ಬೇರೆ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಪತ್ನಿಯು ಪತಿಯಿಂದ ಜೀವನಾಂಶ ಭತ್ಯೆ ಪಡೆಯಲು ಅನರ್ಹ- ಹೈಕೋರ್ಟ್

ನವದೆಹಲಿ: ಪತಿಯಿಂದ ಬೇರೆಯಾಗಿ ವಾಸಿಸುವ ಮಹಿಳೆ ಬೇರೆ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರೆ ಜೀವನಾಂಶ ಭತ್ಯೆಗೆ ಪಡೆಯಲು ಅನರ್ಹ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹೈಕೋರ್ಟ್ ನ್ಯಾಯಮೂರ್ತಿ ಗಿರೀಶ್ ಕಠ್ಪಾಡಿಯಾ ಅವರ ಪೀಠವು ಈ ಆದೇಶ ಪ್ರಕಟಿಸಿದೆ. ಪತ್ನಿಗೆ ಮಧ್ಯಂತರ ನಿರ್ವಹಣಾ ಭತ್ಯೆಯಾಗಿ ಪ್ರತಿ ತಿಂಗಳು 10,000 ರೂ.ಗಳನ್ನು ಪಾವತಿಸಬೇಕೆಂದು ಸಂಬಂಧಿತ ಕುಟುಂಬ ನ್ಯಾಯಾಲಯವು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ಕೆಳ ನ್ಯಾಯಾಲಯದ ಆದೇಶವನ್ನು ನ್ಯಾಯಪೀಠ ರದ್ದುಗೊಳಿಸಿದ್ದು, ಪತಿಯಿಂದ ಪ್ರತ್ಯೇಕವಾಗಿ ವಾಸಿಸುವ ಮಹಿಳೆ ಬೇರೆ ಯಾವುದೇ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರೆ, ಆಕೆ ತನ್ನ ಪತಿಯಿಂದ ಜೀವನಾಂಶ ಭತ್ಯೆ ಪಡೆಯಲು ಅರ್ಹಳಾಗಿರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಪ್ರಕರಣದಲ್ಲಿ, ಪ್ರತಿವಾದಿ ಪತ್ನಿ ಬೇರೊಬ್ಬರೊಂದಿಗೆ ಸಂಬಂಧ ಹೊಂದಿದ್ದಾಳೆಂದು ಪ್ರಾಥಮಿಕ ಸಾಕ್ಷ್ಯವು ತೋರಿಸುತ್ತದೆ. ಪತಿ ಮಂಡಿಸಿದ ಸಂಗತಿಗಳ ಪ್ರಕಾರ, ಹೆಂಡತಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ. ಅಂತಹ ಪರಿಸ್ಥಿತಿಯಲ್ಲಿ, ಪತ್ನಿಗೆ ಮಧ್ಯಂತರ ನಿರ್ವಹಣಾ ಭತ್ಯೆ ನೀಡುವುದು ಸೂಕ್ತವಲ್ಲ. ಸಿಆರ್ಪಿಸಿಯ ಸೆಕ್ಷನ್ 125(4) ರ ಅಡಿಯಲ್ಲಿ, ಹೆಂಡತಿ ಇನ್ನೊಬ್ಬ ಪುರುಷನೊಂದಿಗೆ ದೈಹಿಕ ಸಂಬಂಧ ಹೊಂದಿದ್ದರೆ, ಅವಳು ತನ್ನ ಗಂಡನಿಂದ ಜೀವನಾಂಶ ಪಡೆಯಲು ಅರ್ಹಳಾಗಿರುವುದಿಲ್ಲ ಎಂದು ಕಾನೂನು ಹೇಳುತ್ತದೆ. ಈ ಪ್ರಕರಣದ ಪುರಾವೆಗಳು ಪತ್ನಿಗೆ ಬೇರೆ ಪುರುಷನೊಂದಿಗೆ ಅನೈತಿಕ ಸಂಬಂಧವಿದೆ ಎಂದು ತೋರಿಸುತ್ತವೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಪತಿಯು ತನ್ನ ಪತ್ನಿ ಬೇರೊಬ್ಬ ಪುರುಷನ ಜೊತೆಗಿನ ಅಕ್ರಮ ಸಂಬಂಧದ ಬಗ್ಗೆ ಪತಿ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಹೈಕೋರ್ಟ್ ಮುಂದೆ ಹಾಜರುಪಡಿಸಿದರು. ಕೆಳ ನ್ಯಾಯಾಲಯದ ಮುಂದೆಯೂ ಅದೇ ಸಾಕ್ಷ್ಯವನ್ನು ಮಂಡಿಸಿದ್ದೇನೆ ಎಂದು ಪತಿ ಹೇಳಿದರು. ಆದರೂ ಸಹ ಸಂಬಂಧಪಟ್ಟ ನ್ಯಾಯಾಲಯವು ಜೀವನಾಂಶ ಆದೇಶವನ್ನು ಹೊರಡಿಸಿತ್ತು. ಅಕ್ರಮ ಸಂಬಂಧದ ಪುರಾವೆಗಳನ್ನು ಕೆಳ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗಲೂ, ಅದು ಅದನ್ನು ಸ್ವೀಕರಿಸಲಿಲ್ಲ ಅಥವಾ ತಿರಸ್ಕರಿಸಲಿಲ್ಲ ಎಂದು ದಾಖಲೆಗಳು ತೋರಿಸುತ್ತವೆ ಎಂದು ಹೈಕೋರ್ಟ್ ಹೇಳಿದೆ, ಆದರೆ ಕೆಳ ನ್ಯಾಯಾಲಯವು ಈ ಪ್ರಮುಖ ಅಂಶದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು. ಅದರ ನಂತರವೇ ನಿರ್ವಹಣಾ ಭತ್ಯೆಯನ್ನು ನಿರ್ಧರಿಸಲಾಗುತ್ತದೆ. ಆದ್ದರಿಂದ, ಕೆಳ ನ್ಯಾಯಾಲಯವು ಈ ವಿಷಯವನ್ನು ಮತ್ತೊಮ್ಮೆ ಆಲಿಸಿ ತನ್ನ ನಿರ್ಧಾರವನ್ನು ನೀಡಬೇಕು ಎಂದು ನ್ಯಾಯಪೀಠ ಹೇಳಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