರಭಾವಿಶಾಲಿ ವ್ಯಕ್ತಿಗಳಾಗಿದ್ದು ವಿವಿಧ ಕಡೆಗಳಲ್ಲಿ ಹಲವಾರು ಸ್ಥಿರಾಸ್ತಿ ಹೊಂದಿರುತ್ತಾರೆ.

ಎರಡನೇ ಪ್ರತಿವಾದಿಯು ಒಂದನೇ ಪ್ರತಿವಾದಿಯಿಂದ ಭೋಗ್ಯಕ್ಕೆ ಪಡೆಯುವ ಮೊದಲು ಮೂಲ ಮಾಲಕರಿಂದ ಅನುಮತಿ ಕೇಳಿಲ್ಲ. ಎರಡನೆಯ ಪ್ರತಿವಾದಿಯು ಕಟ್ಟಡಕ್ಕೆ ಹಾನಿ ಉಂಟು ಮಾಡಿದ್ದಾರೆ. ಆದುದರಿಂದ ದಾವೆಯಲ್ಲಿ ಕೋರಿದಂತೆ ತೀರ್ಪು ಮತ್ತು ಡಿಕ್ರಿಯನ್ನು ನೀಡಬೇಕಾಗಿ ಪ್ರಾರ್ಥಿಸಿದರು.

ಎರಡನೇ ಪ್ರತಿವಾದಿ ಎ.ಜೆ. ಶೆಟ್ಟಿ ಅಂಡ್ ಕಂಪನಿ ಸಂಸ್ಥೆಯ ಪರವಾಗಿ ಈ ಕೆಳಗಿನವಾದ ಮಂಡಿಸಲಾಯಿತು. ಲೀಸ್ ಡೀಡ್ ಶರ್ತ ಪ್ರಕಾರ ಗುತ್ತಿಗೆ ಅವಧಿಯನ್ನು ನವೀಕರಣ ಮಾಡಿಸಿಕೊಳ್ಳಲು ಎರಡನೇ ಪ್ರತಿವಾದಿ ಹಕ್ಕುಳ್ಳವರಾಗಿರುತ್ತಾರೆ. ಹಾಗೂ ನವೀಕರಣ ಮಾಡಿಕೊಡಲು ವಾದಿಯು ಬದ್ಧರಾಗಿರುತ್ತಾರೆ. ಗುತ್ತಿಗೆ ಪಡೆದ ಜಮೀನನಲ್ಲಿ ವಾದಿಯು ಹೋಟೆಲ್ ಕಟ್ಟಡವನ್ನು ನಿರ್ಮಿಸಿಲ್ಲ.
ಒಂದನೇ ಪ್ರತಿವಾದಿ ಮೆ. ಕುಡ್ಲಿ ಶ್ರೀನಿವಾಸ್ ಶೆಣೈ ಎಂಡ್ ಕಂಪನಿ ಸಂಸ್ಥೆಯು ಐಷಾರಾಮಿ ಹೋಟೆಲ್ ಅನ್ನು ನಿರ್ಮಿಸಿದ್ದರಿಂದ ದಿನವೊಂದಕ್ಕೆ 1 ಲಕ್ಷ ಲಾಭಾಂಶ ಉತ್ಪತ್ತಿ ಕೇಳಲು ವಾದಿಗೆ ಯಾವುದೇ ಹಕ್ಕು ಇರುವುದಿಲ್ಲ. ಲೀಸ್ ಡೀಡ್ ನಲ್ಲಿ ಒಂದನೇ ಪ್ರತಿವಾದಿಯು ತನ್ನ ಹಕ್ಕನ್ನು ಇತರರಿಗೆ ವರ್ಗಾಯಿಸಬಹುದೆಂಬ ಶರ್ತ ಇದ್ದುದರಿಂದ ಎರಡನೇ ಪ್ರತಿವಾದಿಯು ಭೋಗ್ಯಕ್ಕೆ ಪಡೆದಿರುತ್ತಾರೆ. ಆದುದರಿಂದ ಮುಂದಿನ ಐವತ್ತು ವರ್ಷಗಳ ಕಾಲ ಎರಡನೇ ಪ್ರತಿವಾದಿಗೆ ಗುತ್ತಿಗೆ ಅವಧಿಯನ್ನು ನವೀಕರಿಸಿ ನೀಡುವಂತೆ ವಾದಿಗೆ ನಿರ್ದೇಶಿಸಬೇಕೆಂದು ಪ್ರಾರ್ಥಿಸಿದರು.
ಉಭಯ ಪಕ್ಷಕಾರರ ವಾದವನ್ನು ಆಲಿಸಿದ ನ್ಯಾಯಾಲಯವು ಲೀಸ್ ಡೀಡ್ ಶರ್ತ ಪ್ರಕಾರ ಲೀಸ್ ಅವಧಿ ಮುಗಿದ ಮೇಲೆ ಯಾವುದೇ ರೀತಿಯ ಪರಿಹಾರ ಕೋರದೆ ಕಟ್ಟಡ ಸಹಿತ ಜಮೀನನ್ನು ಮೂಲ ಮಾಲಕರಿಗೆ ಮರಳಿಸತಕ್ಕದ್ದಾಗಿದೆ. ಉಭಯ ಪಕ್ಷಕಾರರು ಒಪ್ಪಿದ್ದಲ್ಲಿ ಮಾತ್ರ ಭೋಗ್ಯ/ಗುತ್ತಿಗೆ ಅವಧಿಯನ್ನು ನವೀಕರಿಸಬಹುದಾಗಿದೆ. ಮೂಲ ಮಾಲಕರು ನವೀಕರಣದ ಪ್ರಸ್ತಾವನೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿರುತ್ತಾರೆ. ಲೀಸ್ ಅವಧಿ ಮುಗಿದ ಬಳಿಕ ಲಾಭಾಂಶ ಉತ್ಪತ್ತಿ ಪಡೆಯಲು ವಾದಿಯು ಅರ್ಹರಾಗಿರುತ್ತಾರೆ ಎಂಬ ಅಂಶಗಳನ್ನು ಪರಿಗಣಿಸಿ ದಿನಾಂಕ 15.2.2018 ರಂದು ತೀರ್ಪು ನೀಡಿ ವಾದಿ ಸೈಂಟ್ ಆಂಟನೀಸ್ ಚಾರಿಟೇಬಲ್ ಟ್ರಸ್ಟ್ ಸಲ್ಲಿಸಿದ ದಾವೆಯನ್ನು ಪುರಸ್ಕರಿಸಿತು.

