20/05/2025

Law Guide Kannada

Online Guide

ಸುಪ್ರೀಂ ಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಬಿ.ಆರ್. ಗವಾಯಿ ನೇಮಕ.

ನವದೆಹಲಿ: ಸುಪ್ರೀಂ ಕೋರ್ಟ್ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ (CJI)) ಬಿ.ಆರ್. ಗವಾಯಿ ಅವರು ನೇಮಕಗೊಂಡಿದ್ದಾರೆ.

ಈಗಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಮೇ 13ರಂದು ನಿವೃತ್ತರಾಗಲಿದ್ದು, ಹೀಗಾಗಿ ಅವರು ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಹೆಸರನ್ನು ಶಿಫಾರಸು ಮಾಡಿದ್ದರು. ಸಿಜೆಐ ಖನ್ನಾ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ನ್ಯಾಯಮೂರ್ತಿ ಗವಾಯಿ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ. ಹಾಲಿ ಸಿಜೆಐ ಹಿರಿಯ ನ್ಯಾಯಾಧೀಶರನ್ನು ತಮ್ಮ ಉತ್ತರಾಧಿಕಾರಿಯಾಗಿ ಹೆಸರಿಸುವ ಸಂಪ್ರದಾಯದ ಪ್ರಕಾರ ಖನ್ನಾ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಮೆಮೊರಾಂಡಮ್ ಆಫ್ ಪ್ರೊಸೀಜರ್ ಪ್ರಕಾರ, ನಿವೃತ್ತಿಯ ಒಂದು ತಿಂಗಳ ಮೊದಲು ತಮ್ಮ ಉತ್ತರಾಧಿಕಾರಿಯನ್ನು ಹೆಸರಿಸುವಂತೆ ಕೇಂದ್ರ ಸರ್ಕಾರವು ನಿವೃತ್ತರಾಗಲಿರುವ ಸಿಜೆಐ ಅವರಿಗೆ ಮನವಿ ಮಾಡುತ್ತದೆ.

ನ್ಯಾ. ಭೂಷಣ್ ರಾಮಕೃಷ್ಣ ಗವಾಯಿ ಗವಾಯಿ (ಬಿ.ಆರ್.ಗವಾಯಿ) ಅವರು ಮೇ 14ರಂದು ಸರ್ವೋಚ್ಚ ನ್ಯಾಯಾಲಯದ 52ನೇ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ. ಸಂಜೀವ್ ಖನ್ನಾ ಅವರು ಸುಪ್ರೀಂಕೋರ್ಟ್ ಸಿಜೆಐ ಆಗಿ 2024ರಲ್ಲಿ ನೇಮಕಗೊಂಡಿದ್ದರು. ಇವರ ಕಾರ್ಯಾವಧಿ 6 ತಿಂಗಳಾಗಿತ್ತು. ಬಿ,ಆರ್ ಗವಾಯಿ ನವೆಂಬರ್ ನಲ್ಲಿ ನಿವೃತ್ತರಾಗಲಿದ್ದು ಇವರು ಸಹ 6 ತಿಂಗಳ ಕಾಲ ಸಿಜೆಐ ಆಗಿರಲಿದ್ದಾರೆ.

ಗವಾಯಿ ಈ ಹುದ್ದೆಗೆ ಏರಿದ 2ನೇ ದಲಿತ ಸಮುದಾಯದವರು ಎನಿಸಿಕೊಂಡಿದ್ದಾರೆ. 2007ರ ಜ. 14ರಿಂದ 2010ರ ತನಕ ಮುಖ್ಯ ನ್ಯಾಯಮೂರ್ತಿಯಾಗಿದ್ದ ಕೆ.ಜಿ.ಬಾಲಕೃಷ್ಣನ್ ಈ ಹುದ್ದೆಗೇರಿದ ಮೊದಲ ದಲಿತ ಸಮುದಾಯದವರು.