ಗುತ್ತಿಗೆ/ಭೋಗ್ಯ ಅವಧಿಯ ನವೀಕರಣ ಕೋರಿ ಎರಡನೇ ಪ್ರತಿವಾದಿ ಎಂ.ಜೆ. ಶೆಟ್ಟಿ ಅಂಡ್ ಕಂಪನಿ ಸಂಸ್ಥೆಯು ಸಲ್ಲಿಸಿದ ದಾವೆಯನ್ನು ತಿರಸ್ಕರಿಸಿತು. ತೀರ್ಪಿನ ದಿನಾಂಕದಿಂದ 30 ದಿನಗಳ ಒಳಗೆ ಸ್ವಾಧೀನವನ್ನು ವಾದಿಗೆ ಬಿಟ್ಟು ಕೊಡುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಿತು. ದಿನವೊಂದಕ್ಕೆ ರೂಪಾಯಿ 50,000ದಂತೆ ಲಾಭಾಂಶ ಉತ್ಪತ್ತಿಯನ್ನು ವಾದಿಗೆ ನೀಡುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಿತು.
ಮಾನ್ಯ ನ್ಯಾಯಾಲಯದ ತೀರ್ಪಿನಿಂದ ಭಾದಿತರಾದ ಉಭಯ ಪಕ್ಷಕಾರರು ಮಾನ್ಯ ಕರ್ನಾಟಕ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದರು. ಎ.ಜೆ. ಶೆಟ್ಟಿ ಅಂಡ್ ಕಂಪನಿ ಸಂಸ್ಥೆಯವರು ಸಲ್ಲಿಸಿದ ಮೇಲ್ಮನವಿ ಖಈಂ 525/2018 ಎಂದು ನೊಂದಾಯಿಸಲ್ಪಟ್ಟಿದ್ದು ಸೈಂಟ್ ಆಂಟನೀಸ್ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯವರು ಸಲ್ಲಿಸಿದ ಮೇಲ್ಮನವಿ ಖಈಂ 2328/2019 ಎಂದು ನೋಂದಾಯಿಸಲ್ಪಟ್ಟಿತು. ಲೀಸ್ ಡೀಡ್ ನವೀಕರಣ, ಲಾಭಾಂಶ ಉತ್ಪತ್ತಿಯನ್ನು ನೀಡುವ ಕುರಿತು ಉಭಯ ಪಕ್ಷಕಾರರ ವಾದವನ್ನು ಆಲಿಸಿದ ಮಾನ್ಯ ಕರ್ನಾಟಕ ಹೈಕೋರ್ಟ್ ನ ವಿಭಾಗೀಯ ಪೀಠವು ವಿಚಾರಣಾ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಮಧ್ಯ ಪ್ರವೇಶಿಸುವ ಯಾವುದೇ ಅಂಶಗಳು ಕಂಡುಬಾರದ ಹಿನ್ನೆಲೆಯಲ್ಲಿ ಮೇಲ್ಮನವಿಗಳನ್ನು ದಿನಾಂಕ 11.9.2024 ರಂದು ವಜಾಗೊಳಿಸಿತು. ತೀರ್ಪಿನ ದಿನಾಂಕದಿಂದ 60 ದಿನಗಳೊಳಗೆ ಕಟ್ಟಡ ಸಹಿತ ಜಮೀನನ್ನು ಮೂಲ ಮಾಲಕರಿಗೆ ಮರಳಿಸತಕ್ಕದ್ದು ಎಂದು ಹೈಕೋರ್ಟ್ ಆದೇಶಿಸಿತು.

ಸೈಂಟ್ ಅಂಟನೀಸ್ ಚಾರಿಟೇಬಲ್ ಟ್ರಸ್ಟ್ ಪರವಾಗಿ ವಕೀಲರಾದ ಶ್ರೀ ಎಂ.ಪಿ. ನೋರೋನಾ ಹಾಗೂ ಎ.ಜೆ. ಶೆಟ್ಟಿ, ಅಂಡ್ ಕಂಪನಿ ಸಂಸ್ಥೆಯ ಪರವಾಗಿ ವಕೀಲರಾದ ಶ್ರೀ ಎಮ್. ವಿ. ಶಂಕರ್ ಭಟ್ ಅವರು ಮಂಗಳೂರಿನ ವಿಚಾರಣಾ ನ್ಯಾಯಾಲಯದಲ್ಲಿ ವಾದಿಸಿದರು. ದಾವೆಯಲ್ಲಿ ಹಾಜರಾಗದ ಕಾರಣ ಮೆ. ಕುಡ್ಲಿ ಶ್ರೀನಿವಾಸ ಶೆಣೈ ಅಂಡ್ ಕಂಪನಿ ಸಂಸ್ಥೆಯನ್ನು ಏಕ ಪಕ್ಷೀಯ ಮಾಡಲಾಗಿತ್ತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.