ಬಿ.ಆರ್.ಗವಾಯಿ ಅವರ ಜೀವನ, ವೃತ್ತಿಯಲ್ಲಿ ಬೆಳೆದು ಬಂದ ಹಾದಿ 1960ರ ನ. 24ರಂದು ಮಹಾರಾಷ್ಟ್ರದ ಅಮರಾವತಿಯಲ್ಲಿ ಜನಿಸಿದ ಬಿ.ಆರ್.ಗವಾಯಿ ಅವರು 1985ರಲ್ಲಿ ಅವರು ವಕೀಲರಾಗಿ ತಮ್ಮ ಕಾನೂನು ಸೇವೆ ಆರಂಭಿಸಿದರು. ಮಾಜಿ ಅಡ್ವೊಕೇಟ್ ಜನರಲ್ ಮತ್ತು ಮಹಾರಾಷ್ಟ್ರ ಹೈಕೋರ್ಟ್ ನ್ಯಾಯಾಧೀಶ ಬ್ಯಾರಿಸ್ಟರ್ ರಾಜಾ ಭೋಂಸ್ಲೆ ಅವರೊಂದಿಗೆ ವೃತ್ತಿ ಜೀವನ ಶುರು ಮಾಡಿದ ಇವರು, 1987ರಿಂದ 1990ರವರೆಗೆ ಬಾಂಬೆ ಹೈಕೋರ್ಟ್ನಲ್ಲಿ ಸ್ವತಂತ್ರವಾಗಿ ಅಭ್ಯಾಸ ನಡೆಸಿದರು. 2005ರ ನವೆಂಬರ್ 12ರಂದು ಇವರನ್ನು ಹೈಕೋರ್ಟ್ ನ ಖಾಯಂ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಯಿತು. ನಂತರ ಅವರು ಸುಪ್ರೀಂ ಕೋರ್ಟ್ಗೆ ಪದೋನ್ನತಿ ಪಡೆದು ಅಂದಿನಿಂದ, ಸುಪ್ರೀಂ ಕೋರ್ಟ್ನ ಹಲವಾರು ಸಾಂವಿಧಾನಿಕ ಪೀಠಗಳ ಭಾಗವಾಗಿ ಹಲವು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ.
ಬಿಆರ್ ಗವಾಯಿ 2003ರಲ್ಲಿ ಬಾಂಬೆ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು. ಜತೆಗೆ ನಾಗಪುರ, ಔರಂಗಾಬಾದ್, ಪಣಜಿ ಹೈಕೋರ್ಟ್ಗಳಲ್ಲಿಯೂ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದರು. ಅವರು 2005ರಲ್ಲಿ ಖಾಯಂ ನ್ಯಾಯಾಧೀಶರಾಗಿ ಮತ್ತು 2019ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ಪಡೆದರು.

ಆರ್ಟಿಕಲ್ 370 ರದ್ದು ತೀರ್ಪು ಸೇರಿ ಮಹತ್ವದ ಪ್ರಕರಣಗಳಲ್ಲಿ ತೀರ್ಪು ಕೊಟ್ಟಿದ್ದ ಬಿಆರ್ ಗವಾಯಿ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ಅನ್ನು ರದ್ದುಗೊಳಿಸುವ ಕೇಂದ್ರದ 2019ರ ನಿರ್ಧಾರವನ್ನು ಎತ್ತಿಹಿಡಿದ ಐವರು ನ್ಯಾಯಾಧೀಶರ ಪೀಠದಲ್ಲಿ ಬಿಆರ್ ಗವಾಯಿ ಸಹ ಇದ್ದರು . ಅಲ್ಲದೆ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದ್ದ ಐವರು ನ್ಯಾಯಮೂರ್ತಿಗಳ ಪೀಠದಲ್ಲಿಯೂ ಇದ್ದರು. ಕೇಂದ್ರ ಸರ್ಕಾರ 2016ರಲ್ಲಿ ತೆರೆದುಕೊಂಡಿದ್ದ ನೋಟು ಅಮಾನ್ಯೀಕರಣ ತೀರ್ಮಾನವನ್ನು ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್ನ ಪೀಠದ ಭಾಗವೂ ಆಗಿದ್ದರು ಬಿ.ಆರ್ ಗವಾಯಿ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.